ಮನೆಯಿಂದ ಹೊರ ಬರಬೇಡಿ, ಕಫ್ರ್ಯುಗೆ ಸಹಕರಿಸಲು ಚವ್ಹಾಣ ಮನವಿ

ಬೀದರ:ಮೇ.1: ಪಶು ಸಂಗೋಪನೆ ಹಾಗು ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಭು ಚವ್ಹಾಣ್ ಅವರು ಏಪ್ರೀಲ್ 29ರಂದು ಬೀದರ ಸಿಟಿಯ ಕೆಲವು ಪ್ರಮುಖ ವೃತ್ತಗಳು ಮತ್ತು ರಸ್ತೆಗಳಲ್ಲಿ ಸಂಚರಿಸಿ, 14 ದಿನಗಳ ಜನತಾ ಕಫ್ರ್ಯೂ ನಿಯಮಗಳು ಬೀದರ ನಗರದಲ್ಲಿ ಕಟ್ಟುನಿಟ್ಟಾಗಿ ಜಾರಿಯಾಗುತ್ತಿರುವುದರ ಬಗ್ಗೆ ಖುದ್ದು ಪರಿಶೀಲಿಸಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ ವೃತ್ತ, ಭಗತ್‍ಸಿಂಗ್ ವೃತ್ತ, ಬಸವೇಶ್ವರ ವೃತ್ತದಲ್ಲಿ ಸಂಚರಿಸಿದ ಸಚಿವರು, ದ್ವಿಚಕ್ರ ವಾಹನಗಳು, ಆಟೋಗಳು, ಕಾರುಗಳ ಮೂಲಕ ಅತ್ತಿತ್ತ ಸಂಚರಿಸುವವರನ್ನು ತಡೆದು, ಎಲ್ಲಿಗೆ ಹೋಗುತ್ತಿದ್ದೀರಿ? ಲಾಕ್‍ಡೌನ್ ಇರುವುದು ನಿಮಗೆ ತಿಳಿದಿಲ್ಲವೇ? ಅನವಶ್ಯಕವಾಗಿ ಯಾಕೆ ತಿರುಗಾಡುತ್ತೀರಿ? ಎಂದು ಪ್ರಶ್ನಿಸಿ ಲಾಕ್‍ಡೌನ್ ನಿಯಮವನ್ನು ದಯವಿಟ್ಟು ಪಾಲನೆ ಮಾಡಿ ಸಹಕರಿಸಿ ಎಂದು ಜನರತ್ತ ಕೈಮುಗಿದು ವಿನಂತಿಸಿದರು.
14 ದಿನಗಳ ಜನತಾ ಕಫ್ರ್ಯೂವಿನ ಈ ಸಂದರ್ಭದಲ್ಲಿ ಸಾರ್ವಜನಿಕರು ಅನವಶ್ಯಕವಾಗಿ ಹೊರಗಡೆ ಸುತ್ತಬಾರದು. ಕೋವಿಡ್ ಮಹಾಮಾರಿ ಹರಡುತ್ತಿರುವ ಕಾರಣ ಜಾಗೃತೆ ವಹಿಸಬೇಕು. ಅತೀ ಅವಶ್ಯವಿದ್ದರೆ ಮಾತ್ರ ಮಾಸ್ಕ ಧರಿಸಿಕೊಂಡು ಸಾಮಾಜಿಕ ಅಂತರ ಕಾಪಾಡಿಕೊಂಡು ಹೊರಗಡೆ ಕೆಲಸ ಮಾಡಬೇಕು ಎಂದು ತಿಳಿಸಿದರು.
