ಮನೆಯ ಹಂತದಲ್ಲಿಯೇ ಕಸದ ವಿಂಗಡಣೆಗೆ ಮನವಿ


ಸಂಜೆವಾಣಿ ವಾರ್ತೆ
ಗಂಗಾವತಿ, ಸೆ.15 :  ತಾಲೂಕು ಪಂಚಾಯತಿ ಮಂಥನ ಸಭಾಂಗಣದಲ್ಲಿ ತಾಲೂಕು ಪಂಚಾಯತಿ ಗಂಗಾವತಿ, ಕನಕಗಿರಿ, ಕಾರಟಗಿ ವತಿಯಿಂದ ಸ್ವಚ್ಛ ಭಾರತ್ ಮಿಷನ್(ಗ್ರಾಮೀಣ) ಯೋಜನೆಯಡಿ ಆಯೋಜಿಸಿದ್ದ ಘನ ತ್ಯಾಜ್ಯ ನಿರ್ವಹಣೆಯ ಪ್ರಮಾಣಿತ ಕಾರ್ಯಾಚರಣೆಯ ವಿಧಾನ ಹಾಗೂ ಮೇಲುಸ್ತುವಾರಿ ಸಮಿತಿ ತರಬೇತಿ ಕಾರ್ಯಾಗಾರಕ್ಕೆ  ತಾ.ಪಂ ಸಹಾಯಕ ನಿರ್ದೇಶಕರಾದ ಮಹಾಂತಗೌಡ ಪಾಟೀಲ್ ಚಾಲನೆ ನೀಡಿದರು.
ಕುಷ್ಟಗಿ ತಾಪಂ ಸಹಾಯಕ ನಿರ್ದೇಶಕರು ಹಾಗೂ ಸಂಪನ್ಮೂಲ ವ್ಯಕ್ತಿಗಳಾದ ಹನುಮಂತಗೌಡ ಪೊಲೀಸ್ ಪಾಟೀಲ್ ಅವರು ಮಾತನಾಡಿ,  ಘನ ತ್ಯಾಜ್ಯ ವಿಲೇವಾರಿಯ ಮೇಲುಸ್ತುವಾರಿ ಸಮಿತಿಯ ಜವಾಬ್ದಾರಿ ಹಾಗೂ ಸ್ವಚ್ಛ ಸಂಕೀರ್ಣ ಘಟಕದ ಸರಿಯಾದ ನಿರ್ವಹಣೆಗೆ ಗ್ರಾಮ ಪಂಚಾಯತ ಹಾಗೂ ಜಿಪಿಎಲ್ ಎಫ್  ಒಕ್ಕೂಟಗಳ ನಡುವೆ ಸಹಭಾಗಿತ್ವ ಬಹು ಮುಖ್ಯವಾಗಿದೆ.  ಗ್ರಾಮ ಪಂಚಾಯತಗಳ ಅಧ್ಯಕ್ಷರು ಹಾಗೂ ಅಧಿಕಾರಿಗಳು ಮಹಿಳಾ ಒಕ್ಕೂಟಕ್ಕೆ ವಾಹನ ಒದಗಿಸಬೇಕು ಹಾಗೂ ವಿಂಗಡಣೆ ಕುರಿತು ಮಾರ್ಗದರ್ಶನ ಮಾಡಬೇಕು. ಸರಕಾರದ ಆದೇಶದ ಪಾಲನೆ ಮಾಡುವ ಕುರಿತು ಮಾಹಿತಿ ನೀಡಿದರು.
ಮನೆಯ ಹಂತದಲ್ಲಿಯೇ ಕಸದ ವಿಂಗಡಣೆ ಮಾಡಿ ಕೊಡುವಂತೆ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಕಸ ವಿಲೇವಾರಿ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಎಲ್ಲರ ಸಹಕಾರ ತುಂಬಾ ಮುಖ್ಯ ಎಂದರು.
ಕೊಪ್ಪಳ ತಾಪಂ ಸಹಾಯಕ ನಿರ್ದೇಶಕರು ಹಾಗೂ ಸಂಪನ್ಮೂಲ ವ್ಯಕ್ತಿಗಳಾದ ಮಹೇಶ್ ಎಚ್, ಜಿ.ಪಂ. ಎಸ್ ಬಿಎಂ ಸಮಾಲೋಚಕರಾದ ರಾಮಣ್ಣ, ಬಸಮ್ಮ ಅವರು ಘನತ್ಯಾಜ್ಯ ವಿಲೇವಾರಿ ಘಟಕದ ನಿರ್ವಹಣೆ ಹಾಗೂ ಸ್ವಚ್ಛ ವಾಹಿನಿಗಳ ಸದ್ಬಳಕೆ ಕುರಿತು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಕನಕಗಿರಿ ತಾಪಂ ಸಹಾಯಕ ನಿರ್ದೇಶಕರಾದ ವೀರಣ್ಣ ನಕ್ರಳ್ಳಿ, ಗಂಗಾವತಿ, ಕಾರಟಗಿ, ಕನಕಗಿರಿ ತಾಲೂಕಿನ ಎಲ್ಲ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು, ಗ್ರಾಪಂ ಅಧ್ಯಕ್ಷರು, ತಾಪಂ ವಿಷಯ ನಿರ್ವಾಹಕರು, ತಾಪಂ ಸಿಬ್ಬಂದಿಗಳು, ಸ್ವಸಹಾಯ ಸಂಘದ ಸದಸ್ಯರು ಉಪಸ್ಥಿತರಿದ್ದರು.