
ಹನೂರು ಮೇ.14:- ಮನೆತನದ ರಾಜಕಾರಣಕ್ಕೆ ಹೆಸರುವಾಸಿಯಾಗಿ ಕಾಂಗ್ರೆಸ್‍ನ ಭದ್ರಕೋಟೆಯಾಗಿದ್ದ ಹನೂರು ಕ್ಷೇತ್ರದಲ್ಲಿ ಇದೇ ಮೊದಲ ಭಾರಿ ಕಾಂಗ್ರೆಸ್‍ನ ನೀರಸ ಹಾಗೂ ಸ್ವಜನ ಪಕ್ಷಪಾತದ ಆಡಳಿತದಿಂದ ಬೇಸತ್ತ ಕ್ಷೇತ್ರದ ಮತದಾರರ ಪಟ್ಟುಬಿಡದ ನಿಲುವಿನಿಂದಾಗಿ ಕಾಂಗ್ರೆಸ್‍ನ ಭದ್ರ ಕೋಟೆ ಛಿದ್ರ ಛಿದ್ರವಾಗಿ ಅನ್ಯ ಮೂರನೇ ಜೆಡಿಎಸ್ ಪಕ್ಷದ ವ್ಯಕ್ತಿಗೆ ಮಣೆ ಹಾಕುವ ಮೂಲಕ ಮನೆತನದ ರಾಜಕೀಯಕ್ಕೆ ಅಂತ್ಯ ಹಾಡುವುದರ ಜತೆಗೆ ಹೊಸ ರಾಜಕಾರಣದ ಉದಯಕ್ಕೆ ಮುನ್ಮು ಡಿ ಯಾಗಿರುವುದು ಈ ಭಾರಿಯ ಚುನಾವಣೆಯ ವಿಶೇಷವಾಗಿದೆ.
ಕಳೆದ ಚುನಾವಣೆಯಲ್ಲಿ ಕಡಿಮೆ ಮತಗಳ ಅಂತರದಿಂದ ಪರಾಭವಗೊಂಡರೂ ವಿಚಲಿತರಾಗದ ಜೆಡಿಎಸ್ ಅಭ್ಯರ್ಥಿ ಎಂ.ಆರ್ ಮಂಜುನಾಥ್ ಛಲ ಬಿಡದ ವಿಕ್ರಮನಂತೆ ಇಲ್ಲೇ ಬೀಡು ಬಿಡುವ ಮೂಲಕ ಯಾವುದೇ ಅಧಿಕಾರವಿಲ್ಲದಿದ್ದರೂ ಸದ್ದುಗದ್ದಲವಿಲ್ಲದೆ ಹನೂರು ಕ್ಷೇತ್ರದ ಜನತೆಯೊಂದಿಗೆ ನಿರಂತರ ಒಡನಾಟವಿಟ್ಟುಕೊಂಡು ಬಹುಪಾಲು ಯುವ ಪಡೆಯನ್ನೇ ಮುಂದಿಟ್ಟುಕೊಂಡು ಕ್ಷೇತ್ರದ ಜನರ ನಾಡಿ ಮಿಡಿತ ಅರಿತು ಅವರ ಕಷ್ಟ ಸುಖಗಳಲ್ಲಿ ಭಾಗಿಯಾಗಿ ಜನರ ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾಗಿ ಮತದಾರರ ಮನವೊಲಿಸಿ ಕೊನೆಗೂ ಗೆಲುವಿನ ನಗೆ ಬೀರುವಲ್ಲಿ ಜೆಡಿಎಸ್ ಮಂಜುನಾಥ್ ಯಶಷು ಕಂಡಿದ್ದಾರೆ.
