ಮನೆಗೆ ನುಗ್ಗಿ ೧೪ ಲ.ರೂ.ಮೌಲ್ಯದ ಸೊತ್ತು ಕಳವು 

ಕೋಟ, ಸೆ.೯- ಸಾಸ್ತಾನ ಪಾಂಡೇಶ್ವರದ ಹಳೆಯ ಮನೆಯೊಂದಕ್ಕೆ ನುಗ್ಗಿದ ದುಷ್ಕರ್ಮಿಗಳು ಮನೆಯ ಗೋದ್ರೆಜ್‌ನಲ್ಲಿ ಇರಿಸಿದ್ದ 10 ಲಕ್ಷ ರೂ. ಮೌಲ್ಯದ ಚಿನ್ನದ ಆಭರಣ ಹಾಗೂ 4,05,000ರೂ. ನಗದು ಸೇರಿದಂತೆ ಒಟ್ಟು 14.05 ಲಕ್ಷ ರೂ.ಮೌಲ್ಯದ ಸೊತ್ತುಗಳನ್ನು ಕಳವು ಮಾಡಿ ಪರಾರಿಯಾಗಿರುವ ಘಟನೆ ನಡೆದಿದೆ.

ಬೆಂಗಳೂರು ಮಡಿವಾಳದಲ್ಲಿ ಹೊಟೇಲ್ ವ್ಯವಹಾರ ಮಾಡಿಕೊಂಡಿರುವ ರಾಜೇಶ್ ಪೂಜಾರಿ ಎಂಬವರ ಮನೆಯಲ್ಲಿ ಈ ಕಳ್ಳತನ ನಡೆದಿದೆ. ರಾಜೇಶ್ ಪೂಜಾರಿ ಅವರು ಮೇ 4ರಂದು ಮದುವೆ ಕಾರ್ಯಕ್ರಮಕ್ಕಾಗಿ ಊರಿಗೆ ಬಂದಿದ್ದು, ಮದುವೆ ಮುಗಿದ ಬಳಿಕ ಬೆಂಗಳೂರಿಗೆ ಹಿಂದಿರುಗುವಾಗ ತಮ್ಮ ಹೆಂಡತಿ ಮತ್ತು ಮಗುವಿನ ಚಿನ್ನದ ಆಭರಣಗಳನ್ನು ಮೂಲಮನೆಯಾದ ಸಾಸ್ತಾನ ಪಾಂಡೇಶ್ವರದ ಮನೆಯ ಗೋಡ್ರೇಜ್‌ನಲ್ಲಿ ಇರಿಸಿದ್ದರು. ಇದರೊಂದಿಗೆ 4,05,000 ರೂ. ನಗದು ಹಣವನ್ನು ಸಹ ಇದರಲ್ಲಿ ಇರಿಸಿದ್ದರು. ಸೆ.7ರ ಬೆಳಗ್ಗೆ ರಾಜೇಶ್ ಪೂಜಾರಿ ಅವರ ಚಿಕ್ಕಪ್ಪ ಸುಬ್ಬಣ್ಣ ಪೂಜಾರಿ ಅವರು ಮನೆಯ ಕಲ್ಲುಕುಟ್ಟಿಗ ದೇವಸ್ಥಾನದ ಪೂಜೆಗೆಂದು ಬಂದವರು ರಾಜೇಶ್ ಪೂಜಾರಿ ಅವರ ಮನೆದ ಬಳಿ ಬಂದಾಗ, ಬಾಗಿಇಗೆ ಚಿಲಕ ಹಾಕಿ ಲಾಕ್ ಹಾಕದೇ ಇರುವುದನ್ನು ಗಮನಿಸಿ ಬಾಗಿಲು ತೆರೆದು ಒಳ ಹೋದಾಗ, ಮನೆಯ ಒಳಕೋಣೆಯ ಗೋಡ್ರೇಜ್‌ಗಳು ಮಾತ್ರ ತೆರೆದುಕೊಂಡಿರುವುದು ಕಂಡು ಬಂದಿತ್ತು. ಮನೆಯಲ್ಲಿ ಕಳ್ಳತನ ನಡೆದಿರಬಹುದೆಂ ಸಂಶಯದಿಂದ ರಾಜೇಶ್ ಸಹೋದರನಿಗೆ ಮಾಹಿತಿ ನೀಡಿದ್ದರು. ಸಹೋದರನ ಮೂಲಕ ಮಾಹಿತಿ ಪಡೆದ ರಾಜೇಶ್ ಪೂಜಾರಿ ಕೂಡಲೇ ಬೆಂಗಳೂರಿನಿಂದ ಹೊರಟು ಇಂದು ಬೆಳಗ್ಗೆ ಮನೆಗೆ ಬಂದು ಪರಿಶೀಲಿಸಿದಾಗ ತಾವು ಗೋಡ್ರೇಜ್‌ನಲ್ಲಿಟ್ಟಿದ್ದ ಹೆಂಡತಿ, ಮಗುವಿನ 10 ಲಕ್ಷರೂ.ಮೌಲ್ಯದ ಚಿನ್ನಾಭರಣ ಹಾಗೂ ಹಳೆ ಮನೆ ರಿಪೇರಿಗೆಂದು ಇಟ್ಟಿದ್ದ ೪.೦೫ ಲಕ್ಷ ನಗದು ಕಳವಾಗಿರುವುದು ಕಂಡುಬಂತು. ಸೆ.2ರ ಅಪರಾಹ್ನ 2.30ರಿಂದ ಸೆ.7ರ ಬೆಳಗ್ಗೆ 6.30ರ ನಡುವಿನ ಅವಧಿಯಲ್ಲಿ ಯಾರೋ ಕಳ್ಳರು ಮನೆಯ ಬಾಗಿಲಿಗೆ ಹಾಕಿದ ಬೀಗ ಮುರಿದು ಮನೆಯ ಕೋಣೆಯಲ್ಲಿದ್ದ 2 ಗೋಡ್ರೇಜ್‌ಗಳನ್ನು ಒಡೆದು ಅದರಲ್ಲಿದ್ದ ಸೊತ್ತು ಹಾಗೂ ನಗದನ್ನು ಕಳವು ಮಾಡಿರುವುದಾಗಿ ಅವರು ಕೋಟ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಕೋಟ ಪೊಲೀಸರು ತನಿಖೆ ನಡೆಸುತಿದ್ದಾರೆ.