ಮನೆಮದ್ದುಗಳನ್ನು ಖಾಲಿಹೊಟ್ಟೆಯಲ್ಲಿ ಸೇವಿಸುವುದೇ ಒಳಿತು

ಯಾವುದೇ ಕಾಯಿಲೆ ಇರಲಿ ಹೊಟ್ಟೆ ತುಂಬ ಊಟ ಮಾಡಿದ ನಂತರ ಔಷಧ ಸೇವಿಸಬೇಕು ಎನ್ನುವುದು ವಾಡಿಕೆ. ಆದರೆ ಕೆಲವು ಮನೆಮದ್ದುಗಳನ್ನು ಖಾಲಿಹೊಟ್ಟೆಯಲ್ಲಿ ಸೇವಿಸುವುದೇ ಒಳಿತು.
ಬೆಳಿಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ ಉಗುರು ಬೆಚ್ಚಗಿನ ನೀರಿಗೆ ಜೇನುತುಪ್ಪ ಹಾಗೂ ನಿಂಬೆರಸ ಸೇರಿಸಿ ಕುಡಿದರೆ ಬೊಜ್ಜು ಕಡಿಮೆಯಾಗುತ್ತದೆ.
ಜೇಷ್ಠ ಮದ್ದು, ಹಿಪ್ಪಲಿ, ಜಾಯಿಕಾಯಿ, ಗದಗನಕಾಯಿ, ಶುಂಠಿ, ಮೆಣಸಿನ ಕಾಳನ್ನು ತೇಯ್ದು ಮಗುವಿಗೆ ಒಂದು ಚಮಚದಷ್ಟು ಮುಂಜಾನೆ ನೀಡಿದರೆ ಜಂತು ಹುಳುವಿನ ಸಮಸ್ಯೆ ಉಂಟಾಗದು.
ಹಸಿದ ಹೊಟ್ಟೆಯಲ್ಲಿ ಮೂರು ಲೋಟ ನೀರು ಕುಡಿದು ನಲವತ್ತೈದು ನಿಮಿಷಗಳ ನಂತರ ಆಹಾರ ಸೇವಿಸಬೇಕು. ಉತ್ತಮ ಚಯಾಪಚಯ ಕ್ರಿಯೆಗೆ, ತ್ವಚೆಯ ಕಾಂತಿ ಹೆಚ್ಚಲು, ಬೊಜ್ಜಿನ ಸಮಸ್ಯೆ ನಿವಾರಿಸಲು, ಹೊಳೆಯುವ ಹಾಗೂ ಆರೋಗ್ಯಕರ ಕೂದಲ ಬೆಳವಣಿಗೆಗೆ ಇದು ಸಹಕಾರಿ.
ಹಸಿದ ಹೊಟ್ಟೆಯಲ್ಲಿ ನೀರು ಕುಡಿಯುವುದು ಮೂತ್ರಪಿಂಡದಲ್ಲಿ ಕಲ್ಲು ಹಾಗೂ ಮೂತ್ರಕೋಶದ ಸೋಂಕಿಗೆ ಉತ್ತಮ ಮದ್ದು.
ಹಸಿದ ಹೊಟ್ಟೆಯಲ್ಲಿ ನೀರು ಕುಡಿಯುವುದು ಹೊಟ್ಟೆ ಮತ್ತು ಎದೆಯುರಿಯನ್ನು ಕಡಿಮೆ ಮಾಡುತ್ತದೆ. ದೇಹದಲ್ಲಿನ ವಿಷದ ಅಂಶವನ್ನು ಹೊರಹಾಕುತ್ತದೆ.
ಹಲ್ಲುಜ್ಜಿದ ನಂತರ ಹಸಿದ ಹೊಟ್ಟೆಯಲ್ಲೇ ಹದಿನೈದು ಕರಿಬೇವು ಹಾಗೂ ಅರ್ಧ ಚಮಚ ಜೀರಿಗೆಯನ್ನು ಸೇವಿಸುವ ರೂಢಿ ಮಾಡಿಕೊಂಡರೆ ಅನೇಕ ಲಾಭಗಳಿವೆ. ಕೂದಲು ಉದುರುವಿಕೆ ಕಡಿಮೆ ಆಗುತ್ತದೆ. ದೃಷ್ಟಿ ದೋಷ ಸಮಸ್ಯೆಗೂ ಪರಿಹಾರ ನೀಡಬಲ್ಲುದು.
ಖಾಲಿ ಹೊಟ್ಟೆಗೆ ಕರಿಬೇವು ಸೇವನೆ ಗ್ಯಾಸ್ಟ್ರಿಕ್‌ ಹಾಗೂ ಅಸಿಡಿಟಿಗೆ ರಾಮಬಾಣ, ಕೀಲುನೋವು ಕಡಿಮೆಯಾಗುತ್ತದೆ ಮತ್ತು ರೋಗನಿರೋಧಕ ಶಕ್ತಿ ವೃದ್ಧಿಸುತ್ತದೆ. ಸಂಧಿ ನೋವು ಮುಂತಾದ ಸಮಸ್ಯೆಗಳಿಗೆ ಕರಿಬೇವು ಸೇವನೆ ಪರಿಹಾರ ನೀಡುತ್ತದೆ. ಕರಿಬೇವು ಸೇವನೆ ಸಕ್ಕರೆ ಕಾಯಿಲೆಯನ್ನು ನಿಯಂತ್ರಿಸುತ್ತದೆ. ದೇಹಕ್ಕೆ ಅಗತ್ಯವಾದ ಕ್ಯಾಲ್ಸಿಯಂ ನೀಡುತ್ತದೆ. ಕಹಿಬೇವನ್ನು ಅರೆದು ಮುಂಜಾನೆ ಕುಡಿದರೆ ದೊಡ್ಡವರಲ್ಲಿ ಜಂತು ಹುಳುವಿನ ಸಮಸ್ಯೆ ಉಂಟಾಗುವುದಿಲ್ಲ. ವಾಯು ಸಂಬಂಧಿ ಸಮಸ್ಯೆಯನ್ನೂ ನಿವಾರಿಸುವ ಶಕ್ತಿ ಇದಕ್ಕಿದೆ.
ಹಸಿದ ಹೊಟ್ಟೆಯಲ್ಲಿ ಬೆಳ್ಳುಳ್ಳಿ ಸೇವಿಸುವುದರಿಂದ ರಕ್ತದೊತ್ತಡ ನಿಯಂತ್ರಣಕ್ಕೆ ಬರುತ್ತದೆ. ಹೊಟ್ಟೆಯನ್ನು ಬ್ಯಾಕ್ಟೀರಿಯಾದಿಂದ ಮುಕ್ತಗೊಳಿಸುತ್ತದೆ. ಜೀರ್ಣಕ್ರಿಯೆ ಉತ್ತಮವಾಗುತ್ತದೆ.