ಮನೆ ಕಟ್ಟುವವರೇ ಹೆಚ್ಚಿರುವ ದಿನದಲ್ಲಿದೇಗುಲ ಕಟ್ಟುವವರು ಬೆರಳೆಣಿಕೆಯಲ್ಲಿ

ಕಲಬುರಗಿ:ಏ.8: ಮನೆ ಕಟ್ಟುವವರೇ ಹೆಚ್ಚಿರುವ ದಿನದಲ್ಲಿ ದೇಗುಲ ಕಟ್ಟುವವರು ಬೆರಳೆಣಿಕೆಯಲ್ಲಿರುತ್ತಾರೆ. ಆದರೆ, ದೇಗುಲ ನಿರ್ಮಾಣ ಕಾರ್ಯ ಮಾತ್ರ ಸುಲಭವಾಗಿ ನೆರವೇರುತ್ತದೆ. ಇದಕ್ಕೆ ದೈವಶಕ್ತಿಯ ಪ್ರೇರಣೆಯಿರುತ್ತದೆ ಎಂದವರು ಚಿನ್ಮಯಗಿರಿಯ ಶ್ರೀಗುರು ಮಹಾಂತೇಶ್ವರ ಮಠದ ಪೀಠಾಧಿಪತಿ ಪೂಜ್ಯಶ್ರೀ ಷ.ಬ್ರ. ವೀರ ಮಹಾಂತೇಶ್ವರ ಶಿವಾಚಾರ್ಯರು.
ಶನಿವಾರ 8ನೇ ದಿನದಂದು ಸಂಜೆ ಶ್ರೀ ಗುಡ್ಡಾಪೂರ ವರದಾನೇಶ್ವರಿ' ಪುರಾಣ ಹೇಳುತ್ತಾ, ದೇಗುಲ ಕಟ್ಟುವವರು ಕೇವಲ ನಿಮಿತ್ತವಾಗಿರುತ್ತಾರೆ. ಭಕ್ತಿ ಸಾಗರಕ್ಕೆ ಸಾವಿರಾರು ನದಿಗಳು ಬಂದು ಸೇರಿಕೊಳ್ಳುತ್ತವೆ. ಆ ಮೂಲಕ ದೇಗುಲ ಕಟ್ಟಿಸಿಕೊಳ್ಳುವ ಆರಾಧ್ಯ ದೈವ ಶ್ರೀ ಶಂಕರಲಿಂಗೇಶ್ವರ ಕಾರಣೀಕೃತರಾಗಿರುತ್ತಾರೆ ಎಂಬುದು ಮರೆಯುವಂತಿಲ್ಲ ಎಂದರು. 12ನೇ ಶತಮಾನದಲ್ಲಿ ಅಣ್ಣ ಬಸವಣ್ಣನವರು ಉಮ್ರಾಣಿಯ ಲಿಂಗಮ್ಮನವರಿಗೆ ಮುತ್ತೈದಿಯಾಗಲು ಮತ್ತು ದಾನೇಶ್ವರಿಯಾಗಿ ಆಶೀರ್ವಾದ ಪಡೆಯುತ್ತಿರಬೇಕಾದರೆ 1, 96ಸಾವಿರ ಅಮರಗಣಂಗಳಿಗೆ ದಾಸೋಹ ಮಾಡಬೇಕೆಂಬ ಆಶೆ ಪಡುತ್ತಾಳೆ. ಅದರಂತೆ, ಆಸೆ ಸಾಕಾರಗೊಳಿಸುತ್ತಾಳೆ. ಆದರೆ, ಪ್ರಸಾದ ಸ್ವೀಕರಿಸಿದ ಜಂಗಮರಿಗೆ ಕಾಣಿಕೆ ನೀಡಲು ಹೇಳುತ್ತಾರೆ. ಕೈಯಲ್ಲಿ ಕಾಸೇ ಇಲ್ಲದಿರುವಾಗ, ಪ್ರಸಾದ ಸ್ವೀಕರಿಸಿ ಹೊರಗಡೆ ಬರಲು ಕಾಣಿಕೆ ನೀಡುವುದಾಗಿ ಹೇಳುತ್ತಾಳೆ. ಕೈಯಲ್ಲಿ ಒಂದಿಷ್ಟು ಮಣ್ಣು, ಕಲ್ಲು ಹಿಡಿದು ಜಂಗಮರ ಕೈಗೆ ಅರ್ಪಿಸುತ್ತಾಳೆ. ಅದೇ ಕಲ್ಲು, ಮಣ್ಣು ಚಿನ್ನವಾಗಿ ಪರಿವರ್ತವಾಗುತ್ತದೆ. ಇದು ದಾನೇಶ್ವರಿ ಶಕ್ತಿ ಎಂದು ವಿವರಿಸುತ್ತಾರೆ. ಶರಣರೆಲ್ಲೂ ಗುರು-ಲಿಂಗ-ಜಂಗಮ-ಪ್ರಸಾದಕ್ಕೆ ಮಹತ್ವ ಕೊಟ್ಟಿದ್ದಾರೆ. ಅದರಂತೆ 18ನೇ ಶತಮಾನದಲ್ಲಿ ಕಲಬುರಗಿಯ ಶ್ರೀ ಶರಣಬಸವೇಶ್ವರರು ಕೂಡ ದಾಸೋಹಕ್ಕೆ ಮಹತ್ವ ಕೊಟ್ಟವರು. ಒಮ್ಮೆ ಕಾರ್ಯ ನಿಮಿತ್ತ ಮನೆ ಬಿಟ್ಟು ಹೊರಗೆ ಹೋಗಬೇಕಾದರೆ, ಯಾರಾದರೂ ಜಂಗಮರು ಭೀಕ್ಷೆಗೆ ಬರಬಹುದು ಸ್ವಲ್ಪ ಎಚ್ಚರದಿಂದ ಇರಲು ತುಂಬು ಗರ್ಭೀಣಿ ಮಹಾದೇವಿಯವರಿಗೆ ಹೇಳಿ ಹೋಗುತ್ತಾರೆ. ಪರಮಾತ್ಮನ ಪರೀಕ್ಷೆಯೋ ಏನೋ.. ಸಹಜವಾಗಿ ನಿದ್ರೆಗೆ ಜಾರುತ್ತಾಳೆ. ತಾಸಾದರೂ ಎಚ್ಚರಗೊಳ್ಳದೇ ಜಂಗಮನಿಗೆ ಭೀಕ್ಷೆ ನೀಡದರಿಂದ ಮಲಗಿರುವ ಮಹಾದೇವಿ ಗರ್ಭದ ಮೇಲೆ ಕೈಯಿರಿಸಿ, ಬೆಳೆಯುತ್ತಿರುವ ಮಗು, ಜನನವಾಗದೇ ಸಹಜ ಸ್ಥಿತಿಯಲ್ಲೇ ಇರುವಂತೆ ಶಾಪ ಹಾಕುತ್ತಾರೆ. 18 ತಿಂಗಳಾದರೂ, ಮಹಾದೇವಿಯವರಿಗೆ ಪ್ರಸವವಾಗದಿರುವುದರಿಂದ ಆತಂಕಕ್ಕೊಳಗಾಗುತ್ತಾಳೆ. ಮಹಾದೇವಿಯವರ ಆತಂಕ ನೋಡದೇ, ಶಾಪ ವಿಮೋಚನೆಗಾಗಿ ಶರಣರಲ್ಲಿ ಆ ಪರಮಾತ್ಮನೇ ಬಂದು ಶಾಪ ವಿಮೋಚನೆಗೆ ಕೋರುತ್ತಾರೆ. ಇದು ಶರಣರ ದಾಸೋಹ ತಪಶಕ್ತಿ ಎಂದು ತಿಳಿಸುತ್ತಾರೆ. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಚಿನ್ಮಯಗಿರಿಯ ಶ್ರೀ ಗುರು ಮಹಾಂತೇಶ್ವರ ಮಠದ ಹಿರಿಯ ಪೂಜ್ಯರಾದ ಶ್ರೀ ಷ.ಬ್ರ. ಸಿದ್ಧರಾಮ ಶಿವಾಚಾರ್ಯರು ವಹಿಸಿದ್ದರು. ಅತಿಥಿಗಳಾಗಿ ಮಾಜಿ ಶಾಸಕ ಅಲ್ಲಮ್‍ಪ್ರಭು ಪಾಟೀಲರು ಆಗಮಿಸಿ, ಸಭೆಯನ್ನುದ್ಧೇಶಿಸಿ ಮಾತನಾಡಿದರು. ಲೋಕಸಭಾ ಸದಸ್ಯ ಡಾ. ಉಮೇಶ ಜಾಧವ, ಬಿಜೆಪಿ ಮುಖಂಡರಾದ ಇಂದಿರಾಶಕ್ತಿ, ಜಿ.