ಮನೆಗಳು ಕುಸಿತ; ಪರಿಹಾರ ವಿತರಣೆಗೆ ಶಾಸಕ ಯತ್ನಾಳ ಸೂಚನೆ

s(ಸಂಜೆವಾಣಿ ವಾರ್ತೆ)
ವಿಜಯಪುರ:ಜು.30: ನಗರದಲ್ಲಿ ನಿರಂತರವಾಗಿ ಮಳೆ ಬಿಳುತ್ತಿರುವುದರಿಂದ ವಿವಿಧೆಡೆ ಮನೆಗಳು ಬಿದ್ದು, ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮನೆ ಹಾನಿಯಾದ ಕುಟುಂಬಗಳಿಗೆ ತಕ್ಷಣ ಸೂಕ್ತ ಪರಿಹಾರ ನೀಡಲು ಕ್ರಮ ಕೈಗೊಳ್ಳುವಂತೆ ತಹಶೀಲ್ದಾರ್ ಹಾಗೂ ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ನಗರ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ಅವರು ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ನಿರಂತರ ಮಳೆಯಿಂದ ನಗರ ಮತಕ್ಷೇತ್ರ ವ್ಯಾಪ್ತಿಯ ವಾರ್ಡ ನಂ.32 ರಲ್ಲಿ ಎರಡು ಮನೆಗಳು ಬಿದ್ದಿರುವ ಬಗ್ಗೆ ಗಮನಕ್ಕೆ ಬಂದಿದೆ. ಕೂಡಲೇ ಆ ಕುಟುಂಬಗಳಿಗೆ ಸೂಕ್ತ ಪರಿಹಾರ ಒದಗಿಸಬೇಕು. ಅಲ್ಲದೆ, ಮಹಾನಗರ ಪಾಲಿಕೆ ಕಂದಾಯ ಇಲಾಖೆ ಅಧಿಕಾರಿಗಳು, ಮತ್ತೆ ಎಲ್ಲೇಲ್ಲಿ ಸಮಸ್ಯೆಗಳು ಆಗಿದೆ ಎಂಬುವುದರ ಕುರಿತು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿ, ತಹಶೀಲ್ದಾರ್ ಅವರಿಗೆ ಸಲ್ಲಿಸಿ ಸೂಕ್ತ ಪರಿಹಾರ ನೀಡಲು ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ಸಾರ್ವಜನಿಕರು ಕೂಡ ತಮಗೆ ಹಾನಿಯಾಗಿರುವ ಬಗ್ಗೆ ಕಂದಾಯ ಇಲಾಖೆಯ ಗಮನಕ್ಕೆ ತಂದು ಪರಿಹಾರ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.
ಇನ್ನೂ ಮಳೆ ಬರುವ ಸಾಧ್ಯತೆಯಿದ್ದು, ಶಿಥಿಲಗೊಂಡ ಮನೆಯಲ್ಲಿರುವ ಕುಟುಂಬಗಳು ಮುಂಜಾಗೃತೆ ವಹಿಸಬೇಕು. ಗಾಳಿ ಮಳೆಗೆ ವಿದ್ಯುತ್ ಸ್ಪರ್ಶದಂತ ಅವಘಡಗಳು ಸಂಭವಿಸಬಹುದು ಅದರಿಂದಲೂ ಜಾಗೃತರಾಗಿರಬೇಕು. ಹೆಸ್ಕಾ ಅಧಿಕಾರಿಗಳು ಕೂಡ ಜೋತು ಬಿದ್ದಿರುವ ತಂತಿಗಳನ್ನು, ಬಾಗಿರುವ ವಿದ್ಯುತ್ ಕಂಬಗಳ ದುರಸ್ತಿ ಮಾಡಿಕೊಳ್ಳಬೇಕು. ಮಳೆಯಿಂದ ಯಾವುದೇ ರೀತಿಯಲ್ಲಿ ಸಮಸ್ಯೆ ಆಗದಂತೆ ಮುಂಜಾಗ್ರತ ಕ್ರಮಗಳನ್ನು ಜಿಲ್ಲಾಡಳಿತ ಕೈಗೊಳ್ಳಬೇಕು ಎಂದು ಸೂಚಿಸಿದ್ದಾರೆ.