ಮನೆಯೇ ಮೊದಲ ಪಾಠಶಾಲೆ

ರಾಯಚೂರು,ಮಾ.೨೩- ಶೈಕ್ಷಣಿಕ ಸಮಸ್ಯೆಗಳು ಮನೆಯಿಂದಲೆ ಪ್ರಾರಂಭವಾಗುತ್ತವೆ. ಮನೆಯೇ ಮೊದಲ ಪಾಠಶಾಲೆ ಎನ್ನುವ ಹಾಗೆ ಮನೆಯಲ್ಲಿ ಉತ್ತಮ ಪರಿಸರ ನಿರ್ಮಿಸಬೇಕು ಎಂದು ನವೋದಯ ಶಿಕ್ಷಣ ಸಂಸ್ಥೆಯ ಕುಲ ಸಚಿವರಾದ ಡಾ ಟಿ. ಶ್ರೀನಿವಾಸ ಹೇಳಿದರು.
ಅವರು ಇಂದು ನವೋದಯ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ರಾಯಚೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ನವೋದಯ ಶಿಕ್ಷಣ ಸಂಸ್ಥೆ ಸಹಯೋಗದಲ್ಲಿ ಜರುಗಿದ ದಿ. ಶಿವಮ್ಮ ಶಿವಶರಣಪ್ಪ ಕಳಸ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ ಭಾಗವಹಿಸಿ ಮಾತನಾಡಿದರು.
ಶೈಕ್ಷಣಿಕ ಕಲಿಕೆಯಲ್ಲಿ ಶಿಕ್ಷಕರ ಪಾತ್ರ ತುಂಬಾ ಮಹತ್ವದ್ದಾಗಿದೆ. ಶಿಕ್ಷಕರು ಒಳ್ಳೆಯ ಮನಸ್ಸಿನಿಂದ ನಿಷ್ಟೆಯಿಂದ ಪ್ರಾಮಾಣಿಕವಾಗಿ ಕಲಿಕೆಯಲ್ಲಿ ತೊಡಗಿಸಿಕೊಂಡರೆ ಉತ್ತಮ ಗುಣಮಟ್ಟದ ಶಿಕ್ಷಣ ಸಿಗುತ್ತದೆ. ಒಳ್ಳೆಯ ಶಾಲೆ ಅಂದರೆ ಕಟ್ಟಡ ಅಲ್ಲ, ಒಳ್ಳೆಯ ಶಿಕ್ಷಕರು, ಒಳ್ಳೆಯ ಶಿಕ್ಷಣ ಎಂದು ಹೇಳಿದರು. ಶಿಕ್ಷಣವು ತುಂಬಾ ಸಮಸ್ಯೆಗಳನ್ನು ಎದುರಿಸುತ್ತಿದೆ, ಆ ಸಮಸ್ಯೆಗಳಿಗೆ ಕಾರಣ ಮತ್ತು ಪರಿಹಾರಗಳನ್ನು ಹುಡುಕಿ ಸೂಕ್ತ ರೀತಿಯಲ್ಲಿ ಉತ್ತಮ ಪರಿಸರ ಸೃಷ್ಟಿಸಿದಾಗ ಮಾತ್ರ ದೇಶ ಅಭಿವೃದ್ಧಿಯಾಗಲು ಸಾಧ್ಯ ಎಂದರು.
ಈ ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಭಾಗವಹಿಸಿದ ಜನವಾದಿ ಪತ್ರಿಕೆಯ ಸಂಪಾದಕರಾದ ಚನ್ನಬಸವಣ್ಣ ಅವರು ಮಾತನಾಡುತ್ತ, ನಮ್ಮ ದೇಶದ ಶಿಕ್ಷಣ ವ್ಯವಸ್ಥೆಯ ಸಮಸ್ಯೆಗಳು ಮುಗಿಯದ ಸಮಸ್ಯೆಗಳಾಗಿವೆ. ಮೌಲ್ಯಗಳಿಲ್ಲದ ಶಿಕ್ಷಣ ಒಂದು ಕಡೆಯಾಗಿದೆ. ಶಿಕ್ಷಣದಲ್ಲಿ ರಾಜಕೀಯ ಸಿದ್ಧಾಂತಗಳು ಒತ್ತಾಯ ಪೂರಕವಾಗಿ ಸೇರಿಕೊಳ್ಳುತ್ತಿವೆ. ಕೋಮುವಾದ, ಜಾತಿವಾದ ಶಿಕ್ಷಣ ಅಭಿವೃದ್ಧಿಗೆ ಮಾರಕವಾಗುತ್ತದೆ. ಸಮಸ್ಯೆಗಳನ್ನು ಪರಿಹರಿಸುವವರೇ ಸಮಸ್ಯೆಗಳನ್ನು ಸೃಷ್ಟಿಸುತ್ತಿದ್ದಾರೆ, ಪರಿಹಾರ ಅನ್ನೋ ಪ್ರಶ್ನೆ ಪ್ರಶ್ನೆಯಾಗಿ ಉಳಿಯುತ್ತಿದೆ. ವಿವೇಚನೆಯಿಂದ ಚಿಂತನೆ ಮಾಡುವುದು ದೂರ ಮಾತು ಎಂದರು. ನಮ್ಮಲ್ಲಿ ತಾಂತ್ರಿಕ ಶಿಕ್ಷಣದ ಜೊತೆಗೆ ನೈತಿಕ ಶಿಕ್ಷಣ ಕೊಟ್ಟಾಗ ಮಾತ್ರ ದೇಶವನ್ನ ಸಮೃದ್ಧಿಯಾಗಿ ಕಟ್ಟಲು ಸಾಧ್ಯ ಎಂದರು.