ಕಳೆದ ಐದು ವರ್ಷಗಳಿಂದಲೂ ನಿರಂತರವಾಗಿ ಎಡೆಬಿಡದೆ ಕ್ಷೇತ್ರದಲ್ಲಿ ಸಾವು ನೋವು ಸಂಭವಿಸಿದ ಯಾವುದೇ ಗಡಿಯಂಚಿನಲ್ಲಿರುವ ಮನೆಗಳಿಗೂ ತೆರಳಿ ಸಾಂತ್ವನ ಹೇಳುವುದರ ಜತೆಗೆ ವೈಯುಕ್ತಿಕ ಧನ ಸಹಾಯ ಮಾಡುವುದು ಕ್ರೀಡಾಶಕ್ತ ಯುವಕರಿಗೆ ಆರ್ಥಿಕ ಸಹಾಯ ಮಾಡುವುದು ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗಿ ದೇಗುಲಗಳ ಅಭಿವೃದ್ದಿಗಾಗಿ ಹಣಕಾಸಿನ ನೆರವು ನೀಡುವುದು ಸೇರಿದಂತೆ ಹತ್ತು ಹಲವಾರು ಕಾರ್ಯಗಳಿಗೆ ಅಸಹಾಯಕರ ಬೆನ್ನುಲುಬಾಗಿ ನಿಲ್ಲುವ ಮೂಲಕ ಜನಾನುರಾಗಿಯಾಗಿ ಶ್ರಮಿಸಿರುವುದೇ ಅವರ ಇಂದಿನ ಗೆಲುವಿನ ಗುಟ್ಟಾಗಿದೆ.
ಅವರ ಗೆಲುವಿನಲ್ಲಿ ಅವರ ಪತ್ನಿ ನಂದಿನಿ ಮಂಜುನಾಥ್ ಪಾತ್ರವು ಪ್ರಮುಖವಾಗಿದ್ದು ತಾವು ಆಗರ್ಭ ಶ್ರೀಮಂತರಾಗಿದ್ದರೂ ಕೂಡ ಅದಾವುದನ್ನು ಮನಗಾಣದೆ ಹಮ್ಮು ಬಿಮ್ಮು ತೋರದೆ ಅವರೂ ಕೂಡ ಕ್ಷೇತ್ರದಾದ್ಯಂತದ ಮಹಿಳಾ ಸಂಘಟನೆಗಳವರೊಂದಿಗೆ ಉತ್ತಮ ಒಡನಾಟ ಹೊಂದಿ ತಮ್ಮ ಪತಿ ಅಧಿಕಾರಕ್ಕೆ ಬರಲು ಸಹಕರಿಸಿದರೆ ಮುಂದಿನ ದಿನಗಳಲ್ಲಿ ಮಹಿಳಾ ಸಂಘಟನೆಗಳಿಗೆ ಹೆಚ್ಚಿನ ಸೌಲಭ್ಯ ಕಲ್ಪಿಸುವುದಾಗಿ ಭರವಸೆ ನೀಡಿ ಯಶಷು ಸಾಧಿಸಿದ್ದಲ್ಲದೆ ಸಾಮಾನ್ಯ ಕಾರ್ಯಕರ್ತರೊಂದಿಗೆ ಸರಳವಾಗಿ ಸಾಮಾನ್ಯರಂತೆ ಮನೆಮನೆಗೂ ತೆರಳಿ ಮಹಿಳೆಯರ ಮನವೊಲಿಸಿ ಮತಯಾಚನೆ ಮಾಡುವುದರಲ್ಲೂ ಮುಂಚೂಣಿಯಲ್ಲಿದ್ದದ್ದೂ ಕೂಡ ಗೆಲುವಿಗೆ ಮತ್ತೊಂದು ಕಾರಣವಾಗಿದೆ.
ಕಾಂಗ್ರೆಸ್‍ನ ಪಟ್ಟಭದ್ರ ನಿರ್ಣಾಯಕ ಹಿರಿಯ ಮತದಾರರ ಕುಟುಂಬಗಳಲ್ಲೂ ಕೂಡ ಹಿರಿಯರು ಕಟ್ಟಾ ಬೆಂಬಲಿಗರು ಕಾಂಗ್ರೆಸ್‍ಗೆ ಮತ ನೀಡಿದರೆ ಅವರ ಮಕ್ಕಳಾದ ಯುವ ಸಮೂಹ ಬದಲಾವಣೇ ಬಯಸಿ ಜೆಡಿಎಸ್‍ಗೆ ಮತ ನೀಡಿದ್ದೂ ಈ ಭಾರಿಯ ವಿಶೇಷ. ಹಾಗೆಯೇ ಸೋಲು ಗೆಲುವಿಗೆ ಪ್ರಮುಖ ಕಾರಣ ಕರ್ತರಾದ ಕಾಡಂಚಿನ ಗ್ರಾಮಗಳವರು ಮೂಲಭೂತ ಸೌಕರ್ಯ ವಂಚಿತರಾಗಿ ಬೇಸತ್ತು ಸ್ವ ಇಚ್ಛೆಯಿಂದ ಸಾಮೂಹಿಕವಾಗಿ ಜೆಡಿಎಸ್ ಬೆಂಬಲಿಸಿದ್ದೂ ಕೂಡ ಜೆಡಿಎಸ್ ಗೆಲುವಿಗೆ ಮತ್ತೊಂದು ವರದಾನವೆಂದರೂ ತಪ್ಪಲ್ಲ.
