ಮನೆಮನೆಗೆ ತೆರಳಿ ಸೋಂಕು ತಗುಲಿರುವವರ ಪಟ್ಟಿ ಮಾಡಲು ಸೂಚನೆ

ಜಗಳೂರು.ಮೇ.19;  ಪಟ್ಟಣ ಪಂಚಾಯ್ತಿ ವ್ಯಾಪ್ತಿಯ ಎಲ್ಲಾ ವಾರ್ಡ್ಗಳಲ್ಲಿನ ಮನೆ ಮನೆಗೆ ಭೇಟಿ ಮಾಡಿ ಕೊರೋನ ಸೋಂಕಿತರ ಪ್ರಥಮ ಹಾಗೂ ದ್ವಿತೀಯ ಸಂಪರ್ಕಿತರ ಪಟ್ಟಿ ಮಾಡುವುದರ ಜೊತೆಗೆ ಸೋಂಕು ತಗುಲಿರುವ ಖಚಿತ ಮಾರ್ಗವನ್ನು ಪತ್ತೆ ಮಾಡಬೇಕು ಎಂದು ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ರಾಜು ಡಿ.ಬಣಕಾರ್ ಆಶಾ ಕಾರ್ಯಕರ್ತೆಯರಿಗೆ ಸೂಚಿಸಿದರು. ಪಟ್ಟಣದ ಪಟ್ಟಣ ಪಂಚಾಯ್ತಿ ಕಛೇರಿಯಲ್ಲಿ ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಇಲಾಖೆ ಸಿಬ್ಬಂಧಿಗಳ ಸಭೆಯಲ್ಲಿ ಮಾತನಾಡಿದರು.ಜಿಲ್ಲಾಧಿಕಾರಿಗಳ ಆದೇಶದಂತೆ ಕೊರೋನ ಸೋಂಕು ತಡೆಯಲು ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕಿದೆ. ಈಗಾಗಲೇ ಸೋಂಕು ನಿವಾರಕ ದ್ರವಣ ಸಿಂಪಡಿಸುವ ಕಾರ್ಯ ನಡೆಯುತ್ತಿದ್ದು, ಹೋಂ ಐಸೋಲೇಷನ್‌ನಲ್ಲಿ ಇರುವಂತಹ ಸೋಂಕಿತರ ದಿನನಿತ್ಯದ ಆರೋಗ್ಯ ಹಾಗೂ ಮನೆಯಲ್ಲಿ ವಾಸ ಮಾಡಲು ಮೂಲಭೂತ ಸೌಲಭ್ಯಗಳ ಬಗ್ಗೆ ಪರೀಕ್ಷೆ ಮಾಡಲಾಗುತ್ತಿದೆ. ಮನೆಯಲ್ಲಿ ಪ್ರತ್ಯೇಕ ಶೌಚಾಲಯ, ಪ್ರತ್ಯೇಕ ಕೋಣೆ ಇಲ್ಲದಿದ್ದರೆ ಅಂತವರನ್ನು ಕೋವಿಡ್ ಕೇರ್ ಸೆಂಟರ್‌ಗೆ ಕಳುಹಿಸಿಕೊಡಿ ಎಂದರು. ಆಶಾ ಕಾರ್ಯಕರ್ತೆಯರು ಆರೋಗ್ಯ ಇಲಾಖೆ ಸಿಬ್ಬಂದಿಯೊಂದಿಗೆ ಪ್ರತಿ ಮನೆ ಮನೆ ಭೇಟಿ ಮಾಡಿ ಆರೋಗ್ಯದ ಬಗ್ಗೆ ಜಾಗೃತಿ ವಹಿಸಿ ಪ್ರಥಮ ಹಾಗೂ ದ್ವಿತೀಯ ಸೋಂಕಿತರ ಪಟ್ಟಿ ಮಾಡುವ ಮೂಲಕ ಸೋಂಕಿನ ಮೂಲವನ್ನು ಪತ್ತೆ ಮಾಡಬೇಕಿದೆ. ಯಾರೂ ಸಹ ನಿರ್ಲಕ್ಷ್ಯ ವಹಿಸದೇ ಇಂತಹ ತುರ್ತು ಪರಿಸ್ಥಿತಿಯ ಕಾರ್ಯವನ್ನು ಸವಾಲಾಗಿ ಸ್ವೀಕರಿಸಿ ಪಟ್ಟಣ ದಲ್ಲಿ ಸೋಂಕಿನಿಂದ ನಿವಾರಿಸಲು ಶ್ರಮವಹಿಸ ಬೇಕು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಆರೋಗ್ಯ ನಿರೀಕ್ಷಕ ಕಿಫಾಯತ್, ಕಂದಾಯ ನಿರೀಕ್ಷಕ ಸಂತೋಷ್ ಸೇರಿದಂತೆ ಆಶಾ ಕಾರ್ಯ ಕರ್ತೆಯರು ಇದ್ದರು.