
ಭಾಲ್ಕಿ:ಎ.1: ಹಿರೇಮಠ ಸಂಸ್ಥಾನ ಭಾಲ್ಕಿ ಅವರ ಆಶ್ರಯದಲ್ಲಿ ಏರ್ಪಡಿಸಿದ್ದ ವಿಶ್ವಗುರು ಬಸವಣ್ಣನವರ ಜಯಂತಿ ಉತ್ಸವ ಮತ್ತು ವಚನ ಯಾತ್ರೆ 2023. ಪೂಜ್ಯ ಶ್ರೀ. ಮ.ಘ.ಚ. ಡಾ. ಚನ್ನಬಸವ ಪಟ್ಟದ್ದೇವರ 24ನೆಯ ಸ್ಮರಣೋತ್ಸವ ನಿಮಿತ್ತ ದಿನಾಂಕ 15/01/2023 ರಿಂದ ದಿನಾಂಕ 31/03/2023 ರವರೆಗೆ ಭಾಲ್ಕಿ ಪಟ್ಟಣದ ಮನೆ ಮನೆಗಳಲ್ಲಿ ಪ್ರತಿನಿತ್ಯ ಸಾಗಿಬಂದ ಸರಣಿ ಮನೆಗೊಂದು ಅನುಭವ ಮಂಟಪ ಕಾರ್ಯಕ್ರಮದ ಸಮಾರೋಪ ಸಮಾರಂಭ ಕಾರ್ಯಕ್ರಮವು ಶರಣೆ ವಿದ್ಯಾವತಿ ಸೋಮನಾಥಪ್ಪ ಅಷ್ಟುರೆ ಅಷ್ಟುರೆ ಕಲ್ಯಾಣ ಮಂಟಪದ ಹತ್ತಿರ ಗುರು ಕಾಲೊನಿ ಭಾಲ್ಕಿ ಅವರ ಮನೆಯಲ್ಲಿ ನಡೆಯಿತು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಪೂಜ್ಯ ಶ್ರೀ ಡಾ. ಬಸವಲಿಂಗ ಪಟ್ಟದ್ದೇವರು ವಹಿಸಿದ್ದರು. ಪೂಜ್ಯ ಶ್ರೀ ಗುರುಬಸವ ಪಟ್ಟದೇವರು ಹಿರೇಮಠ ಸಂಸ್ಥಾನ ಭಾಲ್ಕಿ ಅವರ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು. ಪೂಜ್ಯ ಶ್ರೀ ಅನುಭವ ಮಂಟಪ ಬಸವಕಲ್ಯಾಣದ ಸಂಚಾಲಕರಾದ ಪೂಜ್ಯ ಶ್ರೀ ಶಿವಾನಂದ ದೇವರು, ಪೂಜ್ಯ ಶ್ರೀ ಹಿಮಾಲಯದ ವಿಧ್ಯಾರೂಡ ಸ್ವಾಮೀಜಿಗಳ ದಿವ್ಯ ಸಮ್ಮುಖ ವಹಿಸಿದ್ದರು, ರಾಜಶೇಖರ ಅಸ್ಟುರೆ ವಕೀಲರು ಭಾಲ್ಕಿ, ಶ್ರೀಮತಿ ಶುಭಾಂಗಿ ಚನ್ನಬಸವಣ್ಣ ಬಳತೆ, ಶ್ರೀಮತಿ ಪ್ರಕಾಶ ಖಂಡ್ರೆ ಅವರು ವೇದಿಕೆಯ ಮೇಲೆ ಉಪಸ್ಥಿತರಿದ್ದರು. 75 ದಿನಗಳ ಕಾಲ ಪ್ರತಿನಿತ್ಯ ಸಾಗಿಬಂದ ಮನೆಗೊಂದು ಅನುಭವ ಮಂಟಪ ಕಾರ್ಯಕ್ರಮದಲ್ಲಿ ಪ್ರಾರ್ಥನೆ, ಅನುಭಾವ, ನಿರೂಪಣೆ ಹಾಗೂ ದಾಸೋಹ ಮಾಡಿದವರಿಗೆ ಗೌರವ ಸನ್ಮಾನ ಸಮಾರಂಭವು ನಡೆಯಿತು. ಬಸವ ಪ್ರಾರ್ಥನೆಯನ್ನು ವೀರಣ್ಣ ಕುಂಬಾರ ಶರಣರು ನಡೆಸಿಕೊಟ್ಟರು. ಶ್ರೀದೇವಿ ಶಾಂತಯ್ಯ ಸ್ವಾಮಿ ಭಕ್ತಿ ಗೀತೆ ಹಾಡಿದರು. ಬಸವೇಶ್ವರಿ ಹಾಗೂ ರೇಖಾ ತಾಯಿ ಅಷ್ಟುರೆ ಅವರು ವಚನ ಗಾಯನ ಮಾಡಿದರು.
ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಸವ ಗುರು ಪೂಜೆಯನ್ನು ಅಷ್ಟುರೆ ಪರಿವಾರದವರು ಭಕ್ತಿ ಪೂರ್ವಕವಾಗಿ ನೆರವೇರಿಸಿದರು. ಕಲಶ ಅಷ್ಟುರೆ ವಚನ ಪಠಣ ಮಾಡಿದರು. ಸಿದ್ದೇಶ್ ಅಷ್ಟುರೆ ವಿಶ್ವಗುರು ಬಸವಣ್ಣನವರ ಕುರಿತು ಮಾತನಾಡಿದರು. ಅಶ್ವಿನಿ ಅಷ್ಟರೆ ಉಪಸ್ಥಿತರಿದ್ದ ಎಲ್ಲರನ್ನೂ ಸ್ವಾಗತ ಕೋರಿದರು.
