ಮನೆಗಳ್ಳನ ಬಂಧನ: 5 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶ

ಕೊರಟಗೆರೆ, ಸೆ. ೨೫- ಮನೆಗಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಖದೀಮನೋರ್ವನನ್ನು ಬಂಧಿಸಿರುವ ಕೋಳಾಲ ಪೊಲೀಸರು ಸುಮಾರು ೫ ಲಕ್ಷ ರೂ. ಬೆಲೆಯ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ.
ದೊಡ್ಡಬಳ್ಳಾಪುರ ಪಟ್ಟಣದ ವಾಸಿ ಆನಂದ (೩೫) ಎಂಬಾತನೇ ಬಂಧಿತ ಆರೋಪಿ.
ತಾಲ್ಲೂಕಿನ ಮಾವತ್ತೂರು ಬಸ್ ನಿಲ್ದಾಣದಲ್ಲಿ ಏಕಾಂಗಿಯಾಗಿ ನಿಂತಿದ್ದ ಸದರಿ ಆರೋಪಿಯನ್ನು ಗಮನಿಸಿದ ಕೋಳಾಲ ಪೊಲೀಸರು ಅನುಮಾನಗೊಂಡು ಈತನನ್ನು ತಪಾಸಣೆ ನಡೆಸಿದಾಗ ಕಬ್ಬಿಣದ ರಾಡು ಪತ್ತೆಯಾಗಿದೆ. ನಂತರ ಈತನನ್ನು ಪೊಲೀಸ್ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದಾಗ ವರ್ಷದ ಹಿಂದೆ ನಡೆಸಿದ್ದ ಮನೆ ಕಳ್ಳತನ ಪ್ರಕರಣದ ಮಾಹಿತಿ ಬಹಿರಂಗಗೊಂಡಿದೆ.
ತಾಲ್ಲೂಕಿನ ಕೋಳಾಲ ಹೋಬಳಿ ನೀಲಗೊಂಡನಹಳ್ಳಿ ಗ್ರಾ.ಪಂ. ವ್ಯಾಪ್ತಿಯ ಚಿಕ್ಕಪಾಲನಹಳ್ಳಿ ಗ್ರಾಮದ ರೈತ ಉಮೇಶ್ ಎಂಬಾತನ ಮನೆಯ ಬೀಗ ಒಡೆದು ಸುಮಾರು ೫ ಲಕ್ಷ ರೂ. ಮೌಲ್ಯದ ಚಿನ್ನಾಭರಣ
ಕಳ್ಳತನ ಆಗಿರುವ ಬಗ್ಗೆ ೨೦೨೦ ರ ಆ.೨೮ ರಂದು ಕೋಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಮಾವತ್ತುರು ಬಳಿ ಸೆರೆ ಸಿಕ್ಕ ಸದರಿ ಕಳ್ಳನನ್ನು ವಿಚಾರಣೆ ನಡೆಸಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ.
ರೈತ ಉಮೇಶ್ ಅವರ ಮನೆಯಲ್ಲಿ ತನ್ನ ಸ್ನೇಹಿತ ನೆಲಮಂಗಲದ ಶರತ್ ಜತೆಗೂಡಿ ಕಳ್ಳತನ ಮಾಡಿ ಸುಮಾರು ೫ ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ದೋಚಿಕೊಂಡು ಪರಾರಿಯಾಗಿದ್ದಾಗಿ ವಿಚಾರಣೆ ಸಂದರ್ಭದಲ್ಲಿ ಆರೋಪಿ ಆನಂದ ಬಾಯ್ಬಿಟ್ಟಿದ್ದಾನೆ.
ಕೊರಟಗೆರೆ ಸರ್ಕಲ್ ಇನ್ಸ್‌ಪೆಕ್ಟರ್ ಸಿದ್ದರಾಮೇಶ್ವರ್ ಮತ್ತು ಕೋಳಾಲ ಪಿಎಸ್‌ಐ ಮಹಾಲಕ್ಷ್ಮಿ ನೇತೃತ್ವದಲ್ಲಿ ಮುಖ್ಯ ಪೇದೆ ಮೋಹನಕುಮಾರ್ ಮತ್ತು ಪೇದೆ ಸೈಯದ್ ರಿಫತ್ ಅಲಿ ಸದರಿ ಆರೋಪಿಯನ್ನು ಬಂಧಿಸುವಲ್ಲಿ ಶ್ರಮಿಸಿದ್ದಾರೆ.