ಮನೆಗಳ ನಿರ್ಮಾಣ ಕಾರ್ಯ ಕುಂಠಿತ

ಮಾಗಡಿ, ಡಿ. ೧೭- ಕೊಳಚೆ ನಿರ್ಮೂಲನಾ ಮಂಡಳಿ ವತಿಯಿಂದ ನಿರ್ಮಿಸಲಾಗುತ್ತಿರುವ ಮನೆಗಳ ನಿರ್ಮಾಣ ಕಾರ್ಯ ಕುಂಠಿತವಾಗಿರುವುದರಿಂದ ನಾಗರೀಕರಿಗೆ ಅನಾನುಕೂಲವಾಗಿದೆ ಎಂದು ಪುರಸಭೆ ಮಾಜಿ ಸದಸ್ಯ ನಯಾಜ್ ಆರೋಪಿಸಿದರು.
ಪಟ್ಟಣದಲ್ಲಿ ಕೊಳಚೆ ನಿರ್ಮುಲನಾ ಮಂಡಳಿ ವತಿಯಿಂದ ನಿರ್ಮಿಸಲಾಗುತ್ತಿರುವ ಮನೆಗಳ ಬಳಿ ಪ್ರತಿಭಟನೆ ನಡೆಸಿ ಮಾತನಾಡಿದ ಅವರು, ೨೦೧೭ ರಲ್ಲಿ ಹಳೆಯ ಮಸೀದಿ ವ್ಯಾಪ್ತಿಯಲ್ಲಿ ಅಲ್ಪಸಂಖ್ಯಾತರಿಗೆ ೧೧೧ ಮನೆಗಳು ಬಂದಿದ್ದು ಕಳೆದ ಮೂರು ವರ್ಷದ ಹಿಂದೆ ಮನೆ ನಿರ್ಮಾಣ ಪ್ರಾರಂಭ ಮಾಡಿ ಇಲ್ಲಿಯವರೆಗೂ ಸಂಪೂರ್ಣಗೊಳಿಸಿಲ್ಲ. ಈ ವ್ಯಾಪ್ತಿಯಲ್ಲಿ ಕಡು ಬಡವರು ಹೆಚ್ಚಾಗಿದ್ದು, ಇವರೆಲ್ಲರಿಗೂ ಸ್ವಂತ ಸೈಟ್‌ಗಳಿರಲಿಲ್ಲ ಸಾಲ ಸೂಲ, ಒಡವೆ ಮಾರಾಟ ಮಾಡಿ ಸೈಟ್ ಖರೀದಿಸಿ ಜಾಗ ನೀಡಿ ಮಂಡಳಿಗೆ ೨೦ ಸಾವಿರ ಡಿಡಿ ಕೂಡ ಕಟ್ಟಲಾಗಿದೆ. ಮನೆ ನಿರ್ಮಾಣ ಪಾಯಕ್ಕೆ ಮಣ್ಣನ್ನು ತುಂಬುವುದು, ಕಟ್ಟಡದ ಕ್ಯೂರಿಂಗ್, ಮರದ ಬಾಗಿಲು, ಕಿಟಕಿಗಳನ್ನು ಪಲಾನುಭವಿಗಳ ಸ್ವಂತ ಕರ್ಚಿನಿಂದಲೇ ಮಾಡಬೇಕು, ಮೋಲ್ಡ್ ವೇಳೆ ಕಬ್ಬಿಣ, ಸೀಮೆಂಟ್, ಸಹ ಇವರೇ ನೀಡಬೇಕು. ಪ್ರತಿಯೊಬ್ಬರು ತಲಾ ೨೫ ಸಾವಿರದಿಂದ ಒಂದು ಲಕ್ಷದವರೆಗೆ ಇವರುಗಳೆ ಖರ್ಚು ಮಾಡಿದರು ಮನೆ ಪೂರ್ಣಗೊಂಡಿಲ್ಲ ಎಂದು ದೂರಿದರು.
