ಮನೆಯಲ್ಲಿರುವ ಜಿರಳೆಗಳನ್ನು ಓಡಿಸಬೇಕಾ?

ನೆಯಲ್ಲಿ ಜಿರಳೆಗಳ ಕಾಟ ಹೆಚ್ಚಾಗಿದೆ ಎಂದರೆ ವಿವಿಧ ಬಗೆಯ ಅಲರ್ಜಿ ಹಾಗೂ ರೋಗಗಳು ನಮ್ಮನ್ನು ಕಾಡುತ್ತವೆ. ಜಿರಳೆಗಳು ಮನೆಯ ಸ್ವಚ್ಛತೆಗೆ ಅಡ್ಡಿ ಮಾಡುವುದಲ್ಲದೆ ಅನೇಕ ಬಗೆಯ ವಸ್ತುಗಳನ್ನು ಹಾಳು ಮಾಡುತ್ತವೆ. ಒಮ್ಮೆ ಈ ಜಿರಳೆಗಳಿಗೆ ಮನೆಯು ಆವಾಸ ಸ್ಥಾನವಾಯಿತೆಂದರೆ ಅದನ್ನು ಸಂಪೂರ್ಣವಾಗಿ ಓಡಿಸುವುದು ಕಷ್ಟವಾಗುತ್ತದೆ. ಜಿರಳೆಗಳ ನಾಶಕ್ಕೆ ಕೆಲವು ಔಷಧಿಗಳು ಇವೆಯಾದರೂ ಸಂಪೂರ್ಣವಾಗಿ ಅವುಗಳನ್ನು ನಿವಾರಿಸಲು ಕಷ್ಟವಾಗುತ್ತದೆ.
ಸ್ವಚ್ಛತೆ ಮುಖ್ಯ: ಮನೆಯ ಒಳಗೆ ಆದಷ್ಟು ಸ್ವಚ್ಛತೆಯನ್ನು ಕಾಯ್ದುಕೊಳ್ಳಬೇಕು. ಧೂಳು ಹಾಗೂ ಗಲೀಜುಗಳಿರುವ ಪ್ರದೇಶದಲ್ಲಿ ಜಿರಳೆ ಬಹುಬೇಗ ಪ್ರವೇಶ ಪಡೆದುಕೊಳ್ಳುತ್ತದೆ. ಮೇಜಿನ ಮೇಲೆ ತಿಂಡಿ ಅಥವಾ ಊಟ ಮಾಡಿರುವ ಬಟ್ಟಲನ್ನು ಹಾಗೆಯೇ ಬಿಟ್ಟು ಹೋಗಿದ್ದರೆ, ಅದನ್ನು ಒಮ್ಮೆ ಜಿರಳೆಗಳು ಆಗಮಿಸಿ ಸವಿದರೆ ಅವು ಅಲ್ಲಿಯೇ ವಾಸವನ್ನು ಮಾಡುತ್ತವೆ. ಅವುಗಳಿಗೆ ಆಹಾರದ ಕೊರತೆ ಇದೆ ಎಂದಾದರೆ ಅವು ಬಹುಬೇಗ ಮನೆಯಿಂದ ಹೊರಗೆ ನಡೆಯುತ್ತವೆ.
ನೀರಿನಂಶವನ್ನು ಕಡಿಮೆ ಮಾಡಿ: ಜಿರಳೆಗಳು ಏಳು ದಿನಗಳಿಗಿಂತ ಹೆಚ್ಚಿನ ಕಾಲ ನೀರಿಲ್ಲದೆ ಬದುಕಲಾರವು. ಹೀಗಾಗಿ ಮನೆಯಲ್ಲಿ ತೇವದ ಪ್ರಮಾಣವನ್ನು ತಗ್ಗಿಸುವುದು ಮತ್ತು ಪ್ರಚಲಿತದಲ್ಲಿರುವ ನೀರಿನ ಸೋರಿಕೆಯನ್ನು ಸರಿಪಡಿಸುವುದು ಅವುಗಳ ಸಾವಿಗೆ ಕಾರಣವಾಗುತ್ತದೆ. ಮನೆಯಲ್ಲಿ ಚೆನ್ನಾಗಿ ಗಾಳಿ ಆಡಬೇಕು, ಸೂರ್ಯನ ಬೆಳಕು ಮನೆಯೊಳಗೆ ಬರಬೇಕು. ಮನೆ ಸ್ವಚ್ಛ ಮತ್ತು ಶುಷ್ಕವಾದ ವಾತಾವರಣದಿಂದ ಕೂಡಿರಬೇಕು.
ಬಲವಾದ ಸುಗಂಧವನ್ನು ಬಳಸಿ: ನೆಲದ ಮೇಲೆ ಬಲವಾದ ಪರಿಮಳಯುಕ್ತ ದ್ರವ ಅಥವಾ ಯಾವುದೇ ಔಷಧೀಯ ಫಿನೈಲ್ ಗಳೊಂದಿಗೆ ನಿಯಮಿತವಾಗಿ ಸ್ವಚ್ಛಗೊಳಿಸಿ. ಬಲವಾದ ಸುಗಂಧವು ಆಹಾರಕ್ಕಾಗಿ ಹುಡುಕುತ್ತಾ ಬರುವ ಜಿರಳೆಗಳನ್ನು ಹೊರಹಾಕುತ್ತದೆ. ನೆಲ ಶುಚಿಗೊಳಿಸಿದ ನಂತರ ಹೆಚ್ಚಿನ ನೀರಿನಂಶ ಹಾಗೆಯೇ ಉಳಿದುಕೊಳ್ಳಲು ಬಿಡದಿರಿ. ಆದಷ್ಟು ಶುಷ್ಕವಾಗಿಡಲು ಪ್ರಯತ್ನಿಸಿ.
ಬೋರಿಕ್ ಆಮ್ಲ : ಬೋರಿಕ್ ಆಮ್ಲ ಜಿರಳೆಗಳ ನಿವಾರಣೆಗೆ ಉತ್ತಮ ಬಹು ಸಹಕಾರಿ. ನೆಲವನ್ನು ಬೋರಿಕ್ ಆಮ್ಲದಿಂದ ಸ್ವಚ್ಛಗೊಳಿಸಿದರೆ ಜಿರಳೆಗಳು ಆಕಡೆ ತಲೆ ಹಾಕದು.
ಬೇ ಎಲೆಗಳು: ಬೇ ಎಲೆಗಳು ಅತ್ಯಂತ ಪ್ರಬಲವಾದ ಪರಿಮಳವನ್ನು ಹೊಂದಿರುತ್ತವೆ. ಇವುಗಳ ಪರಿಮಳಕ್ಕೆ ಜಿರಳೆಗಳು ಹತ್ತಿರ ಬರಲಾರವು. ಜಿರಳೆಗಳು ಬರುವಂತಹ ಪ್ರದೇಶದಲ್ಲಿ ಈ ಎಲೆಯನ್ನು ಇಟ್ಟರೆ ಅವು ಪ್ರವೇಶ ಪಡೆಯಲಾರವು. ಈ ಎಲೆಯನ್ನು ಒಣಗಿಸಿ, ಪುಡಿಮಾಡಿ. ನಂತರ ಪುಡಿಯನ್ನು ಬೇಕೆಂದ ಜಾಗದಲ್ಲಿ ಹರಡುವುದರಿಂದ ಜಿರಳೆಯನ್ನು ತಡೆಯಬಹುದು.