ಮನೆಯ ಗೋಡೆ ಕುಸಿದು ೧೧ ಕಾರ್ಮಿಕರು ಸಾವು

ಇಸ್ಲಮಾಬಾದ್, ಜು.೨೦- ಪಾಕಿಸ್ತಾನದ ವಿವಿಧೆಡೆ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಇಸ್ಲಮಾಬಾದ್ ಹೊರವಲಯದಲ್ಲಿ ಮನೆಯೊಂದರ ಗೋಡೆ ಕುಸಿದುಬಿದ್ದು ಕನಿಷ್ಟ ೧೧ ನಿರ್ಮಾಣ ಕಾರ್ಮಿಕರು ಮೃತಪಟ್ಟಿರುವುದಾಗಿ ಪೊಲೀಸರು ಹೇಳಿದ್ದಾರೆ.
ಇಸ್ಲಮಾಬಾದ್ ಹೊರವಲಯದಲ್ಲಿ ಸೇತುವೆ ನಿರ್ಮಾಣ ಕಾಮಗಾರಿ ನಡೆಸುತ್ತಿದ್ದ ಕಾರ್ಮಿಕರು ಭಾರೀ ಮಳೆಯ ಕಾರಣ ಸಮೀಪದಲ್ಲಿರುವ ಮನೆಯೊಂದರ ಬಳಿಯ ಟೆಂಟ್‌ನಲ್ಲಿ ಆಶ್ರಯ ಪಡೆದಿದ್ದರು. ಆ ಸಂದರ್ಭ ಶಿಥಿಲಗೊಂಡಿದ್ದ ಮನೆಯ ಗೋಡೆ ಅವರ ಮೇಲೆ ಉರುಳಿಬಿದ್ದಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಇತರ ಐದು ಮಂದಿ ಕಾರ್ಮಿಕರು ಗಾಯಗೊಂಡಿದ್ದು ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಈಗಾಗಲೇ ಭಾರತ ಹಾಗೂ ಪಾಕಿಸ್ತಾನದಲ್ಲಿ ಕಳೆದ ಹಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಜೀವ ಹಾನಿ ಸೇರಿದಂತೆ ಈಗಾಗಲೇ ಆಸ್ತಿ-ಪಾಸ್ತಿಗೆ ಅಪಾರ ನಷ್ಟ ಉಂಟಾಗಿದೆ. ಅಲ್ಲದೆ ಮಳೆಯ ಬಳಿಕ ಇದೀಗ ಕೆಲವು ಕಡೆಗಳಲ್ಲಿ ಭೂಕುಸಿತ ಕೂಡ ಸಂಭವಿಸುತ್ತಿದ್ದು, ಮಳೆಪೀಡಿತ ಪ್ರದೇಶಗಳಲ್ಲಿ ನಾಗರಿಕರು ಸಂಕಷ್ಟಕ್ಕೆ ಸಿಲುಕದ್ದಾರೆ. ಕಳೆದ ವರ್ಷ ಪಾಕಿಸ್ತಾನದಲ್ಲಿ ಸುರಿದ ಭಾರೀ ಮಳೆಗೆ ಸುಮಾರು ೧೭೦೦ಕ್ಕೂ ಹೆಚ್ಚು ನಾಗರಿಕರು ಮೃತಪಟ್ಟಿದ್ದರು.