ಮನೆಗೆ ನುಗ್ಗಿದ ಟಿಪ್ಪರ್ ಲಾರಿ೩ ಬೈಕ್‌ಗಳು ಜಖಂ

ಬೆಂಗಳೂರು,ಏ.೨೦- ನಿದ್ದೆಗಣ್ಣಿನಲ್ಲಿದ್ದ ಚಾಲಕ ನಿಯಂತ್ರಣ ತಪ್ಪಿ ಟಿಪ್ಪರ್ ಲಾರಿಯನ್ನು ರಸ್ತೆ ಬದಿಯಲ್ಲಿದ್ದ ಮನೆಗೆ ನುಗ್ಗಿಸಿದ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ರಾಜಘಟ್ಟ ಗ್ರಾಮದಲ್ಲಿ ನಿನ್ನೆ ಮಧ್ಯರಾತ್ರಿ ನಡೆದಿದೆ.
ಟಿಪ್ಪರ್ ಲಾರಿ ನುಗ್ಗಿದ್ದರಿಂದ ಮನೆಯ ಮುಂದೆ ನಿಲ್ಲಿಸಿದ ೩ ಬೈಕ್‌ಗಳು ಜಖಂಗೊಂಡು ಮನೆಯ ಕಾಂಪೌಂಡ್ ಹಾನಿಯಾಗಿ ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ದೊಡ್ಡಬಳ್ಳಾಪುರ ಕಡೆಯಿಂದ ಮಳೆಕೋಟೆ ಕಡೆಗೆ ಹೋಗುತ್ತಿದ್ದ ಟಿಪ್ಪರ್, ರಸ್ತೆ ಬದಿಯಲ್ಲಿರುವ ಅಭಿ ಎಂಬುವರ ಮನೆಗೆ ನುಗ್ಗಿದೆ. ಟಿಪ್ಪರ್ ಮೊದಲಿಗೆ ಮನೆ ಮುಂಭಾಗದಲ್ಲಿರುವ ಮರಕ್ಕೆ ಡಿಕ್ಕಿ ಹೊಡೆದು ಬಳಿಕ ಮನೆಗೆ ನುಗ್ಗಿದೆ.
ವೇಗ ತಗ್ಗಿದ್ದರಿಂದ ಹೆಚ್ಚಿನ ಹಾನಿ ಸಂಭವಿಸಿಲ್ಲ. ಒಂದು ವೇಳೆ ಲಾರಿ ನೇರವಾಗಿ ಮನೆಗೆ ನುಗ್ಗಿದ್ದರೆ ಭಾರೀ ಅನಾಹುತವೇ ಸಂಭವಿಸುತ್ತಿತ್ತು.
ರಾಜಘಟ್ಟ ಗ್ರಾಮದಲ್ಲಿ ಕ್ರಷರ್ ಲಾರಿಗಳ ಹಾವಳಿ ಹೆಚ್ಚಾಗಿದೆ. ಚಿಕ್ಕಬಳ್ಳಾಪುರದಲ್ಲಿರುವ ಕ್ರಷರ್?ಗಳಿಂದ ಜಲ್ಲಿ ಕಲ್ಲುಗಳನ್ನ ಸಾಗಿಸುವ ಟಿಪ್ಪರ್-ಲಾರಿಗಳು ಗ್ರಾಮದ ಮೂಲಕವೇ ಸಂಚರಿಸುತ್ತವೆ. ಆದರೆ, ಅವುಗಳ ವೇಗಕ್ಕೆ ನಿಯಂತ್ರಣವೇ ಇಲ್ಲ. ರಸ್ತೆಯಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಿ ಗ್ರಾಮ ವ್ಯಾಪ್ತಿಯಲ್ಲಿ ಅವುಗಳ ವೇಗಕ್ಕೆ ಕಡಿವಾಣ ಹಾಕುವಂತೆ ಗ್ರಾಮಸ್ಥರಾದ ಗಣೇಶ್ ರಾಜಘಟ್ಟ ಮನವಿ ಮಾಡಿದ್ದಾರೆ.