ಮನೆಗೆ ದಿನಸಿ ತಲುಪಿಸಿದ ಅಧಿಕಾರಿಗಳು

ಧಾರವಾಡ, ಮೇ.28:ಧಾರವಾಡ ತಾಲೂಕಿನ ಮುಮ್ಮಿಗಟ್ಟಿ ಗ್ರಾಮದಲ್ಲಿನ ಕುಟುಂಬ ಒಂದರ ಯಜಮಾನ ಟೋಪೆÇೀಜಿ ದೇವರ್ ಅವರು ಕೋರೋನಾ ಸೋಂಕಿತರಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಹೆಂಡತಿಯೂ ಅವರಿಗೆ ಆಸರೆಯಾಗಿ ಹುಬ್ಬಳ್ಳಿ ಕಿಮ್ಸ್‍ನಲ್ಲಿಯೇ ಇದ್ದಾರೆ.
ಇವರಿಗೆ ಇಬ್ಬರು ಮಕ್ಕಳಿದ್ದು, ಮುಮ್ಮಿಗಟ್ಟಿ ಮನೆಯಲ್ಲಿ ಇದ್ದಾರೆ. ಗ್ರಾಮದಲ್ಲಿ ಇವರಿಗೆ ಯಾರೂ ಸಂಬಂಧಿಕರು ಇರುವದಿಲ್ಲ. ಅದರಲ್ಲೂ ಒರ್ವ ಹೆಣ್ಣು ಮಗು ಕವಿತಾ (14) ದೆವರ್ ಪೂರ್ಣ ವಿಶೇಷಚೇತನಳಾಗಿದ್ದಾಳೆ. ಮನೆಯ ಮುಖ್ಯಸ್ಥರಿಬ್ಬರು ಆಸ್ಪತ್ರೆಯಲ್ಲಿರುವದರಿಂದ ಮಕ್ಕಳಿಗೆ ಊಟ, ಉಪಹಾರಕ್ಕೆ ದಿನಸಿ, ತರಕಾರಿ ಮತ್ತು ಆಹಾರ ಸಾಮಗ್ರಿಗಳ ಕೊರತೆ ಉಂಟಾಗಿತ್ತು.
ವಿಶೇಷಚೇತನಳಾದ ಕವಿತಾಳು ಮಕ್ಕಳ ಸಹಾಯವಾಣಿ 1098ಗೆ ಕರೆ ಮಾಡಿ, ಸಹಾಯ ಕೋರಿದ್ದಳು. ಇದಕ್ಕೆ ತಕ್ಷಣ ಸ್ಪಂದಿಸಿದ ಮುಮ್ಮಿಗಟ್ಟಿ ಗ್ರಾಮಪಂಚಾಯತಿಯ ಕೋವಿಡ್ ಕಾರ್ಯಾಪಡೆ, ಅಗತ್ಯವಿರುವ ದಿನಸಿ, ತರಕಾರಿ, ಆಹಾರ ಸಾಮಗ್ರಿಗಳನ್ನು ಪೂರೈಸಲು ಕ್ರಮಕೈಗೊಂಡಿದೆ.
ತಹಶೀಲ್ದಾರ ಸಂತೋಷ ಬಿರಾದಾರ ಹಾಗೂ ತಾಲೂಕಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಎಸ್.ಖಾದ್ರೊಳಿ ಅವರ ನಿರ್ದೇಶನದ ಮೇರೆಗೆ ಇಂದು ಟೋಪೋಜಿ ದೇವರ್ ಅವರ ಮನೆಗೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಜಿ.ಎನ್.ಗಣಾಚಾರಿ, ಗ್ರಾಮ ಲೆಕ್ಕಾಧಿಕಾರಿ ಬಸವರಾಜ ಕುಲಾವಿ ಹಾಗೂ ಗ್ರಾಮ ಪಂಚಾಯತಿಯ ಕಾರ್ಯಪಡೆಯ ಸದಸ್ಯರು ಭೇಟಿ ನೀಡಿ ಅವಶ್ಯಕ ದಿನಸಿ, ಆಹಾರ ಸಾಮಗ್ರಿ ಮತ್ತು ತರಕಾರಿಯನ್ನು ಪೂರೈಸಿದರು.