ಮನೆಗೆ ನುಗ್ಗಿ ನಗ-ನಗದು ಕಳವು

ಕೋಡಿಜಾಲ್ ಇಬ್ರಾಹಿಂ ಪುತ್ರನ ಮನೆಯಲ್ಲಿ ನಡೆದ ಕೃತ್ಯ
ಕೊಣಾಜೆ, ಮಾ.೨೫- ಮಂಗಳೂರು ವಿವಿ ಕ್ಯಾಂಪಸ್ ಸಮೀಪದಲ್ಲಿರುವ ಮನೆಯೊಂದಕ್ಕೆ ನುಗ್ಗಿದ ದುಷ್ಕರ್ಮಿಗಳು ಅಪಾರ ಮೌಲ್ಯದ ಚಿನ್ನಾಭರಣ ಹಾಗೂ ನಗದು ದೋಚಿ ಪರಾರಿಯಾಗಿರುವ ಘಟನೆ ಗುರುವಾರ ಬೆಳಗ್ಗೆ ಬೆಳಕಿಗೆ ಬಂದಿದೆ.
ಕೋಡಿಜಾಲ್ ಇಬ್ರಾಹಿಂ ಅವರ ಪುತ್ರ ಹಬೀಬ್ ಅವರ ಮನೆಯಲ್ಲಿ ಈ ಕಳ್ಳತನ ಕೃತ್ಯ ನಡೆದಿದೆ. ಹಬೀಬ್, ಅವರ ಕುಟುಂಬದ ನಾಲ್ಕು ಮಂದಿ ಮನೆಯೊಳಗೆ ಇದ್ದಾಗಲೇ ರಾತ್ರಿ ವೇಳೆಯಲ್ಲಿ ಕಳ್ಳತನ ನಡೆಸಿದ್ದಾರೆ. ಮನೆಯ ಮಹಡಿಯ ಬಾಗಿಲು ಮುರಿದು ಒಳಗೆ ಪ್ರವೇಶಿಸಿರುವ ದುಷ್ಕರ್ಮಿಗಳು ಕೋಣೆಯ ಕಪಾಟಿನಲ್ಲಿದ್ದ ಸುಮಾರು ೧೦೦ ಪವನ್ ನಷ್ಟು ಚಿನ್ನಾಭರಣ ಹಾಗೂ ಐದು ಲಕ್ಷ ರೂ. ನಗದು ದೋಚಿದ್ದಾರೆ ಎಂದು ದೂರಲಾಗಿದೆ. ಕೊಣಾಜೆ ಪೊಲೀಸ್ ಅಧಿಕಾರಿಗಳು, ಶ್ವಾನದಳ, ಬೆರಳಚ್ಚು ತಜ್ಞರು ಪರಿಶೀಲನೆ ನಡೆಸುತ್ತಿದ್ದಾರೆ. ವ್ಯಾಪಾರ ವಹಿವಾಟಿನ ಹಣವನ್ನು ತಂದು ಇಟ್ಟಿದ್ದ ಬ್ಯಾಗನ್ನು ಲಪಟಾಯಿಸಿದ ದುಷ್ಕರ್ಮಿಗಳು ಅದರಲ್ಲಿದ್ದ ನಗದನ್ನು ದೋಚಿ ಬ್ಯಾಗನ್ನು ಅಲ್ಲದೆ ಪಕ್ಕದ ಮನೆಯ ಬಳಿ ಬಿಸಾಡಿ ಹೋಗಿದ್ದಾರೆ. ಹಬೀಬ್ ಅವರ ಸಂಬಂಧಿಕರ ಮದುವೆ ಕಾರ್ಯವು ಇತ್ತೀಚೆಗೆ ನಡೆದಿದ್ದು, ಮದುಮಗಳ ಕೆಲವು ಚಿನ್ನಾಭರಣವೂ ಇಲ್ಲೇ ಇತ್ತು ಎನ್ನಲಾಗಿದೆ.