ಮನೆಯಲ್ಲೇ ಚಿಕಿತ್ಸೆಗೆ ಒತ್ತು ನೀಡಲು ಪ್ರಧಾನಿ ಸೂಚನೆ

ಬೆಂಗಳೂರು,ಏ.೨೩- ಕೊರೊನಾ ಸೋಂಕಿತರಿಗೆ ಮನೆಯಲ್ಲೇ ಐಸೋಲೇಷನ್ ಮಾಡಿ ಚಿಕಿತ್ಸೆ ನೀಡುವ ಕಾರ್ಯತಂತ್ರವನ್ನು ಮತ್ತಷ್ಟು ಬಲಪಡಿಸುವಂತೆ ಪ್ರಧಾನಿ ನರೇಂದ್ರಮೋದಿ ರಾಜ್ಯಗಳಿಗೆ ಸೂಚನೆ ನೀಡಿದ್ದಾರೆ.
ದೇಶದಲ್ಲಿ ಕೊರೊನಾ ಮೊದಲ ಅಲೆಯ ವೈರಸ್‌ನ ಸ್ವಭಾವಕ್ಕೂ ೨ನೇ ಅಲೆಯ ವೈರಸ್ ಸ್ವಭಾವಕ್ಕೂ ವ್ಯತ್ಯಾಸಗಳಿವೆ. ಈಗಿನ ವೈರಸ್ ರೂಪಾಂತರಗೊಂಡಿದೆ ಬದಲಾದ ವೈರಸ್‌ನಿಂದ ಮೂರು ನಾಲ್ಕು ಪಟ್ಟು ವೇಗವಾಗಿ ಸೋಂಕು ಹರಡುತ್ತಿದೆ. ಸೋಂಕು ತಗಲುವ ಶೇ. ೯೫ರಷ್ಟು ಸೋಂಕಿತರಿಗೆ ಆಸ್ಪತ್ರೆಗೆ ದಾಖಲಾಗುವ ಅಗತ್ಯವಿಲ್ಲ. ಹಾಗಾಗಿ, ಇಂತಹವರಿಗೆ ಮನೆಯಲ್ಲೇ ಐಸೋಲೇಷನ್ ಮಾಡಿ ಟೆಲಿಕಾಲಿಂಗ್ ಮೂಲಕ ಸೂಕ್ತ ಮಾರ್ಗದರ್ಶನ, ಉಪಚಾರ, ಚಿಕಿತ್ಸೆ ಒದಗಿಸುವಂತೆ ಪ್ರಧಾನಿ ನರೇಂದ್ರ ಮೋದಿ ಸೂಚನೆ ನೀಡಿದರು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಹೇಳಿದರು.
ದೇಶದ ಕೊರೊನಾ ಸ್ಥಿತಿಗತಿ ಮತ್ತು ನಿರ್ವಹಣೆಯ ಬಗ್ಗೆ ಪ್ರಧಾನಿ ನರೇಂದ್ರಮೋದಿ ಅವರು ಕರ್ನಾಟಕ ಸೇರಿದಂತೆ ೧೦ ರಾಜ್ಯಗಳ ಮುಖ್ಯಮಂತ್ರಿಗಳ ಜತೆ ನಡೆಸಿದ ವೀಡಿಯೊ ಸಂವಾದದಲ್ಲಿ ಪಾಲ್ಗೊಂಡ ನಂತರ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಶೇ. ೯೫ರಷ್ಟು ಸೋಂಕಿತರು ಆಸ್ಪತ್ರೆಗೆ ದಾಖಲಾಗುವ ಅಗತ್ಯವಿಲ್ಲದಿದ್ದರೂ ಭಯ, ಆತಂಕದಿಂದ ಪ್ರತಿಯೊಬ್ಬರು ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಇದರಿಂದ ಆಸ್ಪತ್ರೆ ಮೇಲೆ ಹೊರೆ ಬಿದ್ದಿದೆ. ಇದನ್ನು ನಿರ್ವಹಣೆ ಮಾಡುವುದು ಕಷ್ಟ. ಇದನ್ನು ತಪ್ಪಿಸಲು ಹೋಂ ಐಸೋಲೇಷನ್ ಕಾರ್ಯತಂತ್ರವನ್ನು ಗಟ್ಟಿಗೊಳಿಸುವಂತೆ ಪ್ರಧಾನಿಗಳು ಸೂಚನೆ ನೀಡಿದ್ದಾರೆ ಎಂದರು.
