ಮನೆಯ ಹುಳುಕು ಮುಚ್ಚಿಕೊಳ್ಳಲು ಬಿಜೆಪಿ ರಾಜಕೀಯ: ಸಚಿವ ಕೃಷ್ಣ ಬೈರೇಗೌಡ

ಕಲಬುರಗಿ:ಜು.31: ಬಿಜೆಪಿಯವರು ತಮ್ಮ ಮನೆಯ ಹುಳಕನ್ನು ಮುಚ್ಚಿಕೊಳ್ಳಲು ರಾಜಕೀಯ ಬೆರೆಸುತ್ತಿದ್ದಾರೆ ಎಂದು ರಾಜ್ಯದ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಹೇಳಿದರು.
ಸೋಮವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯವರು ಸಂಪೂರ್ಣ ಹತಾಶರಾಗಿದ್ದಾರೆ. ನಮ್ಮ ಸರ್ಕಾರ ಜನರ ನಾಡಿ ಮಿಡಿತ ಅರಿತು ಕೆಲಸ ಮಾಡುತ್ತಿದೆ. ಅಧಿಕಾರ ಕಳೆದುಕೊಂಡಿರುವ ಬಿಜೆಪಿಯವರು ತಮ್ಮ ಮನೆಯಲ್ಲಿನ ಹುಳುಕನ್ನು ಸರಿಪಡಿಸಿಕೊಳ್ಳಲಾಗದೇ ರಾಜಕೀಯ ಬೆರೆಸುತ್ತಿದ್ದಾರೆ ಎಂದು ಕಿಡಿಕಾರಿದರು.
ಅತಿವೃಷ್ಟಿ ವಿಚಾರದಲ್ಲಿ ರಾಜ್ಯ ಸರ್ಕಾರವು ಸಂಪೂರ್ಣ ವಿಫಲವಾಗಿದೆ ಎಂಬ ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಟೀಕೆಗೆ ಪ್ರತಿಕ್ರಿಯಿಸಿದ ಸಚಿವರು, ನಮ್ಮ ಸರ್ಕಾರ ಜನಪರವಾಗಿ ಕಾರ್ಯನಿರ್ವಹಿಸುತ್ತಿದೆ. ಆದಾಗ್ಯೂ, ಬಿಜೆಪಿಯು ತನ್ನ ವೈಫಲ್ಯಗಳನ್ನು ಮರೆಮಚಿಕೊಳ್ಳಲು ಸರ್ಕಾರದ ವಿರುದ್ಧ ರಾಜಕೀಯ ಪ್ರೇರಿತ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ದೂರಿದರು.
ರಾಜ್ಯ ವಿಧಾನಸಭಾ ಚುನಾವಣೆ ಫಲಿತಾಂಶ ಪ್ರಕಟಗೊಂಡು ಎರಡೂವರೆ ತಿಂಗಳಾದರೂ ಸಹ ವಿಧಾನಸಭೆ ಹಾಗೂ ವಿಧಾನ ಪರಿಷತ್‍ನಲ್ಲಿ ಬಿಜೆಪಿಯು ವಿರೋಧ ಪಕ್ಷದ ನಾಯಕನಿಗೆ ಆಯ್ಕೆ ಮಾಡಲು ಆಗಿಲ್ಲ. ಅವರ ಮನೆಯ ಹುಳುಕನ್ನು ಮುಚ್ಚಿಕೊಳ್ಳಲು ಪ್ರಚಾರಕ್ಕೆ ಮುಂದಾಗಿದ್ದಾರೆ. ವಿರೋಧ ಪಕ್ಷದ ನಾಯಕ ಯಾರು ಎಂಬುದು ಜನ ಕೇಳುವುದಕ್ಕೆ ಮುಂದಾಗಿದ್ದಾರೆ. ಬಜೆಟ್ ಪಾಸ್ ಆದರೂ ಕೂಡ ವಿರೋಧ ಪಕ್ಷದ ನಾಯಕನ ಆಯ್ಕೆ ಮಾಡಿಲ್ಲ ಎಂದು ಅವರು ಲೇವಡಿ ಮಾಡಿದರು.
ಇಡೀ ಭಾರತದಲ್ಲಿಯೇ ಕರ್ನಾಟಕ ವಿಧಾನಮಂಡಲಕ್ಕೆ ಒಂದು ಒಳ್ಳೆಯ ಹೆಸರು ಇದೆ. ಆದಾಗ್ಯೂ, ರಾಜ್ಯ ವಿಧಾನ ಮಂಡಲದ ಅಧಿವೇಶನದಲ್ಲಿ ಹಾಗೂ ರಾಜ್ಯಪಾಲರು ಮಾಡಿದ ಭಾಷಣದ ವಂದನಾ ನಿರ್ಣಯದ ಮೇಲೆ ಚರ್ಚೆ ಮಾಡುವುದಕ್ಕೂ ಸಹ ಉಭಯ ಸದನಗಳಲ್ಲಿ ವಿರೋಧ ಪಕ್ಷದ ನಾಯಕರನ್ನು ಆಯ್ಕೆ ಮಾಡಲಾಗದ ಬಿಜೆಪಿ ಅಯೋಗ್ಯವಾಗಿದೆ. ಮೊದಲು ತನ್ನ ಹುಳುಕು ಸರಿಪಡಿಸಿಕೊಳ್ಳಲಿ ಎಂದರು.