ಮನೆಯಿಂದಲೇ ಮತದಾನ ಪ್ರಯೋಗ ಯಶಸ್ವಿ

ಬೆಂಗಳೂರು,ಮೇ.೯- ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ೮೦ ವರ್ಷ ದಾಟಿದ ವಯೋವೃದ್ಧರು ಮತ್ತು ವಿಶೇಷ ಚೇತನರಿಗೆ ಮನೆಯಿಂದಲೇ ಮತದಾನ ಮಾಡುವ ಚುನಾವಣಾ ಆಯೋಗದ ವಿಶೇಷ ಪ್ರಯತ್ನ ರಾಜ್ಯದಲ್ಲಿ ಈ ಬಾರಿ ಯಶಸ್ಸು ಕಂಡಿದ್ದು ಶೇ. ೯೭ ರಷ್ಟು ಮತದಾನವಾಗಿದೆ.
ರಾಜ್ಯದ ೨೨೪ ವಿಧಾನಸಭಾ ಕ್ಷೇತ್ರಗಳಿಗೆ ನಾಳೆ ಒಂದೇ ಹಂತದಲ್ಲಿ ಮತದಾನ ನಡೆಯಲಿರುವ ಹಿನ್ನೆಲೆಯಲ್ಲಿ ಒಂದು ವಾರ ಮುಂಚೆಯೇ ಚುನಾವಣಾ ಆಯೋಗದ ಸಿಬ್ಬಂದಿಗಳು ಗುರುತಿಸಲಾದ ವಯೋವೃದ್ದರು ಮತ್ತು ವಿಶೇಷ ಚೇತನರ ಮನೆಮನೆಗಳಿಗೆ ತೆರಳಿ ಮತದಾನಕ್ಕೆ ವ್ಯವಸ್ಥೆ ಮಾಡಲಾಗಿತ್ತು.
೮೦ ವರ್ಷಕ್ಕಿಂತ ಮೇಲ್ಪಟ್ಟವರು ಶೇ. ೯೪.೮೫ ರಷ್ಟು ಮತ್ತು ವಿಶೇಷ ಚೇತನರಿಂದ ಶೇ.೯೭.೫೭ ರಷ್ಟು ಜನರು ಮನೆಯಿಂದಲೇ ಮತದಾನ ಮಾಡಿದ್ದಾರೆ.ಒಟ್ಟಾರೆ ಶೇ.೯೭ ರಷ್ಟು ಮನೆಯಿಂದಲೇ ಮತದಾನ ಯಶಸ್ಬಿಯಾಗಿದೆ ಎಂದು ಚುನಾವಣಾ ಆಯೋಗದ ಅಧಿಕೃತ ಅಂಕಿ ಅಂಶಗಳು ತಿಳಿಸಿವೆ.
ಏ. ೨೯ರಿಂದ ಪ್ರಾರಂಭವಾದ ಮತದಾನ ಮೇ ೨ರವರೆಗೆ ಆಯಾ ಮತಕ್ಷೇತ್ರದಲ್ಲಿ ಚುನಾವಣೆಗೆ ನಿಯೋಜನೆಗೊಂಡ ಅಧಿಕಾರಿಗಳು ಮತ ಪೆಟ್ಟಿಗೆ, ಬ್ಯಾಲೆಟ್ ಪೇಪರ್ ಸಹಿತ ನೋಂದಾಯಿತ ಮತದಾರರ ಮನೆಗೆ ತೆರಳಿ ಮತದಾನ ಮಾಡಿಸಿದ್ದಾರೆ.
ಚುನಾವಣಾ ಆಯೋಗ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ೮೦ ವರ್ಷ ಮೇಲ್ಪಟ್ಟವರಿಗೆ ಮತ್ತು ಶೇ. ೪೦ಕ್ಕಿಂತ ಹೆಚ್ಚು ವೈಕಲ್ಯ ಹೊಂದಿದ ವಿಶೇಷ ಚೇತನರಿಗೆ ಮನೆಯಿಂದಲೇ ಮತದಾನ ಮಾಡಲು ಅವಕಾಶ ನೀಡಲಾಗಿತ್ತು. ಮನೆಯಿಂದಲೇ ಮತದಾನ ಮಾಡಲು ನೋಂದಾಯಿಸಿಕೊಂಡ ೯೯,೫೨೯ ಮತದಾರರ ಪೈಕಿ ೯೪,೯೩೧ ಮತದಾರರು ಮತದಾನ ಮಾಡಿದ್ದಾರೆ ಎಂದು ಆಯೋಗ ತಿಳಿಸಿದೆ.
೮೦ ವರ್ಷಕ್ಕಿಂತ ಮೇಲ್ಪಟ್ಟವರು ೮೦,೨೫೦ ನೋಂದಾಯಿಸಿಕೊಂಡಿದ್ದು, ಈ ಪೈಕಿ ೭೬,೧೨೦ ಮಂದಿ ತಮ್ಮ ಹಕ್ಕು ಚಲಾಯಿಸಿದ್ದಾರೆ. ಒಟ್ಟು ಶೇ.೯೪.೮೫ ರಷ್ಟು ಮತದಾನವಾಗಿದೆ. ಇನ್ನು ೧೯,೨೭೯ ವಿಕಲಚೇತನ ಮತದಾರರು ನೋಂದಾಯಿಸಿಕೊಂಡಿದ್ದು, ೧೮,೮೧೧ ಮತದಾರರು ಮತ ಚಲಾಯಿಸಿದ್ದಾರೆ. ಶೇ.೯೭.೫೭ ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗದ ಮೂಲಗಳು ಅಧಿಕೃತ ಮಾಹಿತಿ ನೀಡಿದೆ.
ಸೇವಾ ಮತದಾರರಲ್ಲಿ ಹೆಚ್ಚು
ಸೇವಾ ಮತದಾರರು ೧೫,೩೨೮ ಮಂದಿ ನೋಂದಾಯಿಸಿಕೊಂಡಿದ್ದು, ೧೦,೦೬೬ ಮತದಾರರು ಮತದಾನ ಮಾಡಿದ್ದಾರೆ. ಒಟ್ಟು ಶೇ.೬೫.೬೭ ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ.

