ಮನೆಯಿಂದಲೇ ಬಿ ಬಿ ಎಂ ಪಿ ಆಯುಕ್ತರು ಕಾರ್ಯ ನಿರ್ವಹಣೆ

ಬೆಂಗಳೂರು, ಜ.೨- ಕೊರೋನಾ ಸೋಂಕಿಗೆ ಗುರಿಯಾಗಿರುವ ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ್ ಪ್ರಸಾದ್ ಅವರು, ಮನೆಯಿಂದಲೇ ವಿಡಿಯೋ ಸಂವಾದ ಮೂಲಕ ಕಾರ್ಯ ನಿರ್ವಹಿಸಿ, ಅಧಿಕಾರಿಗಳಿಂದ ಮಾಹಿತಿ ಪಡೆದರು.

ನಗರದಲ್ಲಿಂದು ಸಭೆ ನಡೆಸಿದ ಅವರು,
ವಸಂತನಗರ ವಾರ್ಡ್-೧೯ ಅಭಿವೃದ್ಧಿ ಕಾರ್ಯಗಳು ಹಾಗೂ ಸಮಸ್ಯೆಗಳ ಕುರಿತು ಮಾಹಿತಿ ಪಡೆದು, ಸ್ಥಳೀಯ ಅಧಿಕಾರಿಗಳಿಗೆ ಅಗತ್ಯ ಸೂಚನೆಗಳನ್ನು ನೀಡಿದರು.

ವಸಂತನಗರ ವಾರ್ಡ್ ವ್ಯಾಪ್ತಿಯಲ್ಲಿ ಹೆಚ್ಚು ಹೆಚ್ಚು ಅಭಿವೃದ್ಧಿ ಕಾರ್ಯಗಳು ಆಗಬೇಕು. ಅಧಿಕಾರಿಗಳು ಸ್ಥಳೀಯ ನಾಗರಿಕರಿಗೆ ತ್ವರಿತವಾಗಿ ಸ್ಪಂದಿಸಿ ಇರುವ ಸಮಸ್ಯೆಗಳನ್ನು ಪರಿಹಾರ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದರು.

ಸಭೆಯಲ್ಲಿ ಸಾರ್ವಜನಿಕರೊಬ್ಬರು, ವಸಂತನಗರ ವ್ಯಾಪ್ತಿಯಲ್ಲಿ ಮೂತ್ರ ವಿಸರ್ಜನೆ ಮಾಡುವ ಸ್ಥಳಗಳಿದ್ದು, ಅಲ್ಲಿ ಸ್ವಚ್ಛವಾಗಿಡಲು ಸೂಕ್ತಕ್ರಮ ಕೈಗೊಳ್ಳಬೇಕೆಂದು ಆಯುಕ್ತರಲ್ಲಿ ಮನವಿ ಮಾಡಿದರು.

ಅದಕ್ಕೆ ಆಯುಕ್ತರು ಪ್ರತಿಕ್ರಿಯಿಸಿ, ಸಂಬಂಧಪಟ್ಟ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಮೂತ್ರ ವಿಸರ್ಜನೆ ಮಾಡಿರುವ ಸ್ಥಳವನ್ನು ಸ್ವಚ್ಛವಾಗಿರುವಂತೆ ಹಾಗೂ ಅಲ್ಲಿ ಮೂತ್ರ ವಿಸರ್ಜನೆ ಮಾಡಂತೆ ಸೂಕ್ತ ಕ್ರಮವಹಿಸಬೇಕು. ಹಾಗೂ ಸಾರ್ವಜನಿಕ ಶೌಚಾಲಯ ನಿರ್ಮಿಸಲು ಸೂಕ್ತ ಸ್ಥಳ ಗುರುತಿಸಿ ಶೌಚಾಲಯಗಳನ್ನು ನಿರ್ಮಾಣ ಮಾಡಲು ಕ್ರಮವಹಿಸಲು ಸೂಚನೆ ನೀಡಿದರು.

ಪ್ಯಾಲೆಸ್ ಕ್ರಾಸ್ ರಸ್ತೆ ಬಳಿ ಸರಿಯಾಗಿ ಡಾಂಬರೀಕರಣ ಮಾಡಿಲ್ಲ. ಹಾಗೂ ವಸಂತನಗರ ೭ನೇ ಹಾಗೂ ೧೪ನೇ ಕ್ರಾಸ್ ನಲ್ಲಿ ಕೆಲವೆಡೆ ಡಾಂಬರೀಕರಣ ಮಾಡಬೇಕು ಎಂದು ಸ್ಥಳಿಯರು ತಿಳಿಸಿದಾಗ, ಆಯುಕ್ತರು ಕೂಡಲೆ ಡಾಂಬರೀಕರಣ ಮಾಡಿಸಲು ಸೂಚಿಸಿದರು.

ಅದೇ ರೀತಿ, ವಾರ್ಡ್ ಸಮಿತಿ ಸಭೆಯಲ್ಲಿ ಚರ್ಚೆ ಆಗುವ ಸಮಸ್ಯೆಗಳನ್ನು ಕೂಡಲೆ ಬಗೆಹರಿಸಲು ಕ್ರಮವಹಿಸಬೇಕು. ರಸ್ತೆಗುಂಡಿಗಳನ್ನು ಈಗಾಗಲೇ ಬಹುತೇಕ ಮುಚ್ಚಲಾಗಿದೆ. ಎಲ್ಲಾದರು ಮುಚ್ಚದಿದ್ದರೆ ಆ ಬಗ್ಗೆ ಮಾಹಿತಿ ಕೊಡಿ. ಅದನ್ನು ಮುಚ್ಚಿಸಲು
ಕ್ರಮವಹಿಸಬೇಕು ಎಂದು ಅಧಿಕಾರಿಗಳಿಗೆ ಆಯುಕ್ತರು ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಸಹಾಯಕ ಕಾರ್ಯಪಾಲಕ ಅಭಿಯಂತರ ಜಾವಿದ್ ಅಹಮ್ಮದ್, ಸಹಾಯಕ ಅಭಿಯಂತರ ರಾಜಶೇಖರ್ ಮೂರ್ತಿ, ಆರ್.ಡಬ್ಲ್ಯೂ.ಎ ಹಾಗೂ ಅಸೋಸಿಯೇಷನ್ ಪದಾಧಿಕಾರಿಗಳು, ಸ್ಥಳೀಯ ನಾಗರೀಕರು ಉಪಸ್ಥಿತರಿದ್ದರು.