ಮನುಷ್ಯ ಧರ್ಮದ ಮಾರ್ಗದಲ್ಲಿ ನಡೆದರೆ ಬದುಕು ಸ್ವಾರ್ಥಕ: ಶಾಂತವೀರ ಶಿವಾಚಾರ್ಯರು

ಕಲಬುರಗಿ:ಎ.12:ದೇವರು ಧರ್ಮವನ್ನು ಸೃಷ್ಟಿ ಮಾಡಿದ್ದಾನೆ ಅದೇ ಮಾನವ ಧರ್ಮ ಇದೇ ಮಾರ್ಗದಲ್ಲಿ ನಾವು ನಡೆದು ಬದುಕನ್ನು ಸ್ವಾರ್ಥಕತೆ ಮಾಡಿಕೊಳ್ಳಬೇಕೆಂದು ಮಾದನಹಿಪ್ಪರಗಾದ ಮಹಾಸ್ವಾಮಿಗಳಾದ ಶ್ರೀ ಶಾಂತವೀರ ಶಿವಾಚಾರ್ಯ ರವರು ಹೇಳಿದರು.

ಅವರು ನಗರದ ಹೊರವಲಯದಲ್ಲಿರುವ ಶ್ರೀ ಸಾಧು ಶಿವಲಿಂಗೇಶ್ವರ ದೇವಸ್ಥಾನದಲ್ಲಿ ಹನ್ನೊಂದು ದಿನಗಳ ಶ್ರೀ ಸಾಧು ಶಿವಲಿಂಗೇಶ್ವರ ಅವರ ಪುರಾಣ ಪ್ರವಚನದ ಸಪ್ತ ದಿನದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಾ ದೇವರು ಮಾನವನ ಜೊತೆಗೆ ಇತರೇ ಜೀವ ಸಂಕುಲವನ್ನು ಸೃಷ್ಟಿದ್ದಾನೆ. ಕೆಲವೊಂದು ಜೀವ ಸಂಕುಲಗಳಲ್ಲಿ ಪರಸ್ಪರ ಹೊಡೆದಾಡಿ ಬದುಕುವ ಪ್ರವೃತ್ತಿಯನ್ನು ಕೊಟ್ಟಿದ್ದಾನೆ ಆದರೆ ಮಾನವನಿಗೆ ಜ್ಞಾನವನ್ನು ಕೊಟ್ಟು ನೀನು ಧರ್ಮ ಮಾರ್ಗದಲ್ಲಿ ನಡೆದು ಪರರ ಹಿತಗೋಸ್ಕರ ಬದುಕು ಎಂದು ಹೇಳಿಕೊಟ್ಟಿದ್ದಾನೆ ಆದರೆ ಮನುಷ್ಯ ಮಾಡುತ್ತಿರುವುದು ಎಲ್ಲಾ ಅನಾಚಾರಗಳು, ಭ್ರಷ್ಟಾಚಾರ ಮನದಲ್ಲಿ ದ್ವೇಷ, ಕೋಪ ತುಂಬಿಕೊಂಡು ಪರಸ್ಪರ ಮತ್ಸರ ಪಡುತ್ತಿದ್ದಾನೆ. ಭೂಮಿ ಮೇಲೆ ಬಂದು ಹೋಗುವ ಜೀವಕ್ಕೆ ಜೀವನ ತುಂಬ ಅಡಂಬರದ ಆಸೆ, ಆಕಾಂಕ್ಷೆಗಳನ್ನೇ ಹೊತ್ತು ಕೊಂಡು ನಿಂತಿರುವುದು ನಿಜಕ್ಕೂ ವಿಪರ್ಯಾಸವೇವೆನಿಸುತ್ತದೆ.

ಯುಗಗಳು ಕಳೆದಂತೆ ದೇವರು ತನ್ನ ಸ್ವರೂಪವನ್ನು ಕಲಿಯುಗದಲ್ಲಿ ನಾನಾ ರೂಪದಲ್ಲಿರುವುದರಿಂದ ಕಾಣಬಹುದು ಆದ್ದರಿಂದ ನಾವು ದೇವರ ಸನ್ನಿಧಿ ಸೇರುವ ತನಕ ನಾನು, ನನ್ನದು ಎಂಬ ಅಹಂ ಬಿಟ್ಟು ಮಾನವ ಸಂಕುಲಕ್ಕೆ ಮಾರ್ಗದರ್ಶಿಯಾಗಿ ಬದುಕಬೇಕೆಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಶ್ರೀ ಸಿದ್ಧಾರೂಢ ಮುತ್ಯಾ, ಬಸವಂತರಾಯ ಪಾಟೀಲ್, ಜಿಲ್ಲಾ ಪಂಚಾಯತ ಮಾಜಿ ಸದ್ಯಸ ರಾಜೇಂದ್ರ ಕರಿಕಲ್, ವಿದ್ಯಾಸಾಗರ ಪಾಟೀಲ್ ಸೇರಿದಂತೆ ಕೆಸರಟಗಿ, ಇಟಗಿ, ಕೋಟನೂರ, ನಾಗನಹಳ್ಳಿ ಸೇರಿದಂತೆ ಸುತ್ತಮುತ್ತ ಬಡಾವಣೆಯ ಭಕ್ತಾಧಿಗಳು ಪಾಲ್ಗೊಂಡಿದ್ದರು.