ಮನೆಯಂಗಳಕ್ಕೆ ಅಕ್ರಮ ಪ್ರವೇಶ: ದೂರು

ಬಂಟ್ವಾಳ , ಜೂ.೪- ತಾಲೂಕಿನ ಪಾಣೆಮಂಗಳೂರು ಸಮೀಪದ ನಂದಾವರ ನಿವಾಸಿ ಮುಹ್ಸಿನ್ ಎಂಬವರ ಪುತ್ರ ಅಬ್ದುಲ್ ರಶೀದ್ ಅವರ ಮನೆಯಂಗಳಕ್ಕೆ ಅಕ್ರಮ ಪ್ರವೇಶಗೈದ ನೆರೆ ಮನೆ ನಿವಾಸಿಗಳಾದ ರೇಶ್ಮಾ, ಆಶಾ, ಶಾಲಿನಿ, ಪ್ರಿಯಾ, ಮಾಲಿನಿ, ಪೂರ್ಣಿಮಾ, ಸುಂದರ, ಪ್ರಕಾಶ್, ಸಂದೇಶ್, ಪ್ರೀತಂ, ಗೌತಮ್ ಅವರುಗಳು ಹಲ್ಲೆ ನಡೆಸಿದ್ದಲ್ಲದೆ, ಕಂಪೌಂಡ್ ಕೆಡವಿ ಹಾಕಿದ ಬಗ್ಗೆ ಜಿಲ್ಲಾ ಎಸ್ಪಿ ಅವರಿಗೆ ದೂರು ನೀಡಲಾಗಿದೆ.

ರಶೀದ್ ಹಾಗೂ ನೆರೆಮನೆ ನಿವಾಸಿಗಳಾದ ಆರೋಪಿಗಳ ಮಧ್ಯೆ ಜಾಗದ ವಿವಾದವಿದ್ದು, ಈ ಹಿಂದೆ ಈ ಬಗ್ಗೆ ಪಂಚಾಯಿತಿಕೆ ನಡೆಸಲಾಗಿತ್ತು. ಬಳಿಕ ಇವರು ತನ್ನ ಮನೆಯ ಜಾಗದಲ್ಲಿ ಕಂಪೌಂಡ್ ಕಟ್ಟಿದ್ದು, ಅದನ್ನು ಮೇ ೩೦ ರಂದು ಆರೋಪಿಗಳು ಬಲವಂತವಾಗಿ ಮನೆಯಂಗಳಕ್ಕೆ ಅಕ್ರಮ ಪ್ರವೇಶಿಸಿ ಕಂಪೌಂಡ್ ಕೆಡವಿ ಹಾಕಿರುತ್ತಾರೆ ಎಂದು ಜಿಲ್ಲಾ ಎಸ್ಪಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.

ಜಾಗದ ವಿವಾದ ಸುಖಾಂತ್ಯ ಕಂಡಿದ್ದರೂ ಯಾವುದೇ ಪೂರ್ವ ಸೂಚನೆ ನೀಡದ ಆರೋಪಿಗಳು ಕೊರೋನಾ ಲಾಕ್ ಡೌನ್ ಸಂದರ್ಭ ಕೋವಿಡ್ ಮಾರ್ಗಸೂಚಿ ಉಲ್ಲಂಘಿಸಿ ಉದ್ದೇಶಪೂರ್ವಕವಾಗಿ ಅಕ್ರಮ ಪ್ರವೇಶ ಮಾಡಿ ಹಲ್ಲೆ ನಡೆಸಿ ಮನೆಯ ಕಂಪೌಂಡ್ ಕೆಡವಿ ಹಾಕಿರುತ್ತಾರೆ ಎಂದು ದೂರಲಾಗಿದೆ.

ಘಟನೆಯ ಬಗ್ಗೆ ರಶೀದ್ ಅವರು ಬಂಟ್ವಾಳ ನಗರ ಠಾಣಾ ಎಸೈ ಅವಿನಾಶ್ ಅವರಿಗೆ ದೂರಿಕೊಂಡಿದ್ದರೂ ಅವರು ದೂರು ಸ್ವೀಕರಿಸಲು ನಿರಾಕರಿಸಿರುವ ಹಿನ್ನಲೆಯಲ್ಲಿ ಗುರುವಾರ ಜಿಲ್ಲಾ ಎಸ್ಪಿ ಅವರಿಗೆ ಘಟನೆಯ ಬಗ್ಗೆ ಫೋಟೋ, ವೀಡಿಯೋ ಕ್ಲಿಪ್ ಸಹಿತ ಲಿಖಿತ ದೂರು ನೀಡಿದ್ದಲ್ಲದೆ ದೂರಿನ ಪ್ರತಿಯನ್ನು ಬಂಟ್ವಾಳ ಡಿವೈಎಸ್ಪಿ ಹಾಗೂ ಬಂಟ್ವಾಳ ನಗರ ಠಾಣಾ ಇನ್ಸ್‌ಪೆಕ್ಟರ್ ಅವರಿಗೆ ನೀಡಿದ್ದು, ಆರೋಪಿಗಳ ವಿರುದ್ದ ಸೂಕ್ತ ಕ್ರಮ ಕೈಗೊಂಡು ನ್ಯಾಯ ಒದಗಿಸಿಕೊಡುವಂತೆ ಆಗ್ರಹಿಸಿದ್ದಾರೆ.

ಜಿಲ್ಲಾ ಎಸ್ಪಿ ಅವರಿಂದ ರಶೀದ್ ಅವರ ದೂರು ಗುರುವಾರ ಇಮೇಲ್ ಮೂಲಕ ಬಂಟ್ವಾಳ ನಗರ ಠಾಣೆಗೆ ವರ್ಗಾವಣೆಗೊಂಡು ಬಂದ ಹಿನ್ನಲೆಯಲ್ಲಿ ಇದೀಗ ಪೊಲೀಸರು ವಿಚಾರಣೆ ಕೈಗೊಂಡಿದ್ದಾರೆ.