ವೈರಾಣುವನ್ನು ಸೋಲಿಸಿ ಸೋಂಕಿನ ವಿರುದ್ಧ ಜಯಗಳಿಸಲು ಹೋಂ ಐಸೋಲೇಷನ್ ಕಾರ್ಯತಂತ್ರ ಗಟ್ಟಿಯಾಗಬೇಕು ಎಂಬುದು ಪ್ರಧಾನಿ ಅವರ ಆಶಯವಾಗಿದೆ ಎಂದು ಅವರು ಹೇಳಿದರು.
ಆಮ್ಲಜನಕ ಆಮದು
ಆಮ್ಲಜನಕ ಮತ್ತು ರೆಮ್‌ಡಿಸಿವಿರ್ ಔಷಧಿ ಉತ್ಪಾದನೆಯನ್ನು ಹೆಚ್ಚು ಮಾಡಿರುವುದಾಗಿಯೂ ಪ್ರಧಾನಿಗಳು ಹೇಳಿದ್ದು, ೫೦ ಸಾವಿರ ಟನ್ ಆಮ್ಲಜನಕವನ್ನು ವಿದೇಶದಿಂದ ಆಮದು ಮಾಡಿಕೊಳ್ಳುತ್ತಿರುವುದಾಗಿಯೂ ಹೇಳಿದ್ದಾರೆ ಎಂದರು.
ಮುಖ್ಯಮಂತ್ರಿ ಯಡಿಯೂರಪ್ಪನವರು ಮಾತನಾಡುವ ಸಂದರ್ಭದಲ್ಲಿ ಕರ್ನಾಟಕದಲ್ಲಿ ಕೊರೊನಾ ನಿಯಂತ್ರಣಕ್ಕೆ ಜಾರಿ ಮಾಡಿರುವ ರಾತ್ರಿ ಕರ್ಫ್ಯೂ, ವಾರಾಂತ್ಯ ಕರ್ಫ್ಯೂ ಬಗ್ಗೆ ಹೇಳಿ ಚಿಕಿತ್ಸೆಗೆ ಆರೋಗ್ಯ ಮೂಲಭೂತ ಸೌಕರ್ಯ ಒದಗಿಸಲು ಕೈಗೊಂಡಿರುವ ಕ್ರಮ, ಖಾಸಗಿ ಆಸ್ಪತ್ರೆಗಳ ಜತೆಗಿನ ಒಪ್ಪಂದ, ಮೇಕ್ ಶಿಫ್ಟ್ ಆಸ್ಪತ್ರೆ ಬಗ್ಗೆ ವಿವರ ನೀಡಿದ್ದಾರೆ.
ಇನ್ನು ೧೫ ದಿನಗಳ ಒಳಗಡೆ ೨ ಸಾವಿರ ಐಸಿಯು ಮಾಡ್ಯೂಲರ್ ಆಸ್ಪತ್ರೆಗಳನ್ನು ಬೌರಿಂಗ್, ವಿಕ್ಟೋರಿಯಾ, ಕಿದ್ವಾಯಿ, ಜಯದೇವ ಮತ್ತು ರಾಜೀವ್‌ಗಾಂಧಿ ಎದೆಗೂಡಿನ ಆಸ್ಪತ್ರೆಗಳ ಆವರಣದಲ್ಲಿ ಸ್ಥಾಪಿಸಲಾಗುವುದು ಎಂದರು.
ರಿಮ್‌ಡಿಸಿವಿರ್ ಔಷಧಿ ಕೊರತೆಯಿಲ್ಲ. ೧೦ ರಿಂದ ೧೫ ಸಾವಿರ ವಯಲ್‌ಗಳು ಸರಬರಾಜು ಆಗುತ್ತಿದೆ. ಇದರ ಜತೆಗೆ ಕೇಂದ್ರ ಸಚಿವರಾದ ಸದಾನಂದಗೌಡ ಅವರು ರಾಜ್ಯಕ್ಕೆ ೨೫ ಸಾವಿರ ರೆಮ್‌ಡಿಸಿವಿರ್ ಔಷಧಿಗಳನ್ನು ಒದಗಿಸುವುದಾಗಿ ಹೇಳಿದ್ದಾರೆ. ಹಾಗೆಯೇ ಬಯೋಕಾನ್ ಸಂಸ್ಥೆಯ ಕಿರಣ್ ಮಜುಂದಾರ್ ಅವರ ಜತೆ ಮಾತನಾಡಿದ್ದೇನೆ ಅವರು ರೆಮ್‌ಡಿಸಿವಿರ್ ಔಷಧಿಯನು ಕಳುಹಿಸುತ್ತಾರೆ ಎಂದರು.