ಮನೆತನದ ಈವರೆಗಿನ ಸಮಾಜಸೇವೆಯೇ ನನ್ನ ಗೆಲುವುಗೆ ಸಹಕಾರಿ: ಸತೀಶ್

* ನಾನು ಗಣಿ ಉದ್ಯಮಿ
* ಅಕ್ರಮ ಗಣಿಗಾರಿಕೆಯಲ್ಲಿ ಇಲ್ಲ
* ದಾನವೇ ನಮ್ಮ ಪ್ರವೃತ್ತಿ
* ಸಮಾಜ ಸೇವೆಯೇ ನಮಗೆ ಆಶೀರ್ವಾದ
* ವ್ಯವಹಾರ ಬೇರೆ ರಾಜಕೀಯ ಬೇರೆ.
* ಪಕ್ಷದಲ್ಲಿನ ಎಲ್ಲರ ಸಹಕಾರವಿದೆ.

(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ನ.30: ನಮ್ಮ ಮನೆತನದ ಸಮಾಜಸೇವೆಯ ಫಲವೇ ನಾನು ಪ್ರಚಾರಕ್ಕೆ  ಹೋದ ಕಡೆಗಳಲ್ಲಿ ಜನತೆ ಗುರುತಿಸಿ ನನಗೆ ಮತ ನೀಡುವ ಭರವಶೆ ನೀಡಿರುವುದರಿಂದ ನನಗೆ ಗೆಲುವಿನ ವಿಶ್ವಾಸ ಇದೆ ಎಂದು ವಿಧಾನ ಪರಿಷತ್ ಚುನಾವಣೆಯ ಬಿಜೆಪಿ ಅಭ್ಯರ್ಥಿ ವೈ.ಎಂ.ಸತೀಶ್ ಹೇಳಿದರು.
ಅವರು‌ ಇಂದು ನಗರದ ವೀರನಗೌಡ ಕಾಲೋನಿಯಲ್ಲಿನ  ತಮ್ಮ ಖಾಸಗೀ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡುತ್ತಿದ್ದರು.
ನಮ್ಮ ತಾತಾ ವೈ.ಮಹಾಬಲೇಶ್ವರಪ್ಪ ಅವರು 1930 ರ ಸಂದರ್ಭದಲ್ಲಿಯೇ ಬ್ರಿಟೀಷ್ ಆಡಳಿತದಲ್ಲಿ ಜಿಲ್ಲಾ ಬೋರ್ಡ್ ಅಧ್ಯಕ್ಷರಾಗಿ ಅಂದು ಜಿಲ್ಲೆಯಲ್ಲಿ ಹೆಚ್ಚಾಗಿದ್ದ ತೆಲುಗಿನ ಪ್ರಭಾವ ಕಡಿಮೆ ಮಾಡಲು ಕನ್ನಡ ಶಾಲೆಗಳನ್ನು ಹೆಚ್ಚಾಗಿ ಆರಂಭಿಸಿದರು. ಅಲ್ಲದೆ ಪದವಿ ಕಾಲೇಜು ಬಳ್ಳಾರಿಯಲ್ಲಿ ಇರಲಿಲ್ಲ. ವೀರಶೈವ ಕಾಲೇಜ್ ಆರಂಭಿಸಲು ಮದ್ರಾಸ ಸರ್ಕಾರದಿಂದ 100 ಎಕರೆ ಜಮೀನು ವೀ.ವಿ ಸಂಘಕ್ಕೆ ತಂದುಕೊಟ್ಟರು. ಹೀಗೆ ಅನೇಕ ಅಭಿವೃದ್ಧಿ ಸಾಮಾಜ ಸೇವೆ ಮಾಡಿದ್ದು ಇಂದಿಗೂ ಜಿಲ್ಲೆಯ ಜನತೆ ಮರೆತಿಲ್ಲ.
