ಮನೆಯಲ್ಲಿ ಆಕಸ್ಮಿಕ ಬೆಂಕಿ ಅವಘಡ

ಬಂಟ್ವಾಳ, ಮೇ ೧೯- ಮನೆಯೊಂದರಲ್ಲಿ ಆಕಸ್ಮಿಕ ಬೆಂಕಿ ಅವಘಡ ಉಂಟಾಗಿ ಮನೆಯೊಳಗಿನ ಎಲ್ಲಾ ಸಾಮಾಗ್ರಿಗಳು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿರುವ ಘಟನೆ ತಾಲೂಕಿನ ಪಾಣೆಮಂಗಳೂರು ಸಮೀಪದ ಆಲಡ್ಕ ಮಸೀದಿ ಸಮೀಪದ ವಸತಿ ಸಂಕೀರ್ಣ ಒಂದರಲ್ಲಿ ಮಂಗಳವಾರ ಮಧ್ಯ ರಾತ್ರಿ ವೇಳೆಗೆ  ಉದ್ಯಮಿ ಹನೀಫ್ ಹಾಸ್ಕೋ ಅವರ ಕುಟುಂಬ ವಾಸ್ತವ್ಯ ಹೊಂದಿರುವ ಮನೆಯಲ್ಲಿ ಈ ಬೆಂಕಿ ಅವಘಡ ಸಂಭವಿಸಿದೆ. ಮನೆ ಇರುವ ವಸತಿ ಸಂಕೀರ್ಣ ಇಸ್ಮಾಯಿಲ್ ಎಂಬವರಿಗೆ ಸೇರಿದೆ.

ಮನೆ ಮಂದಿ ಸಂಬಂಧಿಕರೊಬ್ಬರು ಮರಣ ಹೊಂದಿದ್ದ ಮನೆಗೆ ತೆರಳಿದ್ದರು. ಈ ವೇಳೆ ಈ ಅಗ್ನಿ ಅವಘಡ ಸಂಭವಿಸಿದೆ. ತಕ್ಷಣ ಸ್ಥಳಕ್ಕಾಗಮಿಸಿದ ಬಂಟ್ವಾಳ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಆದರೆ ಅದಾಗಲೇ ಮನೆಯೊಳಗಿನ ಸೊತ್ತುಗಳು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ.

ವಿದ್ಯುತ್ ಶಾರ್ಟ್ ಸರ್ಕೂಟ್ ನಿಂದಾಗಿ ಈ ಬೆಂಕಿ ಅವಘಡ ಸಂಭವಿಸಿದೆ ಎಂದು ಶಂಕಿಸಲಾಗಿದೆ.  ಮನೆಯೊಳಗಿನ ವಿದ್ಯುತ್ ಉಪಕರಣಗಳು, ಪೀಠೋಪಕರಣಗಳು ಸಹಿತ ಕಪಾಟಿನೊಳಗಿದ್ದ ವಸ್ತ್ರ, ಬಟ್ಟೆ-ರೆಗಳು, ಚಿನ್ನಾಭರಣಗಳು ಹಾಗೂ ನಗದು ಹಣ ಕೂಡಾ ಸಂಪೂರ್ಣ ಸುಟ್ಟು ಭಸ್ಮವಾಗಿದೆ.

೫೦ ಸಾವಿರ ರೂ.ಗೂ ಅಧಿಕ ಹಣ, ಸುಮಾರು ೨೦ ಪವನ್ ಗೂ ಅಧಿಕ ಚಿನ್ನಾಭರಣ, ಇತರ ಅತ್ಯಮೂಲ್ಯ ದಾಖಲೆ ಪತ್ರಗಳು ಬೆಂಕಿಯ ಕೆನ್ನಾಲಗೆಗೆ ಆಹುತಿಯಾಗಿದೆ. ಈ ಬೆಂಕಿ ಅವಘಡದಿಂದಾಗಿ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ ಎನ್ನಲಾಗಿದೆ.

ಘಟನಾ ಸ್ಥಳಕ್ಕೆ ರಾತೋರಾತ್ರಿ ಆಗಮಿಸಿದ ಸ್ಥಳೀಯ ಕೌನ್ಸಿಲರ್ ಅಬೂಬಕ್ಕರ್ ಸಿದ್ದೀಕ್ ಅವರು ಅಗ್ನಿಶಾಮಕ ಸಿಬ್ಬಂದಿ ಕರೆಸಿ ಬೆಂಕಿ ನಂದಿಸುಲ್ಲಿ ಸಹಕರಿಸಿದ್ದು, ಸ್ಥಳೀಯ ಯುವಕರು ಕೈಜೋಡಿಸಿದ್ದಾರೆ.