ಮನೆಯ ಗೋಡೆ ಕುಸಿದು ಆಶಾ ಕಾರ್ಯಕರ್ತೆ ಸಾವು


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ:ಸೆ.7- ಮಳೆಯಿಂದಾಗಿ ಮನೆಯ ತಡೆಗೋಡೆ ಕುಸಿದು ಸ್ಥಳದಲ್ಲಿಯೇ ಆಶಾ ಕಾರ್ಯಕರ್ತೆ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಕಂಪ್ಲಿ ತಾಲೂಕಿನ ಎಮ್ಮಿಗನೂರು ಗ್ರಾಮದಲ್ಲಿ ನಿನ್ನೆ ರಾತ್ರಿ ಸಂಭವಿಸಿದೆ. ಪಕ್ಕದಲ್ಲಿಯೇ ಮಲಗಿದ್ದ ಇಬ್ಬರು ಮಕ್ಕಳು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮೃತಳು ಎಮ್ಮಿಗನೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಆಶಾಕಾರ್ತೆ ಉಮಾದೇವಿ(50). ಪಕ್ಕದಲ್ಲಿಯೇ ಮಲಗಿದ್ದ ಅವರ ಮಕ್ಕಳಾದ ಶ್ರೀಧರ್ ಮತ್ತು ದರ್ಶನ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕಳೆದ ಹಲವು ದಿನಗಳಿಂದ ಮಳೆ ಸುರಿದ ಪರಿಣಾಮ ಮನೆಯ ಗೋಡೆಯ ಬುನಾದಿಗೆ ನೀರು ಹೋಗಿತ್ತು. ಈ ಹಿನ್ನಲೆಯಲ್ಲಿ ಗೋಡೆ ಕುಸಿದಿದೆ ಎಂದು ಹೇಳಲಾಗುತ್ತಿದೆ.
ಉಮಾದೇವಿ ಅವರ ತಲೆಯ ಮೇಲೆ ಕಲ್ಲುಗಳು ಬಿದ್ದ ಪರಿಣಾಮ ಸ್ಥಳದಲ್ಲಿಯೇ ಅವರು ಮೃತಪಟ್ಟಿದ್ದಾಳೆ.
ಗೋಡೆ ಬಿದ್ದ ಸದ್ದಿಗೆ ಮಕ್ಕಳು ಎದ್ದಿದ್ದಾರೆ. ಸ್ಥಳೀಯರ ಸಹಾಯದಿಂದ ಗೋಡೆಯ ಅವಶೇಷಗಳಡಿ ಸಿಲುಕಿದ್ದ ತಾಯಿಯನ್ನು ರಕ್ಷಣೆ ಮಾಡುವುದರೊಳಗೆ ಮೃತ ಪಟ್ಟಿದ್ದಾಳೆಂದು ಸ್ಥಳೀಯರು ಹೇಳಿದ್ದಾರೆ.
ಮೃತ ಆಶಾ ಕಾರ್ಯಕರ್ತೆಗೆ ಮನೆ ಇಲ್ಲದ ಕಾರಣ ಗ್ರಾಮದ ನೀರಾವರಿ ಇಲಾಖೆಯ ಹಳೆಯ ಕಟ್ಟಡದಲ್ಲಿ ವಾಸ ಮಾಡುತ್ತಿದ್ದರು ಆ ಕಟ್ಟಡವೇ ಕುಸಿದು ಬಿದ್ದಿರುವುದು ಎಂದು ಹೇಳಲಾಗುತ್ತಿದೆ. ಕುರುಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.