ಡಾ.ಬಿ.ಆರ್.ಅಂಬೇಡ್ಕರ ವೃತ್ತದಲ್ಲಿ, ಶ್ರೀ ಬಸವೇಶ್ವರ ವೃತ್ತದಲ್ಲಿ ಅಲ್ಲಲ್ಲಿ ನಿಂತಿದ್ದ ಜನರ ಹತ್ತಿರ ತಾವೇ ಖುದ್ದು ತೆರಳಿದ ಸಚಿವರು, ಇಲ್ಲೇಕೆ ನಿಂತಿದ್ದೀರಿ? ನಿಮಗೆ ಲಾಕ್‍ಡೌನ್ ನಿಯಮಗಳು ಅನ್ವಯವಾಗುವುದಿಲ್ಲವೇ? ಬೀದರ ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ದಿನೇದಿನೇ ಏರುತ್ತಲೇ ಇವೆ. ಇದು ನಿಮಗೆ ತಿಳಿದಿಲ್ಲವೇ? ಲಾಕ್‍ಡೌನ್ ಅವಧಿಯಲ್ಲಿ ಹೀಗೆ ನೀವು ಅನವಶ್ಯಕವಾಗಿ ಹೊರಗೆ ಇರುವುದು ಸರಿಯಲ್ಲ. ನಿಯಮ ಪಾಲನೆ ಮಾಡಿರಿ ಮೊದಲು ಎಂದು ತಿಳಿಸಿದರು.
ಬಸವೇಶ್ವರ ವೃತ್ತದಲ್ಲಿ ಕೆಲ ಸಮಯ ಸಂಚರಿಸಿದ ಸಚಿವರು, ರಸ್ತೆಯಲ್ಲಿ ಸಂಚರಿಸುತ್ತಿದ್ದವರನ್ನು ತಡೆದು ಎಲ್ಲಿಗೆ ಹೋಗುತ್ತಿದ್ದೀರಿ? ನೀವು ಹೀಗೆ ನಿಯಮ ಉಲ್ಲಂಘನೆ ಮಾಡಿದರೆ ಸರ್ಕಾರವಾದರೂ ಏನು ಮಾಡಬೇಕು? ಎಂದು ಪ್ರಶ್ನಿಸಿ ನಿಯಮ ಪಾಲನೆ ಮಾಡಲು ಮನವಿ ಮನಾಡಿದರು.
ಬಸ್ ನಿಲ್ದಾಣಕ್ಕೆ ಭೇಟಿ: ಜನತಾ ಕಫ್ರ್ಯೂವಿನ ಹಿನ್ನೆಲೆಯಲ್ಲಿ ಬಸ್ ನಿಲ್ದಾಣದ ಸುತ್ತಲಿನ ವಾತಾವರಣ ತಿಳಿಯಲು ಸಚಿವರು, ಬೀದರನ ಹೊಸ ಬಸ್ ನಿಲ್ದಾಣದತ್ತ ಸಂಚರಿಸಿ ಅಲ್ಲಿ ಕೂಡ ಹಲವು ದ್ವಿಚಕ್ರ ವಾಹನಗಳ ಸವಾರರು, ಆಟೋ ಸವಾರರನ್ನು ತಡೆದು ತಿಳಿ ಹೇಳಿ, ಜನತಾ ಕಫ್ರ್ಯೂವಿಗೆ ಸಹಕರಿಸುವಂತೆ ಮನವಿ ಮಾಡಿದರು.
ವಿವಿಧ ವೃತ್ತಗಳಲ್ಲಿ ಸಂಚಾರ: ಡಾ.ಬಿ.ಆರ್.ಅಂಬೇಡ್ಕರ ವೃತ್ತದಿಂದ ಸಿಟಿ ಸಂಚಾರ ಆರಂಭಿಸಿದ ಸಚಿವರು, ಬಳಿಕ ಭಗತ್ ಸಿಂಗ್ ಸರ್ಕಲ್, ಶಿವಾಜಿ ವೃತ್ತ, ಹರಳಯ್ಯ ವೃತ್ತ, ಕನ್ನಡಾಂಬೆ ವೃತ್ತ, ಮಡಿವಾಳ ವೃತ್ತದಲ್ಲಿ ಸಂಚರಿಸಿ, ಲಾಕ್‍ಡೌನ್ ಹಿನ್ನೆಲೆಯಲ್ಲಿ ಜನ ಸಂಚಾರದ ಬಗ್ಗೆ ವೀಕ್ಷಣೆ ನಡೆಸಿದರು.
