ಮನೆಗಳ ಪುನರ್ ನಿರ್ಮಾಣಕ್ಕೆ ಒತ್ತಾಯಿಸಿ ಮನವಿ

ಬ್ಯಾಡಗಿ,ಸೆ14: ಕಳೆದ ಸಾಲಿನಲ್ಲಿ ದುಡಿಯಲು ಬೇರೆಡೆ ಗುಳೇ ಹೋದ ಸಂದರ್ಭದಲ್ಲಿ ಅತಿವೃಷ್ಟಿಯಿಂದ ನಮ್ಮ ಮನೆಗಳು ಬಿದ್ದಿದ್ದು, ತಮಗೂ ಸಹ ಮನೆಗಳ ಪುನರ್ ನಿರ್ಮಾಣಕ್ಕೆ ಅವಕಾಶವನ್ನು ಕಲ್ಪಿಸಿ ಕೊಡಬೇಕೆಂದು ಒತ್ತಾಯಿಸಿ ತಾಲೂಕಿನ ಬೆಳಕೇರಿ ಗ್ರಾಮದ ಐದು ನಿರ್ಗತಿಕ ಕುಟುಂಬಗಳ ಸದಸ್ಯರು ಮಂಗಳವಾರ ತಹಶೀಲ್ದಾರ ತಿಪ್ಪೇಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯ ದ್ಯಾಮನಗೌಡ ಪೂಜಾರ ಮಾತನಾಡಿ, ಕಳೆದ 2021/22ರಲ್ಲಿ ದುಡಿಮೆಯನ್ನರಸಿ ಐದು ನಿರ್ಗತಿಕ ಕುಟುಂಬಗಳ ಸದಸ್ಯರು ಬೇರೆಡೆಗೆ ಗುಳೇ ಹೋದಾಗ ಅತಿವೃಷ್ಟಿಯಿಂದ ಅವರ ಮನೆಗಳು ಬಿದ್ದಿದ್ದು, ಈ ವಿಷಯವನ್ನು ಗ್ರಾಮದ ಬೇರೆಯವರ ಕಡೆಯಿಂದ ತಿಳಿದುಕೊಂಡು ಗ್ರಾಮಕ್ಕೆ ವಾಪಸ್ ಬಂದು, ಮನೆ ಬಿದ್ದ ಬಗ್ಗೆ ಅರ್ಜಿಯನ್ನು ನೀಡಲು ತೆರಳಿದ ಸಂದರ್ಭದಲ್ಲಿ ಅರ್ಜಿ ಸ್ವೀಕರಿಸುವ ಕೊನೆಯ ದಿನಾಂಕ ಮುಗಿದು ಹೋಗಿದೆ ಎಂದು ತಿಳಿಸಿದ್ದಾರೆ. ಐವರು ಕುಟುಂಬಸ್ಥರು ಅನಿವಾರ್ಯವಾಗಿ ತಮ್ಮ ಬಿದ್ದ ಮನೆಗಳ ಹಳೆಯ ತಗಡು, ಬೊಂಬುಗಳನ್ನು ಬಳಸಿಕೊಂಡು ಬೇರೆಯವರ ಜಾಗದಲ್ಲಿ ತಾತ್ಕಾಲಿಕವಾಗಿ ವಾಸವಾಗಿದ್ದಾರೆ. ಅತಿ ಹಿಂದುಳಿದ ಎಸ್ಸಿ ಜನಾಂಗದ ಐವರು ಕುಟುಂಬಸ್ಥರಿಗೆ ಕಳೆದ ಬಾರಿಯ ಅರ್ಜಿಯನ್ನು ಈ ಬಾರಿ ಅರ್ಹವೆಂದು ಪರಿಗಣಿಸಿ ಮನೆಗಳ ನಿರ್ಮಾಣ ಕೈಗೊಳ್ಳಲು ಅವಕಾಶ ನೀಡಬೇಕೆಂದು ತಹಶೀಲ್ದಾರ ತಿಪ್ಪೇಸ್ವಾಮಿ ಅವರಿಗೆ ಕುಟುಂಬಸ್ಥರ ಪರವಾಗಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ತಾಲೂಕಾ ಅಕ್ರಮ-ಸಕ್ರಮ ಸಮಿತಿಯ ಸದಸ್ಯ ಸಿದ್ಧಯ್ಯ ಪಾಟೀಲ, ನಿರ್ಗತಿಕ ಕುಟುಂಬಗಳ ಸದಸ್ಯರಾದ ಶೋಭಾ ಗಾಳೆಪ್ಪ ಬ್ಯಾಡಗಿ, ಚೆನ್ನಪ್ಪ ಪುಟ್ಟಪ್ಪ ಹೊಸಮನಿ, ಮಾಲತೇಶ ಮಲ್ಲಪ್ಪ ಪೂಜಾರ, ಮಂಜಪ್ಪ ನೀಲಪ್ಪ ಪೂಜಾರ, ಕರಿಯಮ್ಮ ಚೌಡಪ್ಪ ಹನುಮಜ್ಜೇರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.