ಈ ಕಾರ್ಯಕ್ರಮದಲ್ಲಿ ದತ್ತಿದಾನಿಗಳಾದ ಬಸವರಾಜು ಕಳಸ ಅವರು ಭಾಗವಹಿಸಿ ಮಾತನಾಡುತ್ತಾ, ಶೈಕ್ಷಣಿಕ ಕಲಿಕೆಯಲ್ಲಿ ಪರಿಸರ ತುಂಬಾ ಮುಖ್ಯವಾಗುತ್ತದೆ. ಉತ್ತಮ ಪರಿಸರ ಇಲ್ಲದ ಶಾಲೆಗಳು ಉತ್ತಮ ಪ್ರಜೆಗಳನ್ನು ಸೃಷ್ಟಿ ಮಾಡಲು ಸಾಧ್ಯವಿಲ್ಲ.
ಇಂದು ಶಿಕ್ಷಣ ವ್ಯವಸ್ಥೆಯಲ್ಲಿ ನಮ್ಮ ಸರ್ಕಾರಿ ಶಾಲೆಗಳ ಸ್ಥಿತಿ ತುಂಬಾ ಶೋಚನೀಯವಾಗಿದೆ. ಒಂದು ಕಡೆ ಸರಕಾರಿ ಶಾಲೆಗಳನ್ನು ಮುಚ್ಚುವುದು, ಶಿಕ್ಷಕರಿಲ್ಲದ ಶಾಲೆಗಳು, ಉತ್ತಮ ದೃಷ್ಟಿಕೋನ ಇಲ್ಲದ ನೀತಿಗಳು, ವಿದ್ಯಾರ್ಥಿಗಳು ಎಸ್ ಎಸ್ ಎಲ್ ಸಿಗೆ ಬರುವಷ್ಟರಲ್ಲಿ ಶೇ೬೦% ಡ್ರಾಪೌಟ ಆಗುತ್ತಿದ್ದಾರೆ. ಬಡತನದ ಕಾರಣದಿಂದ ಎಸ್ಟೋ ವಿದ್ಯಾರ್ಥಿಗಳು ಕಲಿಕೆಯಿಂದ ಹಿಂದೆ ಹೋಗುತ್ತಿದ್ದಾರೆ.
ಕೆಟ್ಟ ಸ್ಥಿತಿಯಲ್ಲಿ ಶಿಕ್ಷಣ ವ್ಯವಸ್ಥೆ ಇದೆ. ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳು ಸಿಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸುತ್ತ , ದೂರದೃಷ್ಟಯುಳ್ಳ ಶಿಕ್ಷಣ ವ್ಯವಸ್ಥೆ ಆಗಬೇಕು ಎಂದು ಹೇಳಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಯಚೂರು ತಾ.ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ವೆಂಕಟೇಶ್ ಬೇವಿನಬೆಂಚಿ ವಹಿಸಿದ್ದರು. ಯಾವ ದೇಶದ ಸರ್ಕಾರಗಳು ಶಿಕ್ಷಣಕ್ಕೆ ಮತ್ತು ಆರೋಗ್ಯಕ್ಕೆ ಹೆಚ್ಚು ಆದ್ಯತೆ ಕೊಡುವುದಿಲ್ಲವೋ, ಆದೇಶಗಳು ಅಭಿವೃದ್ಧಿ ಆಗಲು ಸಾಧ್ಯವಿಲ್ಲ, ನಮ್ಮ ದೇಶದ ಜಿಡಿಪಿಯಲ್ಲಿ ಶೇ ೧೦% ಶಿಕ್ಷಣದ ಅಭಿವೃದ್ದಿ ಇಟ್ಟರೆ,ಅವಾಗ ಶೈಕ್ಷಣಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ಕಸಾಪ ಕೋಶ್ಯಾಧ್ಯಕ್ಷರಾದ ಜಿ. ಸುರೇಶ್, ನವೋದಯ ಶಿಕ್ಷಣ ಮಹಾವಿದ್ಯಾಲಯದ ಪ್ರಾಧ್ಯಾಪಕರಾದ ಡಾ. ಉಮಾಕಾಂತ್ ದೇವರಮನಿ, ವೀರ ಹನುಮಾನ, ಆಂಜನೇಯ ಜಾಲಿಬೆಂಚಿ, ರೇಖಾ ಬಡಿಗೇರ್ ಸೇರಿದಂತೆ ಅನೇಕರು ಇದ್ದರು. ಉಪನ್ಯಾಸಕರಾದ ಧರ್ಮಾವತಿ ನಾಯಕರು ನಿರೂಪಿಸಿದರು. ವಿಜಯ ಸ್ವಾಗತಿಸಿದರು, ವಿದ್ಯಾರ್ಥಿನಿ ಮಮತಾ ಪ್ರಾರ್ಥಿಸಿದರು. ರೇಖಾ ಪಾಟೀಲ್ ವಂದಿಸಿದರು.