ರಾಜು ಜುಬ್ರೇ ಪ್ರಾಸ್ತಾವಿಕ ನುಡಿಗಳ್ನಾಡಿದರು. ಬಳಿಕ ಪೂಜ್ಯ ಶ್ರೀ ಗುರುಬಸವ ಪಟ್ಟದೇವರು ಹಿರೇಮಠ ಸಂಸ್ಥಾನ ಭಾಲ್ಕಿ ಅವರು ಮಾತನಾಡಿ ಮನೆಗೊಂದು ಅನುಭವ ಮಂಟಪ ಕಾರ್ಯಕ್ರಮವು ನಾವು ಅಂದುಕೊಂಡದ್ದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಯಶಸ್ವಿಯಾಗಿದ್ದು ನಮಗೆ ಬಹಳ ನೆಮ್ಮದಿ ಹಾಗೂ ಖುಷಿ ತಂದಿದೆ ಎಂದು ಹೇಳಿದರು. ಬಸವಣ್ಣನವರ ಆಚಾರ ವಿಚಾರಗಳನ್ನು ವಿಶ್ವವೇ ಒಪ್ಪಿ ತಲೆಬಾಗಿದೆ. ಪ್ರಧಾನ ಮಂತ್ರಿಗಳು ಸಹ ಇದನ್ನು ಜಗತ್ತಿನಾದ್ಯಂತ ಸಾರಿದ್ದಾರೆ. 75 ದಿನಗಳ ಕಾಲ ನಡೆದ ಈ ಕಾರ್ಯಕ್ರಮದಲ್ಲಿ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ವಿಶೇಷವಾಗಿ ಆಶೀರ್ವದಿಸಿದರು. ಬಳಿಕ ಆಶೀರ್ವಚನ ನೀಡಿದ ಪೂಜ್ಯ ಶ್ರೀ ಬಸವಲಿಂಗ ಪಟ್ಟದೇವರು ಕೊಡುಗೈ ದಾನಿಯಾಗಿ ನೀವು ಏಷ್ಟು ದಾಸೋಹ ಮಾಡುವಿರಿ ಅದರ ಹತ್ತು ಪಟ್ಟು ಲಭಿಸುವುದು ಎಂದು ಹೇಳಿದರು. ದುಡಿದುದರಲ್ಲಿ ಒಂದು ಪಾಲು ಯಾವಾಗಲೂ ದಾಸೋಹಕ್ಕೆ ಇಡಿ. ಜಂಗಮ ದಾಸೋಹ ಹಸಿದವರಿಗೆ ಅನ್ನ ದಾಸೋಹ, ಆಸಕ್ತರಿಗೆ ವಿದ್ಯಾ ದಾಸೋಹ ಅಕ್ಷರ ದಾಸೋಹ ಶ್ರೇಷ್ಠ ಎಂದು ಹೇಳಿದರು.
ಬೀದರ್ ನ ಅನುಭವ ಮಂಟಪ ಸಂಸ್ಕøತಿ ಶಾಲಾ ಮಕ್ಕಳಿಂದ ಬಸವಾದಿ ಶರಣರ ಕಿರು ನಾಟಕ ನಡೆಯಿತು. 75 ದಿವಸಗಳ ಕಾಲ ನಡೆದ ಮನೆಗೊಂದು ಅನುಭವ ಮಂಟಪ ಕಾರ್ಯಕ್ರಮದಲ್ಲಿ ನಿರೂಪಣೆ, ಅನುಭಾವ, ಪ್ರಾರ್ಥನೆ, ಅನುಭಾವ, ದಾಹೋಹ ಇಟ್ಟುಕೊಂಡು ದಂಪತಿಗಳು, ಕಾರ್ಯಕ್ರಮ ಯಶಸ್ವಿಯಾಗಿ ನಿರ್ವಹಿಸಲು ಸಹಕರಿಸಿದ ಶ್ರೀಮಠದ ಮಕ್ಕಳ ತಂಡಕ್ಕೂ ಶಾಲು ಹೊದೆಸಿ ಸನ್ಮಾನಿಸಲಾಯಿತು. 75 ದಿನಗಳ ಕಾಲ ಮನೆಗೊಂದು ಅನುಭವ ಮಂಟಪ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಆಯೋಜಿಸಿ ಯಶಸ್ವಿಗೊಳಿಸಲು ಕಾರಣಿಕರ್ತರಾದ ಶ್ರೀದೇವಿ ಶಾಂತಯ್ಯ ಸ್ವಾಮಿ ದಂಪತಿಗಳಿಗೆ ಶಾಂತಾಬಾಯಿ ವೈಜಿನಾಥ ಕುಂಬಾರ ಪರಿವಾರದವರಿಂದ ಹೊದಿಕೆ ಮಾಡುವ ಮೂಲಕ ಗೌರವ ಸನ್ಮಾನ ಮಾಡಲಾಯಿತು. ವಿಶೇಷವಾಗಿ ಪತ್ರಿಕಾ ಮಾಧ್ಯಮದವರನ್ನು ಗೌರವಿಸಿ ಸನ್ಮಾನಿಸಲಾಯಿತು.
ನೂರಕ್ಕೂ ಹೆಚ್ಚು ಬಸವ ಭಕ್ತಾದಿಗಳು ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ದೀಪಕ್ ಥಮಕೆ ನಿರೂಪಿಸಿದರು. ಮಂಗಲ ಹಾಗೂ ಪ್ರಸಾದದೊಂದಿಗೆ ಕಾರ್ಯಕ್ರಮ ಯಶಸ್ವಿಯಾಗಿ ಮುಕ್ತಾಯವಾಯಿತು ಎಂದು ಶ್ರೀ ಶಾಂತಯ್ಯ ಸ್ವಾಮಿ ತಿಳಿಸಿದರು.