ಇವರದು ಈ ಕಥೆಯಾದರೆ ಮೂರು ಭಾರಿ ಗೆದ್ದದ್ದನ್ನೇ ಹ್ಯಾಟ್ರಿಕ್ ಸಾಧನೆಯೆಂಬಂತೆ ಮುಡಿಗೇರಿಸಿಕೊಂಡು ಬೀಗಿದ ಕಾಂಗ್ರೆಸ್‍ನ ಶಾಸಕ ಆರ್.ನರೇಂದ್ರ ಅವರು ಬೇಕಾಬಿಟ್ಟಿ ಬೇಜವಾಬ್ದಾರಿತನದ ದುರಾಡಳಿತ ನಡೆಸುವ ಮೂಲಕ ಕ್ಷೇತ್ರದ ಅಭಿವೃದ್ದಿಯನ್ನು ನಿರ್ಲಕ್ಷಿಸಿ ಕಾರ್ಯಕರ್ತರನ್ನು ಕಡೆಗಣಿಸಿದ್ದೇ ಇಂದಿನ ಅವರ ಸೋಲಿಗೆ ಮುಳುವಾಯಿತು ಎಂಬುದನ್ನು ಅವರ ಪಕ್ಷದವರಲ್ಲೇ ಚರ್ಚಿತವಾಗುತ್ತಿರುವುದನ್ನು ಅಲ್ಲಗಳೆಯುವಂತಿಲ್ಲ.
ಕ್ಷೇತ್ರದ ಕೇಂದ್ರ ಸ್ಥಾನದಲ್ಲಿ ಇರುವ ಪಟ್ಟಣ ಪಂಚಾಯತಿ ಆಡಳಿತದಲ್ಲಿ ವೈಫಲ್ಯ ಸರ್ಕಾರಿ ಕಛೇರಿಗಳಲ್ಲಿ ತಮಗೆ ಬೇಕಾದ ಭ್ರಷ್ಟ ಅಧಿಕಾರಿಗಳನ್ನು ತುಂಬುವ ಮೂಲಕ ಸಾರ್ವಜನಿಕರ ಶೋಷಣೆ ಭ್ರಷ್ಟಾಚಾರ ಮಧ್ಯವರ್ತಿಗಳ ಹಾವಳಿ ಹೆಸರಿಗೆ ತಾಲ್ಲೂಕಾದರೂ ಸರ್ಕಾರಿ ಕಛೇರಿಗಳಿಗೆ ಕೊಠಡಿ ಸೌಲಭ್ಯ ಕಲ್ಪಿಸುವಲ್ಲಿ ಸೋಲು. ರಸ್ತೆ ಆರೋಗ್ಯ ಕುಡಿಯುವ ನೀರಿನ ಕೊರತೆ ಸಾರ್ವಜನಿಕರಿಗೆ ಕನಿಷ್ಟ ಮೂಲಭೂತ ಸೌಕರ್ಯ ಕಲ್ಪಿಸುವಲ್ಲಿ ಸೋಗಲಾಡಿತನ ಇವರ ಸೋಲಿಗೆ ಪ್ರಮುಖ ಕಾರಣಗಳು ಎಂಬುದು ಪ್ರಜ್ಞಾವಂತ ನಾಗರೀಕರ ಆಕ್ರೋಶಭರಿತ ನುಡಿಗಳು.
