ಮನೆಗೆ ಬಂದೆ, ಆತಂಕ ಬೇಡ ಅಭಿಮಾನಿಗಳಿಗೆ ರಜನಿ ಮನವಿ

ಚೆನ್ನೈ, ನ.೧- ಹೃದಯಸಂಬಂಧಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ತಮಿಳು ಚಿತ್ರರಂಗದ ಸೂಪರ್ ಸ್ಟಾರ್, ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ವಿಜೇತ ರಜನಿಕಾಂತ್ ಆಸ್ಪತ್ರೆಯಿಂದ ಬಿಡುಗಡೆಯಾಗಿ ಮನೆಗೆ ಆಗಮಿಸಿದ್ದಾರೆ.

ಚೆನ್ನೈನ ಕಾವೇರಿ ಆಸ್ಪತ್ರೆಯಲ್ಲಿ ಹೃದಯ ಸಂಬಂಧಿ ಶಸ್ತ್ರಚಿಕಿತ್ಸೆಗೆ ಒಳಗಾಗಿ ಹಲವು ದಿನಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಂಡ ನಂತರ ಮನೆಗೆ ಆಗಮಿಸಿದ್ದಾರೆ.

ಆಸ್ಪತ್ರೆಯಿಂದ ಮನೆಗೆ ಬಂದ ಭಾವಚಿತ್ರವನ್ನು ನಟ ರಜನಿಕಾಂತ್ ಅವರು ತಮ್ಮ ಸಾಮಾಜಿಕ ಜಾಲತಾಣ ದಲ್ಲಿ ಹಂಚಿಕೊಂಡಿದ್ದು, “ಮನೆಗೆ ಬಂದಿದ್ದೇನೆ” ಆತಂಕಬೇಡ ಎಂದು ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.

ಇತ್ತೀಚೆಗೆ ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಸ್ವೀಕರಿಸಿ ಚೆನ್ನೈಗೆ ಆಗಮಿಸಿದ ನಂತರ ಆಸ್ಪತ್ರೆಗೆ ದಾಖಲಾಗಿ ಹೃದಯ ಸಂಬಂಧಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.

ಹೃದಯದ ರಕ್ತನಾಳದಲ್ಲಿ ಎದುರಾಗಿದ್ದ ಸಮಸ್ಯೆಯನ್ನು ಶಸ್ತ್ರಚಿಕಿತ್ಸೆಯ ಮೂಲಕ ಸರಿಪಡಿಸಲಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಕಳೆದ ವರ್ಷದ ಡಿಸೆಂಬರ್ ನಲ್ಲಿ ಅಧಿಕ ರಕ್ತದೊತ್ತಡ ಸಮಸ್ಯೆಯಿಂದ ಹೈದರಾಬಾದ್ ನ ಆಸ್ಪತ್ರೆಗೆ ರಜನಿಕಾಂತ್ ದಾಖಲಾಗಿ ಚಿಕಿತ್ಸೆ ಪಡೆದಿದ್ದರು.

೭೦ ವರ್ಷದ ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್ ಅವರು ಆಸ್ಪತ್ರೆಗೆ ದಾಖಲಾಗುತ್ತಿದ್ದಂತೆ ಅವರ ಅಭಿಮಾನಿಗಳು ಚಿತ್ರರಂಗದ ಗಣ್ಯರು ಸೇರಿದಂತೆ ಅನೇಕರು ಆತಂಕ ವ್ಯಕ್ತಪಡಿಸಿದರು. ನಿನ್ನೆಯಷ್ಟೇ ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಅವರು ಆಸ್ಪತ್ರೆಗೆ ಭೇಟಿ ನೀಡಿ ರಜನಿಕಾಂತ್ ಅವರ ಆರೋಗ್ಯ ವಿಚಾರಿಸಿದ್ದರು.