ಮನೆಯಿಂದಲೇ ಮತದಾನ ಹಕ್ಕು ಚಲಾಯಿಸಿದ ಮತದಾರ

ಗದಗ, ಏ.30: ಚುನಾವಣಾ ಆಯೋಗವು ಪ್ರಥಮ ಬಾರಿಗೆ ರಾಜ್ಯ ವಿಧಾನ ಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರತಿಯೊಬ್ಬರು ಮತಚಲಾಯಿಸುವ ಧ್ಯೇಯೋದ್ದೇಶದಿಂದ 80 ವರ್ಷ ಮೇಲ್ಪಟ್ಟ ಅಶಕ್ತ ಹಾಗೂ ವಿಕಲಚೇನತರಿಗೆ ಮನೆಯಿಂದಲೇ ಮತದಾನದ ಹಕ್ಕು ಚಲಾಯಿಸಲು ಅವಕಾಶ ಕಲ್ಪಿಸಿದೆ. ಈ ಹಿನ್ನಲೆಯಲ್ಲಿ ಏಪ್ರೀಲ 29, 30 ಹಾಗೂ ಮೇ 1 ರಂದು ಜಿಲ್ಲೆಯ 80 ವರ್ಷ ಮೇಲ್ಪಟ್ಟ ಅಶಕ್ತ ಹಾಗೂ ಅಂಗವಿಕಲರಿಗೆ ಮತದಾನದ ಹಕ್ಕು ಚಲಾಯಿಸಲು ಮತದಾನ ಪ್ರಕ್ರಿಯೆ ಆರಂಭವಾಗಿದೆ.
ಜಿಲ್ಲೆ ಯಲ್ಲಿ 80 ವರ್ಷ ಮೇಲ್ಪಟ್ಟ ಒಟ್ಟು 14896 ಮತದಾರರಿದ್ದು ಈ ಪೈಕಿ 872 ಮತದಾರರು ತಮ್ಮ ಮತದಾನದ ಹಕ್ಕನ್ನು ಮನೆಯಿಂದಲೇ ಚಲಾಯಿಸಲು ಒಪ್ಪಿಗೆ ಸೂಚಿಸಿದ್ದಾರೆ. ಅದರಂತೆ ಜಿಲ್ಲೆಯಲ್ಲಿ 11,254 ಅಂಗವಿಕಲರಿದ್ದು ಈ ಪೈಕಿ 183 ಅಂಗವಿಕಲರು ಮನೆಯಿಂದಲೇ ಮತದಾನದ ಹಕ್ಕು ಚಲಾಯಿಸಲು ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಿದ್ದು ಅವರೆಲ್ಲರಿಗೂ ಮತದಾನ ಹಕ್ಕು ಚಲಾಯಿಸಲು ಇಂದು ಅವಕಾಶವನ್ನು ಚುನಾವಣಾ ಆಯೋಗವು ಮಾಡಿಕೊಟ್ಟಿದೆ.
ಮತದಾರರ ಮನೆಗೆ ಚುನಾವಣಾ ಕಾರ್ಯನಿರತ ಅಧಿಕಾರಿ, ಸಿಬ್ಬಂದಿಗಳು ಮತ ಪೆಟ್ಟಿಗೆಯೊಂದಿಗೆ ತೆರಳಿ ಮತದಾನದ ಹಕ್ಕು ಚಲಾಯಿಸಲು ಅವಕಾಶ ನೀಡಿದರು. ಮನೆಯಿಂದಲೇ ಮತ ಚಲಾಯಿಸುವ ಹಕ್ಕು ದೊರತಿರುವದಕ್ಕೆ ಉತ್ಸಾಹದಿಂದಲೇ ಮತದಾರರು ತಮ್ಮ ಮತದಾನದ ಹಕ್ಕನ್ನು ಚಲಾಯಿಸುವ ಪ್ರಕ್ರಿಯೆ ಕಂಡು ಬಂತು. ಮನೆಯಿಂದಲೇ ಮತಚಲಾಯಿಸುವ ಕುರಿತು ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್ ಅವರ ಮಾರ್ಗದರ್ಶನದಂತೆ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳ ಚುನಾವಣಾಧಿಕಾರಿಗಳು ತಮ್ಮ ವ್ಯಾಪ್ತಿಯ ಮತದಾರರಿಗೆ ವ್ಯವಸ್ಥಿತವಾಗಿ ಮತದಾನವಾಗುವಂತೆ ಶಿಸ್ತುಬದ್ಧ ಕಾರ್ಯಯೋಜನೆ ರೂಪಿಸಿ ಇಂದು ಮತದಾನ ಸರಾಗವಾಗಿ ಜರುಗಲು ಕಾರಣಿಭೂತರಾದರು.
ಮತದಾನ ಪ್ರಕ್ರಿಯೆಯ ವೀಕ್ಷಣೆಗಾಗಿ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್ ಅವರು ಹುಲಕೋಟಿಯ ಮತದಾರರ ಮನೆಗೆ ತೆರಳಿ ಮತ ಚಲಾಯಿಸುವ ಪ್ರಕ್ರಿಯೆಯನ್ನು ವೀಕ್ಷಿಸಿ ಮತದಾರರ ಅನಿಸಿಕೆಗಳನ್ನು ಆಲಿಸಿದರು. ಈ ಸಂದರ್ಭದಲ್ಲಿ ಗದಗ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಅನ್ನಪೂರ್ಣ, ಸಹಾಯಕ ಚುನಾವಣಾಧಿಕಾರಿ ಮಲ್ಲಿಕಾರ್ಜುನ ಹೆಗ್ಗಣ್ಣವರ ಸೇರಿದಂತೆ ಚುನಾವಣಾ ಕರ್ತವ್ಯ ನಿರತ ಸಿಬ್ಬಂದಿಗಳು ಹಾಜರಿದ್ದರು.