ಸುಮಾರು ೨೦ ಮಂದಿ ಸ್ವಂತ ಖರ್ಚಿನಿಂದ ಮನೆ ಕಾಮಗಾರಿ ಪೂರ್ಣಗೊಳಿಸಿಕೊಂಡು ಮನೆಗಳಿಗೆ ಹೋಗಿದ್ದಾರೆ. ಸ್ವಂತ ಸೈಟ್ ಇರುವವರು ಮನೆ ಕೆಡವಿ ಮನೆ ನಿರ್ಮಾಣಕ್ಕೆ ಬಿಟ್ಟುಕೊಂಡು ಬಾಡಿಗೆ ಮನೆಗೆ ಹೋಗಲು ಹಣ ಇಲ್ಲದೆ ಬೀದಿಯಲ್ಲಿ ವಾಸಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕಳೆದ ಒಂದು ವರ್ಷಗಳಿಂದ ಸಮಸ್ಯೆ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದಿದ್ದು ಶೀಘ್ರವಾಗಿ ಮನೆ ನಿರ್ಮಿಸುವಂತೆ ಶಾಸಕರು ಅಧಿಕಾರಿಗಳ ಗಮನಕ್ಕೆ ತಂದರು ಅಧಿಕಾರಿಗಳು ಯಾವುದೇ ಅನುಕೂಲ ಕಲ್ಪಿಸಿಲ್ಲ ಎಂದು ನಯಾಜ್ ಟೀಕಾ ಪ್ರಹಾರ ನಡೆಸಿದರು.
೧೧೧ ಮನೆಗಳಲ್ಲಿ ೭೫ ಮನೆಗಳು ನಿರ್ಮಾಣವಾಗುತ್ತಿದ್ದು ಉಳಿದ ೩೫ ಮನೆಗಳನ್ನು ೫೦ ಸಾವಿರ ಹಣಕ್ಕಾಗಿ ಬೇಕಾದವರಿಗೆ ನೀಡುತ್ತಿದ್ದಾರೆ. ಮನೆ ಮಂಜೂರಾಗಿರುವ ಎಲ್ಲರಿಗೂ ಮನೆ ನಿರ್ಮಿಸಿಕೊಡದೆ ಉಳ್ಳವರಿಗೆ ನೀಡುತ್ತಿದ್ದಾರೆ ಈ ಬಗ್ಗೆ ಜಿಲ್ಲಾಧಿಕಾರಿ, ಕೊಳಚೆ ನಿರ್ಮುಲನಾ ಮಂಡಳಿ ಕಚೇರಿ ಬಳಿ ಪ್ರತಿಭಟಿಸುವುದಾಗಿ ಎಚ್ಚರಿಕೆ ನೀಡಿದರು.
ಫಲಾನುಭವಿ ರಿಜ್ವಾನ್ ಭಾನು ಮಾತನಾಡಿ, ಸ್ಲಂಬೋರ್ಡ್ ವತಿಯಿಂದ ಮನೆ ನಿರ್ಮಿಸಿಕೊಡುತ್ತೇವೆ ಎಂದು ಅಧಿಕಾರಿಗಳು ಬಂದಿದ್ದರು, ಸ್ತ್ರೀ ಶಕ್ತಿ ಹಾಗೂ ಇತರೆ ಸಂಘಗಳಲ್ಲಿ ಬಡ್ಡಿಗೆ ದುಡ್ಡು ಪಡೆದು ಹಣ ಕಟ್ಟಿದ್ದೇವೆ. ನಮ್ಮ ಹಳೆಯ ಮನೆ ಕಿತ್ತುಹಾಕಿ ಬೀದಿಯಲ್ಲಿ ಚಿಕ್ಕಮಕ್ಕಳೊಂದಿಗೆ ಮಳೆ, ಚಳಿಯಲ್ಲೆ ವಾಸಿಸುತ್ತಿದ್ದೇವೆ, ಈಗಾಗಲೇ ನಿರ್ಮಿಸಿರುವ ಕಟ್ಟಡಗಳ ಸೀಲಿಂಗ್ ಕೆಳಕ್ಕೆ ಬಿದ್ದು ಹೋಗಿ ಕಾಮಗಾರಿ ಸಂಪೂರ್ಣ ಕಳಪೆಯಿಂದ ಕೂಡಿದೆ. ಈ ಬಗ್ಗೆ ವಿಚಾರಿಸಲು ಅಧಿಕಾರಿಗಳಿಗೆ ಕರೆ ಮಾಡಿದರೆ ಸಂಪರ್ಕಕ್ಕೆ ಸಿಗುವುದಿಲ್ಲ ಎಂದು ತಮ್ಮ ಸಮಸ್ಯೆಯನ್ನು ತೊಡಿಕೊಂಡರು.
ಮಾಜಿ ಪುರಸಭಾ ಸದಸ್ಯ ಶಿವಕುಮಾರ್, ಸಲೀಂಪಾಷ, ಸಲೀಂ, ಮಮ್ತಾಜ್ ಉನ್ನೀಸಾ, ಶಬಾದ್, ರಿಯಾಜ್ ಅಹಮದ್ ಇತರರು ಇದ್ದರು.