ಮನೆಗೆ ನುಗ್ಗಿ ವೃದ್ಧೆ ಮೇಲೆ ಹಲ್ಲೆ ಮಾಡಿದ ಕಳ್ಳನ ಬಂಧನ

ಕಲಬುರಗಿ.ಸೆ.20: ಮನೆಗೆ ನುಗ್ಗಿದ ಕಳ್ಳ ವೃದ್ಧ ಮಹಿಳೆಯ ಮೇಲೆ ಮಚ್ಛೆಯಿಂದ ಮಾರಣಾಂತಿಕ ಹಲ್ಲೆ ಮಾಡಿ ಪರಾರಿಯಾದ ಘಟನೆ ಚಿಂಚೋಳಿ ತಾಲ್ಲೂಕಿನ ಕೊಳ್ಳುರಿನಲ್ಲಿ ವರದಿಯಾಗಿದ್ದು, ಪ್ರಕರಣ ವರದಿಯಾದ 24 ಗಂಟೆಗಳಲ್ಲಿಯೇ ಕಳ್ಳನಿಗೆ ಪೋಲಿಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಯನ್ನು ಕೊಳ್ಳುರ್ ಗ್ರಾಮದ ನಿವಾಸಿಯೇ ಆದ ರಾಜಕುಮಾರ್ ಅಲಿಯಾಸ್ ಸೂರ್ಯಕಾಂತ್ ದಶರಥ್ ಗುತ್ತಿ ಎಂದು ಗುರುತಿಸಲಾಗಿದೆ. ಕೊಳ್ಳುರ್ ಗ್ರಾಮದಲ್ಲಿ ಗುಂಡಮ್ಮ ಎಂಬ ವೃದ್ಧೆಯ ಮನೆ ಹೊಕ್ಕು ಅಲಮಾರಿಯನ್ನು ಒಡೆಯಲು ಯತ್ನಿಸಿದಾಗ ಮಲಗಿದ್ದ ವೃದ್ಧೆ ಎದ್ದು ಕಿರುಚಿದಾಗ ಕಳ್ಳನು ಮಚ್ಛಿನಿಂದ ಮೂರು ಬಾರಿ ವೃದ್ಧ ಮಹಿಳೆಯ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಪರಾರಿಯಾಗಿದ್ದ. ಆರೋಪಿಯ ಪತ್ತೆಗಾಗಿ ವಿಶೇಷ ಪೋಲಿಸ್ ತಂಡವನ್ನು ರಚಿಸಲಾಗಿತ್ತು.
ಶಹಾಬಾದ್ ಡಿವೈಎಸ್‍ಪಿ ಚಿಕ್ಕಮಠ್ ಅವರ ಮಾರ್ಗದರ್ಶನದಲ್ಲಿ ಸಿಪಿಐ ಮಹಾಂತೇಶ್ ಪಾಟೀಲ್, ಪಿಎಸ್‍ಐ ಎ.ಎಸ್. ಪಟೇಲ್, ಸಿಬ್ಬಂದಿಗಳಾದ ನಾಗರಾಜ್, ರಮೇಶ್, ಶಿವಾನಂದ್, ರೇಮಶ್ ಅವರು ಖಚಿತ ಭಾತ್ಮಿ ಮೇರೆಗೆ ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸಿ, ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.