ಮನೆಯಲ್ಲಿ ನಾಗದೇವತೆಗೆ ಹಾಲೆರೆದು ನಾಗಪಂಚಮಿ ಆಚರಣೆ

ಇಂಡಿ :ಅ.1: ನಾಗರ ಪಂಚಮಿ ಹಬ್ಬ ಬಂತೆಂದರೆ ಸಾಲು-ಸಾಲು ಹಬ್ಬಗಳು ಶುರುವಾದವು. ಮಳೆಯ ಕಾರಣದಿಂದ ಬಿಲಗಳಲ್ಲಿ ನೀರು ತುಂಬಿಕೊಂಡಾಗ ಹೊರ ಬರುವ ಹಾವುಗಳು ಜನರಿಗೆ ಅಪಾಯವನ್ನುಂಟು ಮಾಡುವ ಸಾಧ್ಯತೆ ಹೆಚ್ಚಿರುತ್ತದೆ. ಹಾಗಾಗಿ ಈ ಸಮಯದಲ್ಲಿ ಹಾವುಗಳಿಗೆ ಹಾಲೆರೆದು ಪೂಜಿಸಲಾಗುತ್ತದೆ. ರೈತರಿಗೆ ಹಾವುಗಳು ಸ್ನೇಹಿತರಾಗಿದ್ದು ಬೆಳೆಗಳನ್ನು ನಾಶ ಮಾಡುವ ಇಲಿಗಳನ್ನು ಹಾವು ತಿನ್ನುವುದರಿಂದ ಹಾವು ರೈತರಿಗೆ ದೇವರ ಸಮಾನವಾಗಿದೆ. ಪ್ರಾಕೃತಿಕ ಅಂಶವನ್ನು ಈ ಪೂಜೆ ಒಳಗೊಂಡಿದೆ.
ತಮ್ಮ ಪತಿಯ ದೀರ್ಘ ಆಯುಷ್ಯ ಮತ್ತು ಆರೋಗ್ಯಕ್ಕಾಗಿ ಹಾಗೂ ನಾಗ ದೋಷ ನಿವಾರಣೆಗೆ ಮಹಿಳೆಯರು ನಾಗರ ಪೂಜೆಯನ್ನು ಮಾಡುತ್ತಾರೆ.
ಮಹಿಳೆಯರು ಆಲದ ಮರದಡಿಯಲ್ಲಿ ನಾಗರ ಪಂಚಮಿಯಂದು ಈ ಪ್ರತಿಮೆಗೆ ಹಾಲೆರೆಯುತ್ತಾರೆ ಅಂತೆಯೇ ಪ್ರತಿಮೆಯನ್ನು ಶುದ್ಧ ಮಾಡಿ ಅರಿಶಿನ ಹಚ್ಚುತ್ತಾರೆ. ನಂತರ ಸಿಹಿ ಹಾಲು, ಹಣ್ಣು ಮತ್ತು ಧಾನ್ಯಗಳನ್ನು ಪ್ರತಿಮೆಯ ಮುಂದೆ ಇಟ್ಟು ಪೂಜಿಸುತ್ತಾರೆ.
ಸಿಹಿ ಹಾಲು, ಅಗರಬತ್ತಿ, ಕರ್ಪೂರ, ಹಣ್ಣು, ಧಾನ್ಯಗಳು, ಅರಿಶಿನ , ಬೇಳೆಕಾಳುಗಳು, ಹೂವುಗಳು, ಹಾಲು ಮತ್ತು ಇತರ ವಸ್ತುಗಳಿಂದ ಪೂಜಿಸುವುದು ಸಾಮಾನ್ಯ ರೂಢಿಯಾಗಿದೆ.
ನಾಗರ ಪಂಚಮಿಯ ದಿನದಂದು ಜನರು ಯಾವುದೇ ಹುರಿದ ಆಹಾರ ಪದಾರ್ಥಗಳನ್ನು ಸಿದ್ಧಪಡಿಸಬಾರದು ಎಂಬ ನಂಬಿಕೆ ಇದೆ. ಪೂಜೆಗೆ ಬೇಯಿಸಿದ ಆಹಾರ ಪದಾರ್ಥಗಳನ್ನು ಸಿದ್ಧಪಡಿಸಬೇಕು. ಹಾವಿಗೆ ಯಾವುದೇ ಉಪಟಳವಾಗಬಾರದು ಎಂದು ರೈತರು ಗದ್ದೆಯನ್ನು ಉಳುವುದಿಲ್ಲ. ಕೆಲವರು ಈ ದಿನ ಉಪವಾಸ ಕೈಗೊಂಡು ಸಂಜೆ ಆಹಾರ ಸೇವಿಸುತ್ತಾರೆ.
ಇಂದು ಮನೆಯಲ್ಲಿ ನಾಗದೇವತೆಗೆ ಹಾಲೆರೆದು ನಾಗಪಂಚಮಿ ಆಚರಿಸುವ ವಾಡಿಕೆ.ಈ ನಿಮಿತ್ಯ ತಾಲೂಕಿನ ನಾಗಠಾಣ ಗ್ರಾಮದ ಬಂಡೆ ಕುಟುಂಬದ ಭುವನೇಶ್ವರಿ, ಅನುಶ್ರೀ, ಶ್ರೀನಿಧಿ, ದಾನಮ್ಮ, ಸಾಕ್ಷಿ, ದೀಪಾ ಸೇರಿದಂತೆ ಅನೇಕರು ನಾಗದೇವತೆಗೆ ಭಕ್ತಿಭಾವದಿಂದ ಹಾಲೆರೆದು ಮನೆಯಲ್ಲಿಯೇ ನಾಗಪಂಚಮಿ ಆಚರಿಸಿದರು.