ಕ್ಷೇತ್ರದಾದ್ಯಂತದ ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳ ಡೋಲಾಯಮಾನ ಸ್ಥಿತಿ ದೇವರಿಗೆ ಪ್ರೀತಿ. ಅದರಲ್ಲೂ ರಾಜ್ಯದ ಗಡಿಯಂಚಿನ ಗರಿಕೆಕಂಡಿಯಿಂದ ನೆರೆಯ ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಹಾಳಾಗಿ ಗುಂಡಿ ಗೊಟರುಗಳಿಂದ ಕೂಡಿದ್ದರೂ ಕಿಂಚಿತ್ತೂ ಗಮನ ಹರಿಸದೆ ಹಾಗೆಯೇ ನರಕ ಸದೃಷವಾಗಿ ಬಿಟ್ಟು ತಮಗೂ ಇದಕ್ಕೂ ಸಂಬಂಧವೇ ಇಲ್ಲ ಎನ್ನುವಷ್ಟರ ಮಟ್ಟಿಗೆ ನಿರ್ಲಕ್ಷ್ಯ ತಾಳಿ ಮಗುಮ್ಮಾಗಿ ಉಳಿದದ್ದು.
ಉಳಿದಂತೆ ಕ್ಷೇತ್ರಕ್ಕೆ ಬಿಜೆಪಿ ಟಿಕೆಟ್ ಆಕಾಂಕ್ಷಿಗಳಾಗಿ ಭಾರೀ ಕುಳಗಳ ಆಗಮನದಿಂದ ಅಬ್ಬಿರಿದು ಬೊಬ್ಬಿರಿಯುವ ಮೂಲಕ ವಿವಿಧ ಸಭೆ-ಸಮಾರಂಭಗಳನ್ನು ನಡೆಸಿ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲೂ ತಮ್ಮ ಕರಾಮತ್ತು ಮೆರೆಸಿ ಯಾರ?ರಾಬರ?ರಿ ದುಂದು ವೆಚ್ಚ ಮಾಡಿ ಯಥೇಚ್ಚ ಪ್ಲಕ್ಸ್ ಬ್ಯಾನರ್‍ಗಳು ರಾರಾಜಿಸುವಂತೆ ಪ್ಲಕ್ಸ್ ಬ್ಯಾನರ್ ಸಂಸ್ಸೃತಿಯನ್ನು ಹನೂರು ಕ್ಷೇತ್ರದಲ್ಲಿ ಹುಟ್ಟು ಹಾಕಿದವರೇ ಇವರೆಂದರೂ ತಪ್ಪಾಗಲಾರದು.
ಹನೂರಿನಲ್ಲಿ ಬಿಜೆಪಿಯದೇ ಆರ್ಭಟ ಕಾರು ಭಾರು ಎನ್ನುವ ಹಾಗೆ ಒಂದೆರಡು ವರ್ಷಗಳ ಕಾಲ ಮೆರೆದು ಉಳಿದ ಪಕ್ಷಗಳವರ ನಿದ್ದೆಗೆಡಿಸಿತ್ತಾದರೂ ಕೊನೆ ಗಳಿಗೆಯಲ್ಲಿ ಅವರುಗಳಿಗೆ ಟಿಕೆಟ್ ಸಿಗದ ಕಾರಣ ಹತಾಶರಾಗಿ ಬೇಸತ್ತು ತಟಸ್ಥವಾಗಿ ಉಳಿದು ಬಿಜೆಪಿಯ ಅಧಿಕೃತ ಅಭ್ಯರ್ಥಿ ಪ್ರೀತನ್ ನಾಗಪ್ಪನವರ ಪರವೂ ಪ್ರಚಾರ ಮಾಡದೆ ಹಿಂದೆ ಸರಿಯುವ ಮೂಲಕ ಒಳಗೊಳಗೆ ಕಾಲೆಳೆದು ಪ್ರೀತನ್‍ರನ್ನು ಸೋಲಿಸಿ ಮೂಲೆ ಗುಂಪು ಮಾಡಿದರೆ
ಮುಂದಿನ ದಿನಗಳಲ್ಲಿ ತಾವೇ ಅಭ್ಯರ್ಥಿಗಳಾಗಿ ಮೆರೆಯಬಹುದೆಂಬ ಕುಟಿಲ ಮನೋಭಾವನೆಯಿಂದ ಹೇಳ ಹೆಸರಿಲ್ಲದಂತೆ ಕಣ್ಮರೆಯಾಗಿದ್ದು ಸಹ ಪ್ರಬಲ ಪೈಪೆÇೀಟಿ ನೀಡಬೇಕಿದ್ದ ಬಿಜೆಪಿ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟು ಸೋಲು ಅನುಭವಿಸಲು ಮತ್ತೊಂದು ಕಾರಣವೆಂಬುದು ಜಗಜ್ಜಾಹೀರಾಯಿತು.