ಮನೆಯಲ್ಲೂ ಮಾಸ್ಕ್ ಧರಿಸಿ ಕೇಂದ್ರದ ಸಲಹೆ

ನವದೆಹಲಿ,ಏ.೨೭- ಮನೆಯಲ್ಲಿಯೂ ಮಾಸ್ಕ್ ಧರಿಸುವಂತೆ ಕೇಂದ್ರ ಸರ್ಕಾರ ದೇಶದ ಜನತೆಗೆ ಸಲಹೆ ಮಾಡಿದೆ. ದೇಶದಲ್ಲಿ ಕೊರೊನಾ ಸೋಂಕಿನ ಉಪಟಳ ಮಿತಿಮೀರಿದ್ದು, ಸೋಂಕು ತಡೆಗೆ ಭಯಪಡುವ ಬದಲು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವುದು ಸೂಕ್ತ ಎಂದು ಹೇಳಿದೆ.
ಕುಟುಂಬದ ಸದಸ್ಯರೊಬ್ಬರಿಗೆ ಕೊರೊನಾ ಸೋಂಕು ಕಾಣಿಸಿಕೊಂಡರೆ ಎಲ್ಲರಿಗೂ ಹರಡುತ್ತದೆ.ಹೀಗಾಗಿ ಮನೆಯಲ್ಲಿರುವಾಗಲೂ ಮಾಸ್ಕ್ ಧರಿಸಿದರೆ ವೈರಾಣುವನ್ನು ತಡೆಗಟ್ಟಬಹುದಾಗಿದೆ ಎಂದು ನೀತಿ ಆಯೋಗದ (ಆರೋಗ್ಯ) ಸದಸ್ಯ ಡಾ. ವಿ.ಕೆ ಪಾಲ್ ಹೇಳಿದ್ದಾರೆ.
ದೇಶದಲ್ಲಿ ವ್ಯಾಪಕವಾಗಿ ಕಾಣಿಸಿಕೊಳ್ಳುತ್ತಿರುವ ಕೊರೊನಾ ಸೋಂಕನ್ನು ಗಮನಿಸಿದರೆ ಮನೆಯಲ್ಲಿಯೂ ಮಾಸ್ಕ್ ಧರಿಸುವುದು ಅನಿವಾರ್ಯ ಪರಿಸ್ಥಿತಿ ಎದುರಾಗಿದೆ,
ಸಾರ್ಸ್ ಮತ್ತು ಕೋವಿಡ್ -೨ ಮನುಷ್ಯನ ದೇಹಕ್ಕೆ ಹಾನಿ ಮಾಡುತ್ತಿದ್ದು, ಅದರಲ್ಲೂ ಉಸಿರಾಟದ ತೊಂದರೆ ಬಹುವಾಗಿ ಕಾಡುತ್ತಿರುವುದು ಅಧ್ಯಯನದಿಂದ ತಿಳಿದು ಬಂದಿದೆ ಎಂದು ಏಮ್ಸ್ ನಿರ್ದೇಶಕ ರಣದೀಪ್ ಗುಲೇರಿಯಾ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಎನ್-೯೫ ಮಾಸ್ಕ್ ಧರಿಸುವುದು ಸೂಕ್ತವಾಗಿದ್ದು, ಇದರ ಜತೆಗೆ ಡಬಲ್ ಮಾಸ್ಕ್ ಧರಿಸುವುದರಿಂದ ಸೋಂಕು ಹರಡವುದನ್ನು ತಡೆಗಟ್ಟಬಹುದಾಗಿದೆ. ಒಂದು ವೇಳೆ ಇದು ಸಾಧ್ಯವಾಗದಿದ್ದರೆ ಎರಡೂ ಪದರಗಳಿರುವ ಬಟ್ಟೆಯ ಮಾಸ್ಕ್‌ಗಳನ್ನು ಧರಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.