ಮನೆಗೋಡೆ ಕುಸಿದು ಮಗುಸಾವು

ಸಂಜೆವಾಣಿ ವಾರ್ತೆ
ದಾವಣಗೆರೆ.ಜು.೨೫; ಮನೆಗೋಡೆ ಕುಸಿದು‌ ಒಂದು ವರ್ಷದ ಮಗು ಸಾವನ್ನಪ್ಪಿದ ಘಟನೆ ಹರಿಹರ ತಾಲೂಕಿನ ಕುಂಬಳೂರು ಗ್ರಾಮದಲ್ಲಿ  ಇಂದು ಬೆಳಿಗ್ಗೆ ನಾಲ್ಕು ಗಂಟೆಗೆ ನಡೆದಿದೆ.
ಸ್ಪೂರ್ತಿ(01) ಸಾವನ್ನಪ್ಪಿದ ಹೆಣ್ಣು ಮಗು. ಆಕೆಯ ತಂದೆ ಕೆಂಚಪ್ಪ (32) ಗೋಡೆ ಕುಸಿತದಿಂದ ಗಾಯಗೊಂಡಿದ್ದಾರೆ.ಅವರನ್ನು ದಾವಣಗೆರೆ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.ಕಳೆದ ಮೂರು‌ ದಿನಗಳಿಂದ ಸುರಿದ ನಿರಂತರ ಮಳೆಯಿಂದಾಗಿ  ಕೆಂಚಪ್ಪ‌ ಅವರ ಮನೆ  ಸಂಪೂರ್ಣವಾಗಿ ಹಾಳಾಗಿದೆ.ಕಳೆದ ರಾತ್ರಿ  ಕೆಂಚಪ್ಪ ಮಗು ಸ್ಪೂರ್ತಿ ಹಾಗೂ‌ ಪತ್ನಿ  ಲಕ್ಷ್ಮಿ ಮಲಗಿಕೊಂಡ ವೇಳೆ ಗೋಡೆ ಕುಸಿದು ಬಿದ್ದು ಮಗು ಸಾವನ್ನಪ್ಪಿದೆ. ಮಲೇಬೆನ್ನೂರು‌ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.