ಪಂ. ಸದಸ್ಯರಾಗಿರುವ ಶಿವರಾಜ ರದ್ದೇವಾಡಗಿ, ಗಣ್ಯರಾದ ಈರಣ್ಣ ಪಾಟೀಲ ದಿಕ್ಸಂಗಿ, ನಾಗರಾಜ ಗಂಧಿಗುಡಿ ಸೇರಿದಂತೆ ಅನೇಕರು ಆಗಮಿಸಿದರು. ವೇದಿಕೆ ಮೇಲೆ ಶರಣ ಸಿರಸಗಿಯ ಪೂಜ್ಯಶ್ರೀ ರುದ್ರಮುನಿ ದೇವರು ಉಪಸ್ಥಿತರಿದ್ದರು. ನ್ಯಾಯವಾದಿ ದೇವಿಂದ್ರಪ್ಪ ಎಕಲೂರು, ಮಹಾಂತೇಶ ಚೇಂಗಟಿ ನಿರೂಪಿಸಿದರು. ಇದೆಲ್ಲಕ್ಕೂ ನಂದೀಶ್ವರನಾಗಿರುವ ಕುಪೇಂದ್ರ ಬಿರಾಜದಾರ ಸೇರಿದಂತೆ ಅಪಾರ ಸಂಖ್ಯೆಯ ಭಕ್ತಕೋಟಿ ಜನರು ಸಾಕ್ಷಿಯಾಗಿದ್ದರು. ಸಂಗೀತ ಸೇವೆ ಸಿಂಧಗಿಯ ಸಂತೋಷ ಹರಸೂರಮಠ ನೇತೃತ್ವದ ಕಲಾ ಬಳಗದವರಿಂದ ನಡೆಯಿತು. ಇದೇ ಸಂದರ್ಭದಲ್ಲಿ ಕೆ.ಕೆ.ಆರ್.ಟಿ.ಸಿ. ಮಾಜಿ ನಿರ್ದೇಶಕ ಮಲ್ಲಿಕಾರ್ಜುನ ತಡಕಲ್, ಕೆ.ಜೆ.ವಿ.ನಾ. ಬಣಗಾರ ಸಮಾಜದ ಸದಸ್ಯರುಗಳಾದ ಡಾ. ರವೀಂದ್ರಕುಮಾರ ವಿ. ನಾಗಲಿಕರ್, ನಾಗೇಶ ಚ. ಹಂಪಾಗೋಳ ಹಾಗು ಯಾದಗಿರಿ ಎಎಸ್‍ಐ ವೈಜನಾಥ ಮಲ್ಕಪಗೋಳ ದಂಪತಿಗಳಿಗೆ ``ಶಂಕರ ಸಿರಿ’’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ದೇಗುಲ ನಿರ್ಮಾಣಕ್ಕೆ ಶರಣರ ದೇಣಿಗೆ ಚಿನ್ಮಯಗಿರಿಯ ಶ್ರೀ ಗುರು ಮಹಾಂತೇಶ್ವರ ಮಠದ ಪೂಜ್ಯರಾದ ಶ್ರೀ ಷ.ಬ್ರ. ವೀರಮಹಾಂತೇಶ್ವರ ಶಿವಾಚಾರ್ಯರು ಮತ್ತು ವಿಶ್ವ ಹಿಂದೂ ಪರಿಷತ್ ಕರ್ನಾಟಕ (ಉತ್ತರ ಪ್ರಾಂತ) ಅಧ್ಯಕ್ಷರೂ ಆಗಿರುವ ಶ್ರೀ ಶರಣಬಸವೇಶ್ವರ ಸಂಸ್ಥಾನದ ಕುಡಿ ಶ್ರೀ ಲಿಂಗರಾಜಪ್ಪ ಅಪ್ಪ ಅವರುಗಳೂ ಶ್ರೀ ಶಂಕರಲಿಂಗೇಶ್ವರ ದೇಗುಲ ನಿರ್ಮಾಣಕ್ಕೆ ಆಶೀರ್ವದಿಸಿ ದೇಣಿಗೆ ಸಮರ್ಪಿಸಿದರು. ರಾಮನ ಗುಡಿ ಕಟ್ಟಿದರೆ ಸಾಲದು ರಾಮ ರಾಜ್ಯ ಕಟ್ಟುವುದು ಮುಖ್ಯ ದೇಶದಲ್ಲಿ ಇದೀಗ ರಾಮನ ಗುಡಿ ಕಟ್ಟಿಯಾಯಿತು. ಅಷ್ಟಕ್ಕೆ ಸಾಲದು. ದೇಶದಲ್ಲಿ ರಾಮ ರಾಜ್ಯ ಕಟ್ಟಬೇಕಾಗಿದೆ. ಅದಕ್ಕಾಗಿ ಹಿಂದೂಗಳೆಲ್ಲ ಒಮ್ಮತದಿಂದ ಮತಚಲಾಯಿಸಬೇಕು ಎಂದು ಕರೆಕೊಟ್ಟವರು ವಿಶ್ವ ಹಿಂದೂ ಪರಿಷತ್ ಕರ್ನಾಟಕ (ಉತ್ತರ ಪ್ರಾಂತ)ದ ಅಧ್ಯಕ್ಷರೂ ಆಗಿರುವ ಕಲಬುರಗಿ ಶ್ರೀ ಶರಣಬಸವೇಶ್ವರ ಸಂಸ್ಥಾನದ ಕುಡಿ ಪೂಜ್ಯಶ್ರೀ ಲಿಂಗರಾಜಪ್ಪ ಅಪ್ಪ ನುಡಿದರು. ಅವೆಉ ಕಡಣಿಯಲ್ಲಿ ನಡೆದಶ್ರೀ ಗುಡ್ಡಾಪೂರ ದಾನೇಶ್ವರಿ’ ಪುರಾಣ ಕಾರ್ಯಕ್ರಮದ ಸಾನಿಧ್ಯವನ್ನು ವಹಿಸಿ ಮಾತನಾಡುತ್ತಾ, ಈ ಕಾರ್ಯಕ್ಕೆ ರಾಜಕೀಯ ಪ್ರವೇಶ ಮಾಡದೇ ಸಮಾಜ ಸೇವೆ ಮಾಡಬಹುದು ಎಂಬ ಕಾರಣಕ್ಕಾಗಿ ವಿಶ್ವ ಹಿಂದೂ ಪರಿಷತ್ ವಹಿಸಿಕೊಟ್ಟ ಹೊಣೆಗಾರಿಕೆ ನಿರ್ವಹಿಸುತ್ತಿದ್ದೇನೆ ಎಂದಿರುವ ಅವರು, ನಮಗೆ ಪಕ್ಷ, ವ್ಯಕ್ತಿ ಮುಖ್ಯ ಅಲ್ಲ. ಹಿಂದೂ ಅಭಿಮಾನಿಗಳೆಲ್ಲ ಒಂದಾಗಿ ಹಿಂದುತ್ವದ ಪರವಾಗಿ ಮತ ಚಲಾಯಿಸಿ ಎಂದು ಕರೆ ಕೊಟ್ಟರು.
ಬದುಕಿನಿಂದ ಶ್ರೇಷ್ಠರಾಗಬೇಕು :
ಶ್ರೀ ರುದ್ರಮುನಿ ದೇವರು ಕರೆ
ಹುಟ್ಟಿನಿಂದ ಯಾರು ಶ್ರೇಷ್ಠರಾಗಿರುವುದಿಲ್ಲ. ಅವರ ಬದುಕಿನಿಂದ ಶ್ರೇಷ್ಠತೆ ಲಭಿಸುತ್ತದೆ. ಆದ್ದರಿಂದ, ನಮ್ಮ ಬದುಕು ಇತರರಿಗೆ ಅನುಕರಣೀಯವಾಗುವಂತೆ ಬದುಕಬೇಕು ಎಂದು ಕರೆ ಕೊಟ್ಟವರು ಶರಣಸಿರಸಗಿಯ ಪೂಜ್ಯಶ್ರೀ ರುದ್ರಮುನಿ ದೇವರು.
ಅವರು ಪುರಾಣ ಆರಂಭಕ್ಕೂ ಮೊದಲು ಉಪದೇಶಾಮೃತ ಕೊಡುತ್ತಾ, ತೀರಾ ಇತ್ತೀಚಿಗೆ ಪದ್ಮಶ್ರೀ ಪ್ರಶಸ್ತಿ ಪುರಸ್ಕ್ರತ ಹರಕಲ ಹಜ್ಜಪ್ಪ ಕಿತ್ತಳೆ ಹಣ್ಣು ಮಾರಿ ಅಕ್ಷರ ದಾಸೋಹ ಮಾಡಿದ್ದಾರೆ. ಸಾಲು ಮರದ ತಿಮ್ಮಕ್ಕ ರಸ್ತೆ ಪಕ್ಕದಲ್ಲಿ ಸಾಲು ಮರಗಳು ಬೆಳೆಸಿ ನೆಲಕ್ಕೆ ನೆರಳಾದವಳು. ಅವರೇನು ಹೆಚ್ಚಿಗೆ ಓದಿಕೊಂಡವರಲ್ಲ. ಬದಲಾಗಿ ಓದುಗರಿಗೆ ವಸ್ತುವಾದವರು. ಆ ಮಾದರಿಯಲ್ಲಿ ಬದುಕು ಮಾಡಬೇಕೆಂದು ಹಿತವಚನ ನುಡಿದರು.