ನಾನು ನನ್ನ ತಂದೆ ಬಸವರಾಜಪ್ಪ ಗಣಿ ಉದ್ಯಮಿಗಳಾಗಿದ್ದೆವು. ಅಕ್ಷಯ ಪಾತ್ರೆ ಯೋಜನೆ ಎಲ್.ವಿ.ನೇತ್ರ ಚಿಕಿತ್ಸಾ ಆಸ್ಪತ್ರೆ, ಅನುಗ್ರಹ ಪೌಂಡೇಷನ್ ಮೂಲಕ ಬುದ್ದಿಮಾಂದ್ಯ ಮಕ್ಕಳ ಶಾಲೆ ಹೀಗೆ ಅನೇಕವುಗಳ ಆರಂಭಕ್ಕೆ ನೆರವು ನೀಡಿದೆ. ಈಗಲೂ ನೀಡುತ್ತಿದೆ. ದಾನ ಮಾಡಿತ್ತು. ಯಾರಿಗೂ ಹೇಳುತ್ತಿರಲಿಲ್ಲ. ಆದರೂ ಸಮಾಜ ಅದರಿಂದಲೇ ನಮ್ಮನ್ನು ಗುರುತಿಸಿದೆ. ಇಂಜಿನೀಯರಿಂಗ್ ಪದವೀಧರನಾಗಿರುವ ನನಗೆ ಈಗ 57 ವರ್ಷ ನನ್ನ ಮನೆಯ ಇತರರು ರಾಜಕೀಯದಲ್ಲಿ ಇಲ್ಲ.
ಸಂಘ ಪರಿವಾರದ ಜೊತೆ ಸಂಪರ್ಕ ಇತ್ತು. ನಮ್ಮ ತಾತ, ಚಿಕ್ಕಪ್ಪ ಲೋಕಸಭೆ, ವಿಧಾನಸಭೆಗೆ ಸ್ವತಂತ್ರ, ಬಿಜೆಪಿ ಪಕ್ಷದಿಂದ ಸ್ಪರ್ಧಿಸಿದ್ದರು. ನಾನು ಕಳೆದ 5-6 ವರ್ಷಗಳ ಹಿಂದೆ ಬಿಜೆಪಿ ಸದಸ್ಯನಾಗಿ ಕಳೆದ ಈಶಾನ್ಯ ಪದವೀಧರ ಕ್ಷೇತ್ರದಿಂದ ಸ್ಪರ್ಧಿಸಲು ಬಯಸಿದ್ದು ಆಗ ಟಿಕೆಟ್ ಸಿಗಲಿಲ್ಲ, ಈಗ ಪಕ್ಷ ಟಿಕೆಟ್ ನೀಡಿದೆ.
ನಾಮಪತ್ರ ಸಲ್ಲಿಸಿದ ನಂತರ ಪ್ರಚಾರ ಕಾರ್ಯಕ್ಕೆ ತೆರಳಿದ್ದೆ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ಬಂದಿದೆ. ಹಳ್ಳಿಗಳ ಗ್ರಾಮ ಪಂಚಾಯ್ತಿ ಸದಸ್ಯರು ನಮ್ಮ ಮನೆತನದಿಂದ ಗುರುತಿಸಿ ಮತ್ತು ಪಕ್ಷದ ಅಭಿವೃದ್ಧಿ ಕಾರ್ಯಗಳ ಚಿಂತನೆಯೊಂದಿಗೆ ನನಗೆ ಮತ ನೀಡುವ ಭರವಸೆ ನೀಡಿದ್ದಾರೆ. ಅದಕ್ಕಾಗಿ ನನಗೆ ಗೆಲುವಿನ ಭರವಸೆ ಹೆಚ್ಚಾಗಿದೆ.
ನಮ್ಮ ಪಕ್ಷದಲ್ಲಿ ಯಾವುದೇ ಭಿನ್ನಮತ ಇಲ್ಲ, ಎಲ್ಲರ ಸಹಕಾರ ಇದೆ ಅದನ್ನು ಪಕ್ಷ ಗಮನಿಸುತ್ತಿದೆ ಎಂದ ಅವರು ಎಲ್ಲರ ಸಹಕಾರದಿಂದಲೇ ಗೆಲುವಾಗಲಿದೆಂದರು.
