ಮನೆಯಿಂದಲೇ ಮತ ಹಾಕುವ ವ್ಯವಸ್ಥೆ

ಗದಗ, ಏ4: ಕರ್ನಾಟಕ ರಾಜ್ಯ ವಿಧಾನಸಭೆಯ ಸಾರ್ವತ್ರಿಕ ಚುನಾವಣೆ ಇನ್ನೆಲೆಯಲ್ಲಿ ಇದೇ ಮೊದಲ ಬಾರಿಗೆ ಚುನಾವಣಾ ಆಯೋಗ 80 ವರ್ಷ ಮೇಲ್ಪಟ್ಟವರಿಗೆ ಹಾಗೂ ಅಂಗವಿಕಲರಿಗೆ ಮನೆಯಿಂದಲೇ ಮತ ಹಾಕಲು ಅವಕಾಶ ನೀಡಿದೆ ಎಂದು ಪ್ರಕಟಣೆ ತಿಳಿಸಿದೆ.
ಭಾರತ ಚುನಾವಣಾ ಆಯೋಗವು 80 ವರ್ಷ ಮೇಲ್ಪಟ್ಟ ವಯೋವೃದ್ಧರಿಗೆ ಹಾಗೂ ವಿಶೇಷ ಚೇತನರಿಗೆ ಮತದಾನದ ಹಕ್ಕು ಸಮರ್ಪಕವಾಗಿ ಕಲ್ಪಿಸಲು ಮನೆಯಿಂದಲೇ ಮತದಾನ ಮಾಡುವ ಅವಕಾಶವನ್ನು ಪ್ರಥಮ ಬಾರಿಗೆ ಬಿಹಾರ ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ ನೀಡಿತ್ತು. ಈಗ ಕರ್ನಾಟಕದಲ್ಲಿ ಪ್ರಥಮ ಬಾರಿಗೆ ಈ ಅವಕಾಶವನ್ನು 80 ವರ್ಷ ಮೇಲ್ಪಟ್ಟ ವಯೋವೃದ್ಧರಿಗೆ ಹಾಗೂ ವಿಶೇಷ ಚೇತನರಿಗೆ ನೀಡಿದೆ.
ಗದಗ ಜಿಲ್ಲೆಯ ಶಿರಹಟ್ಟಿ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲಿ 80 ವರ್ಷ ಮೇಲ್ಪಟ್ಟ 4365, ಗದಗ ವಿಧಾನ ಸಭಾ ಮತಕ್ಷೇತ್ರದಲ್ಲಿ 3284, ರೋಣ 3919, ನರಗುಂದ 3333 ಒಟ್ಟು 14901 ಮತದಾರರಿದ್ದಾರೆ. ಜಿಲ್ಲೆಯಲ್ಲಿ 11124 ವಿಶೇಷ ಚೇನತ ಹಾಗೂ ದಿವ್ಯಾಂಗ ಮತದಾರರಿದ್ದಾರೆ. ಶಿರಹಟ್ಟಿ ವಿಧಾನಸಭಾ ಮತಕ್ಷೇತ್ರದಲ್ಲಿ 3441, ಗದಗ ವಿಧಾನ ಸಭಾ ಮತಕ್ಷೆತ್ರದಲ್ಲಿ 1424, ರೋಣ 2935 ಹಾಗೂ ನರಗುಂದ ವಿಧಾನ ಸಭಾ ಮತಕ್ಷೇತ್ರದಲ್ಲಿ 3324 ಮತದಾರರಿದ್ದಾರೆ. ಈ ಎಲ್ಲ ಮತದಾರರಿಗೆ ಬಿಎಲ್‍ಓ ಗಳ ಮೂಲಕ 12 ಡಿ ಅರ್ಜಿ ನಮೂನೆಯನ್ನು ತಲುಪಿಸಿ ಅವರು ಮನೆಯಿಂದಲೇ ಮತದಾನ ಮಾಡುವ ಅಥವಾ ಮತಗಟ್ಟೆಗೆ ಬಂದು ಮತ ಹಾಕುವ ಕುರಿತು ಒಪ್ಪಿಗೆ ಪತ್ರವನ್ನು ಪಡೆಯಲಾಗುತ್ತಿದೆ.
ಮನೆಯಿಂದಲೇ ಮತದಾನ ಮಾಡುವ ಕುರಿತು ಒಪ್ಪಿಗೆ ನೀಡಿದ ಮತದಾರರಿಗೆ ಭಾರತ ಚುನಾವಣಾ ಆಯೋಗ ನೀಡಿರುವ ನಿಯಮಾವಳಿಯಂತೆ ಸೂಕ್ತ ಭದ್ರತೆಯೊಂದಿಗೆ, ನಿಗದಿಪಡಿಸಿದ ಅಧಿಕಾರಿಗಳ, ರಾಜಕೀಯ ಪಕ್ಷಗಳ ಏಜೆಂಟರ ಸಮ್ಮುಖದಲ್ಲಿ ಗೌಪ್ಯ ಮತದಾನ ಪಡೆಯಲಾಗುತ್ತದೆ. ಮತ್ತು ಈ ಎಲ್ಲ ಪ್ರಕ್ರಿಯೆಯನ್ನು ವಿಡಿಯೋಗ್ರಾಫಿ ಮಾಡಿಸಲಾಗುತ್ತದೆ. ಭಾರತ ಚುನಾವಣಾ ಆಯೋಗ ಪ್ರತಿಯೊಬ್ಬ ಮತದಾರ ತಮ್ಮ ಹಕ್ಕನ್ನು ನ್ಯಾಯೋಚಿತವಾಗಿ ಚಲಾಯಿಸಲು ಅನುವಾಗುವಂತೆ ಮನೆಯಿಂದಲೇ ಮತದಾನ ಮಾಡುವ ಅವಕಾಶವನ್ನು ಕಲ್ಪಿಸಲಾಗಿದೆ.
ಜಿಲ್ಲಾದ್ಯಂತ ಈಗಾಗಲೇ ಮತಗಟ್ಟೆ ಅಧಿಕಾರಿಗಳು, ಮೇಲ್ವಿಚಾರಕರು ಎಂಬತ್ತು ವರ್ಷ ಮೇಲ್ಪಟ್ಟ ಹಿರಿಯ ಹಾಗೂ ವಿಶೇಷ ಚೇತನ ಮತದಾರರಿಗೆ ಚುನಾವಣಾ ಆಯೋಗ ಕಲ್ಪಿಸಿರುವ ವಿಶೇಷ ಸೌಲಭ್ಯದ ಕುರಿತು ಜಾಗೃತಿ ಮೂಡಿಸುವದರ ಜೊತೆಗೆ 12ಡಿ ಅರ್ಜಿ ನಮೂನೆ ನೀಡಿ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ಪ್ರೇರೆಪಿಸಲಾಗುತ್ತಿದೆ.