ಮುಖ್ಯ ಆಯುಕ್ತರ ಅಭಿನಂಧನೆ
ಚಿಕ್ಕೋಡಿ ತಾಲೂಕಿನ ಇಂಗಳಿ ಗ್ರಾಮದ ೧೦೩ ವರ್ಷ ೪ ತಿಂಗಳ ವಯೋವೃದ್ಧ ಮಹದೇವ ಮಹಾಲಿಂಗ ಮಾಳಿ ಸೇರಿದಂತೆ ಕೆಲ ಶತಾಯುಷಿಗಳು ಸಹ ಮನೆಯಿಂದಲೇ ಮತದಾನ ಮಾಡುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ.
ಮಹದೇವ ಮಾಳಿ ಅವರ ಮತದಾನ ಪ್ರಜ್ಞೆಗೆ ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತ ರಾಜೀವ್ ಕುಮಾರ್ ಅವರು ದೂರವಾಣಿ ಕರೆ ಮಾಡಿ ಅಭಿನಂದಿಸಿದ್ದಾರೆ.
ಒಟ್ಟಾರೆ ಚುನಾವಣಾ ಆಯೋಗ ನೀಡಿದ ಅವಕಾಶವನ್ನು ಸದ್ಬಳಕೆ ಮಾಡಿಕೊಂಡ ಹಿರಿಯ ನಾಗರಿಕರು ಮತ್ತು ವಿಶೇಷಚೇತನರು ಹೆಚ್ಚಿನ ಸಂಖ್ಯೆಯಲ್ಲಿ ಮನೆಯಿಂದಲೇ ಮತದಾನ ಮಾಡಿ ತಮ್ಮ ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ

ಬೆಳಗಾವಿ ಜಿಲ್ಲೆ ದಾಖಲೆ

ಮನೆಯಿಂದಲೇ ಮತದಾನ ಮಾಡಿದ ಜಿಲ್ಲೆಗಳ ಪೈಕಿ ಬೆಳಗಾವಿ ಜಿಲ್ಲೆಯಲ್ಲಿ ೮೬೩೬ ಮತದಾರರಿದ್ದಾರೆ. ಅದರಲ್ಲಿ ಜಿಲ್ಲೆಯಲ್ಲಿ ಬಾರಿ ೮೦ ವರ್ಷ ಮೇಲ್ಪಟ್ಟ ೬೯೭೫ ಹಿರಿಯ ನಾಗರಿಕರು ಮತ್ತು ೧೬೬೧ ವಿಶೇಷ ಚೇತನರು ಸೇರಿದಂತೆ ಒಟ್ಟು ೮೬೩೬ ಜನ ಮತದಾರರು ತಮ್ಮ ಮನೆಯಿಂದಲೇ ಮತ ಚಲಾಯಿಸುವ ಮೂಲಕ ದಾಖಲೆ ಬರೆದಿದ್ದಾರೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ಜಿಲ್ಲೆಯಲ್ಲಿ ೮೦ ವರ್ಷಕ್ಕಿಂತ ಮೇಲ್ಪಟ್ಟ ೭೩೬೨ ಮತದಾರರು ಹಾಗೂ ೧೭೦೮ ವಿಶೇಷ ಚೇತನರು ಸೇರಿದಂತೆ ಒಟ್ಟು ೯೦೭೦ ಜನ ಮನೆಯಿಂದಲೇ ಮತ ಚಲಾಯಿಸಲು ತಮ್ಮ ಹೆಸರು ನೋಂದಾಯಿಸಿಕೊಂಡಿದ್ದರು ಎಂದು ಆಯೋಗ ಹೇಳಿದೆ.