ಪ್ರತಿಸ್ಪರ್ಧಿ ಕಾಂಗ್ರೆಸ್ ನ ಕೊಂಡಯ್ಯ ಅವರ ಪುತ್ರನ ಜೊತೆ ವ್ಯವಹಾರಿಕ ಪಾಲುದಾರಿಕೆ ಅದು 10-12 ವರ್ಷ ಕೆಳಗಿನದು. ರಾಜಕೀಯ ಬೇರೆ ವ್ಯವಹಾರ ಬೇರೆ ಎಂದರು.
ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ನನ್ನ ಆಯ್ಕೆ ಮಾಡಿದರೆ ಗ್ರಾಮಗಳ ಅಭಿವೃದ್ಧಿಗೆ ಮತ್ತಷ್ಟು ಯೋಜನೆ ತರಲಿದೆ. ಗ್ರಾಮ ಪಂಚಾಯ್ತಿ ಅಧ್ಯಕ್ಷರಿಗೆ ಮಾಸಿಕ 10 ಸಾವಿರ ಗೌರವಧನ ನೀಡುವುದು, ಯೋಜನೆಗಳ ಅನುಷ್ಠಾನಕ್ಕೆ ಸಹಕಾರ ಮಾಡಲಿದೆಂದರು.
ಪ್ರಚಾರಕ್ಕೆ ರಾಜ್ಯ ನಾಯಕರೂ ಬರುವ ಸಾಧ್ಯತೆ ಇದೆ ಎಂದ ಅವರು ಪ್ರತಿ ಸ್ಪರ್ಧಿ ಮತದಾರರಿಗೆ ಏನೇ ನೀಡಲಿ ಆ ಬಗ್ಗೆ ನನ್ನ ಟೀಕೆ ಇಲ್ಲ. ನಾನಂತೂ ಪಕ್ಷದ ಸಿದ್ಧಾಂತದಂತೆ ಹಣ ಹಂಚಿ ಮತ ಕೇಳಲ್ಲ ಎಂದರು.
 ಗಣಿ ಉದ್ಯಮಿ
ನಾನು ಗಣಿ ಉದ್ಯಮಿ ಆದರೆ ಅಕ್ರಮ ಗಣಿಗಾರಿಕೆಯಲ್ಲಿ ಬಾಗಿಯಾಗಿಲ್ಲ, ಆಂಧ್ರ ಪ್ರದೇಶದಲ್ಲಿ ನಮ್ಮ ಗಣಿ ವ್ಯವಹಾರ ಆದರೂ ಲೋಕಾಯುಕ್ತರ ವ್ಯಾಪ್ತಿಗೆ ಬರದಿದ್ದರೂ ನಮ್ಮ ಕಂಪನಿ ಹೆಸರು ಸೇರಿಸಿತ್ತು. ಈ ಬಗ್ಗೆ ಪತ್ರ ಬರೆದು ತಿಳಿಸಿದೆ. ಸುಪ್ರೀಂ ಕೋರ್ಟ್ ಸಿ.ಈ.ಸಿ ವರದಿಯಲ್ಲೂ ನಾವು ಅಕ್ರಮ ಮಾಡಿರುವ ಬಗ್ಗೆ ವರದಿ ಇಲ್ಲ. ಈ ವರೆಗೆ ಯಾವುದೇ ತನಿಖಾ ಸಂಸ್ಥೆಯಿಂದ ನಮಗೆ ವಿಚಾರಣೆ ನಡೆದಿಲ್ಲ. ನಾವು ನ್ಯಾಯಯುತವಾಗಿ ಗಣಿಗಾರಿಕೆ ನಡೆಸಿದ್ದೇವೆ. ನಮ್ಮ ಗಣಿ ಪ್ರದೇಶದಲ್ಲಿ ರಾಜ್ಯದ ಗ‌ಡಿ ಗುರುತು ವಿವಾದವಿದ್ದು ಅದನ್ನು ಗುರುತಿಸುವ ಕಾರ್ಯ ನಡೆದಿದೆಂದರು.