ಜನರಿಂದ ಉತ್ತಮ ಸ್ಪಂದನೆ: ಜನತಾ ಕಫ್ರ್ಯೂವಿಗೆ ಬೀದರ ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಜನತಾ ಕಫ್ರ್ಯೂವಿನ ಹಿನ್ನೆಲೆಯಲ್ಲಿ ಸಚಿವರು ದಿಢೀರ್ ಸಿಟಿ ರೌಂಡ್ ಹಾಕುತ್ತಿರುವಾಗ ಡಾ.ಬಿ.ಆರ್.ಅಂಬೇಡ್ಕರ ವೃತ್ತ ಸೇರಿದಂತೆ ವಿವಿಧ ವೃತ್ತಗಳಲ್ಲಿ ಟ್ರಾಪಿಕ್ ಪೊಲೀಸರು ನಿಂತಿರುವುದು ಕಂಡು ಬಂದಿತು. ಬಹುತೇಕ ರಸ್ತೆಗಳಲ್ಲಿ ಏಪ್ರೀಲ್ 29ರಂದು ಕೂಡ ಜನ ಸಂಚಾರ ತೀರಾ ವಿರಳವಾಗಿತ್ತು. ಕೆಲವು ರಸ್ತೆಗಳಲ್ಲಿ ವಾಹನಗಳು ಮತ್ತು ಜನರು ಕೂಡ ನುಸುಳದೇ ಬಿಕೋ ಅನ್ನುತ್ತಿದ್ದವು.
ಸಾರ್ವಜನಿಕರಲ್ಲಿ ಸಚಿವರ ಮನವಿ: ಸಿಟಿ ರೌಂಡ್ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಬೀದರ ಜಿಲ್ಲೆಯಲ್ಲಿ ಕೂಡ ಕೋವಿಡ್-19 ಎರಡನೇ ಅಲೆಯು ತೀವ್ರಗತಿಯಲ್ಲಿ ಜನರನ್ನು ಕಾಡುತ್ತಿದೆ. ಈ ಹರಡುವಿಕೆಯನ್ನು ತಡೆಯಲು ರಾಜ್ಯ ಸರ್ಕಾರವು 14 ದಿನಗಳ ಜನತಾ ಕಫ್ರ್ಯೂ ಜಾರಿ ಮಾಡಿದೆ. ಇಂತಹ ಕಠಿಣ ನಿರ್ಧಾರಗಳಿಂದ ಮಾತ್ರ ಈ ವೈರಸ್ ಹರಡುವಿಕೆಯನ್ನು ತಡೆಯಲು ಸಾಧ್ಯವಾಗಲಿದೆ. ಹೀಗಾಗಿ ಜನರು ಮನೆಯಲ್ಲಿಯೇ ಇದ್ದು, ಹೊರಗೆ ಬಾರದೇ ಜನತಾ ಕಫ್ರ್ಯೂಗೆ ಸಹಕರಿಸಬೇಕು. ಕೋವಿಡ್ ಹಿನ್ನೆಲೆಯಲ್ಲಿ ಮಾಸ್ಕ ಧರಿಸುವ, ಸ್ಯಾನಿಟೈಜರ್ ಬಳಸುವ, ಆಗಾಗ ಕೈಶುಚಿಗೊಳಿಸುವ, ಸಾಮಾಜಿಕ ಅಂತರ ಪಾಲನೆ ಮಾಡುವ ನಿಯಮಗಳನ್ನು ಪಾಲನೆ ಮಾಡಬೇಕು ಎಂದು ತಿಳಿಸಲು ಬೀದರ ಸಿಟಿ ಸಂಚಾರ ಕೈಗೊಂಡು ಜನರಲ್ಲಿ ಮನವಿ ಮಾಡುತ್ತಿದ್ದೇವೆ ಎಂದು ತಿಳಿಸಿದರು.