ಮನೆಮನೆಗೆ ಭೇಟಿ ನೀಡಿ ಅರಿವು ಮೂಡಿಸಿದ ಶಾಸಕರು

ನ್ಯಾಮತಿ.ಮೇ.೨೦ : ಚುನಾವಣೆ ಬಂದಾಗ ಜನಪ್ರತಿನಿಧಿಗಳು ಮತದಾರ ಪ್ರಭುಗಳಿಗೆ ಕೈಮುಗಿದು ಮತ ಕೇಳುವುದು ಮಾಮೂಲಿ, ಆದರೇ ಇಲ್ಲೋಬ್ಬ ಶಾಸಕರು ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಮನೆ ಮನೆಗೆ ತೆರಳಿ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.ಹೌದು ಹೊನ್ನಾಳಿ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಪಿ.ರೇಣುಕಾಚಾರ್ಯ ತಾಲೂಕಿನ ಸುರಹೊನ್ನೆ ಗ್ರಾಮಕ್ಕಿಂದು ಭೇಟಿ ನೀಡಿ ಗ್ರಾಮಸ್ಥರು ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಪ್ರಾರ್ಥಿಸಿದ ಪರಿ ಇದು.ಸುರಹೊನ್ನೆ ಗ್ರಾಮದಲ್ಲಿ ಕೊರೊನಾ ಸ್ಪೋಟಗೊಂಡು ಸಾಕಷ್ಟು ಸಾವು ನೋವು ಸಂಭವಿಸಿದ್ದು ಸಾಕಷ್ಟು ಬಡಾವಣೆಗಳಲ್ಲಿ ಸೀಲ್‌ಡೌನ್ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಗ್ರಾಮಕ್ಕೆ ಭೇಟಿ ನೀಡಿದ ಶಾಸಕರು ಮನೆ ಮನೆಗೆ ಭೇಟಿ ನೀಡಿ ನಿಮಗೆ ಕೈಮುಗಿದು, ಕಾಲಿಗೆ ಬೀಳ್ತೀನಿ ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಮನವಿ ಮಾಡಿದರು.ಗ್ರಾಮದಲ್ಲಿ ಕೊರೊನಾದಿಂದ ಮೃತಪಟ್ಟ ಕುಟುಂಬಗಳಿಗೆ ಸಾಂತ್ವಾನ ಹೇಳಿದ ಶಾಸಕರು ಧೈರ್ಯದಿಂದ ಇರುವಂತೆ ಮನವಿ ಮಾಡಿದರಲ್ಲದೇ, ಖುದ್ದು ಗ್ರಾಮದಲ್ಲಿ ಸ್ಯಾನಿಟೈಸರ್ ಮಾಡಿದರು.ಶಾಸಕರ ಮುಂದೆ ಕಣ್ಣೀರಾಕಿದ ಮಹಿಳೆ : ಕಳೆದ ಕೆಲ ದಿನಗಳ ಹಿಂದೆ ಕೊರೊನಾದಿಂದ ಪತಿಯನ್ನು ಕಳೆದುಕೊಂಡ ಮಹಿಳೆ ಜೀವನ ನಡೆಸುವುದು ಕಷ್ಟವಾಗಿದ್ದು ಉದ್ಯೋಗ ಕೊಡಿಸುವಂತೆ ಶಾಸಕರ ಮುಂದೆ ಕಣ್ಣೀರಿಟ್ಟರು. ಕೂಡಲೇ ಶಾಸಕರು ತಮ್ಮ ಹೊಡೆತನದ ಬಾಪೂಜಿ ಕಾಲೇಜಿನಲ್ಲಿ ಉದ್ಯೋಗ ಕೊಡಿಸುವ ಬರವಸೆ ನೀಡಿದರು.ನ್ಯಾಮತಿ ರೌಂಡ್ಸ್ :  ಮೂರು ದಿನ ಅವಳಿ ತಾಲೂಕುಗಳು ಲಾಕ್‌ಡೌನ್ ಆಗಲಿರುವ ಹಿನ್ನೆಲೆಯಲ್ಲಿ ನ್ಯಾಮತಿ ಪಟ್ಟಣದಾಧ್ಯಂತ ರೌಂಡ್ಸ್ ಹಾಕಿದ ಶಾಸಕರು ಜನರು ಲಾಕ್‌ಡೌನ್‌ಗೆ ಸಹಕಾರ ನೀಡುವಂತೆ ಮನವಿ ಮಾಡಿದರು. ಇದಾದ ಬಳಿಕ ನ್ಯಮಾತಿ ಸಮುದಾಯ ಆಸ್ಪತ್ರೆಯ ಭೇಟಿ ನೀಡಿದ ಶಾಸಕು ಕೋವಿಡ್ ಲಸಿಕೆ ಪಡೆಯಲು ಬಂದವರಿಗೆ ಧೈರ್ಯ ಹೇಳಿದರಲ್ಲದೇ ಲಸಿಕೆಗೆ ಯಾವುದೇ ತೊಂದರೆ ಯಾಗುವುದಿಲ್ಲಾ ಎಂದು ಬರವಸೆ ನೀಡಿದರು.ಈ ಸಂದರ್ಭದಲ್ಲಿ ತಹಸೀಲ್ದಾರ್ ತನುಜಾಸೌದತ್ತಿ,ನ್ಯಾಮತಿ ತಾ.ಪಂ. ಅಧ್ಯಕ್ಷ ಹನುಮಂತಪ್ಪ ಮಾಜಿ ಅಧ್ಯಕ್ಷ ರವಿಕುಮಾರ್,ಸುರಹೊನ್ನೆ ಗ್ರಾ.ಪಂ. ಅಧ್ಯಕ್ಷ ಹಾಲೇಶ್,ಉಪ ತಹಸೀಲ್ದಾರ್ ನಾಗರಾಜ್, ಮುಖಂಡರಾದ ಶ್ರೀನಿವಾಸ್,ಜಯರಾಮ್,ಅಜಯರೆಡ್ಡಿ ಹಾಗೂ ಇತರರು ಇದ್ದರು.