ಮನುಷ್ಯ ಎಷ್ಟೇ ