ದಾವಣಗೆರೆ.ಜು.2; ಪರಿಸರ ರಕ್ಷಿಸುವ ಬಗ್ಗೆ ಬರೀ ಮಾತನಾಡದೆ ವರ್ಷದಲ್ಲಿ ಎಷ್ಟು ಗಿಡಗಳನ್ನು ನೆಟ್ಟಿದ್ದೇವೆ ಎಂಬುದರ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಹಾಲಕೆರೆ ಶ್ರೀ ಅನ್ನದಾನೇಶ್ವರ ಸಂಸ್ಥಾನ ಜಗದ್ಗುರು ಶ್ರೀ ಮ ನಿ ಪ್ರ ಮುಪ್ಪಿನ ಬಸವಲಿಂಗ ಮಹಾಸ್ವಾಮಿಗಳವರು ಕರೆ ನೀಡಿದರು.ಅವರು ಇಲ್ಲಿನ ದೇವರಾಜ ಅರಸು ಬಡಾವಣೆಯಲ್ಲಿರುವ ಶ್ರೀ ಅನ್ನದಾನೇಶ್ವರ ಶಾಖ ಮಠದಲ್ಲಿ ಏರ್ಪಡಿಸಿದ್ದ 259ನೇ ಶಿವಾನುಭವ ಸಂಪದ ಹಾಗೂ ಪರಿಸರ ದಿನಾಚರಣೆಯ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.ಸಾಲುಮರದ ತಿಮ್ಮಕ್ಕಳ ಬಗ್ಗೆ ನಾವು ಮಾತನಾಡುತ್ತೇವೆ. ನಾವು ಅವರಂತೆ ಗಿಡಗಳನ್ನು ಬೆಳೆಸಿದ್ದೇವೆಯೇ ಎಂದು ನಮ್ಮ ಮನಸ್ಸನ್ನು ನಾವೇ ಪ್ರಶ್ನಿಸಿಕೊಳ್ಳಬೇಕೆಂದು ನುಡಿದು ಬೇಗ ಶ್ರೀಮಂತರಾಗಬೇಕು, ಹಣವಂತರಾಗಬೇಕೆಂದು ಭಾವಿಸಿ ಸುಂದರವಾದ ಭೂಮಿಗೆ ರಸಗೊಬ್ಬರ ಹಾಕಿ ಬೆಳೆ ಬೆಳೆಯುವುದರಿಂದ ನಿತ್ಯವೂ ವಿಷವನ್ನು ಸೇವಿಸುತ್ತೇವೆ ಎಂದರು. ಇರುವ ಸ್ವಲ್ಪ ಭೂಮಿಯಲ್ಲಾದರೂ ನಿಮ್ಮ ಮನೆಯವರ ಆಹಾರಕ್ಕಾಗಿ ಸಾವಯವ ಗೊಬ್ಬರದಿಂದ ಆಹಾರ ಪಡಿತರಗಳನ್ನು ಬೆಳೆಯಿರಿ. ಎಲ್ಲಾ ಭೂಮಿಯನ್ನು ನೀರಾವರಿ ಮಾಡಿ ಜಮೀನನ್ನು ಬಂಜರು ಮಾಡದೆ ಪರಿಸರವನ್ನು ರಕ್ಷಿಸಿ ಉಳಿಸಿ ಬೆಳೆಸಬೇಕೆಂದರು.ಗಿಡಕ್ಕೆ ನೀರು ಹಾಕುವುದರ ಮೂಲಕ ಪರಿಸರ ದಿನಾಚರಣೆಯನ್ನು ಉದ್ಘಾಟಿಸಿದ ಕರುಣಾಜೀವ ಕಲ್ಯಾಣ ಟ್ರಸ್ಟಿನ ಸಂಸ್ಥಾಪಕ ಕಾರ್ಯದರ್ಶಿ ಶಿವನಕೆರೆ ಬಸವಲಿಂಗಪ್ಪ ಇವರು ವಚನಗಳಲ್ಲಿ ಪ್ರಕೃತಿಯ ಪ್ರೇಮ ವಿಷಯವಾಗಿ ಉಪನ್ಯಾಸ ನೀಡುತ್ತಾ 12ನೇ ಶತಮಾನದ ಶರಣರು ಪರಿಸರ ರಕ್ಷಣೆಗಾಗಿ ವಚನಗಳಲ್ಲಿ ಸಾಕಷ್ಟು ಉದಾಹರಣೆ ಸಮೇತ ವಿವರಿಸಿದ್ದಾರೆ. ಪರಿಸರ ರಕ್ಷಿಸುವ ನೆಪದಲ್ಲಿ ಮನೋಮಾಲಿನ್ಯಕ್ಕೆ ಮನುಷ್ಯ ಹೆಚ್ಚು ಒತ್ತು ಕೊಟ್ಟಿದ್ದರಿಂದ ನೆಮ್ಮದಿಯನ್ನು ಕಳೆದುಕೊಂಡಿದ್ದಾನೆಂದು ನುಡಿದರು.ಬದುಕು ನಡೆಸುವತ್ತ ಮನುಷ್ಯ ಒತ್ತಡದಲ್ಲಿ ಜೀವಿಸುತ್ತಾ ಅಸೂಯೆ, ದುರಾಸೆ, ದ್ವೇಷ,ಅಪ್ರಾಮಾಣಿಕತೆಯಿಂದ ಹೊರ ಬರಬೇಕೆಂದರೆ, ಪ್ರೀತಿ, ಸಮಚಿತ್ತತೆ, ಏಕತೆ, ಸಜ್ಜನರ ಸಹವಾಸ ದಂತಹ ದಿವ್ಯ ಔಷಧಿಯ ಮೊರೆ ಹೋಗಬೇಕು. ಇಲ್ಲದಿದ್ದರೆ ಮನುಷ್ಯ ತಾನೂ ವಿನಾಶದತ್ತ ಹೋಗುವುದರ ಜೊತೆಗೆ ಪರಿಸರ ನಾಶಕ್ಕೆ ನಾವೇ ಕಾರಣರಾಗುತ್ತೇವೆ ಎಂದರು.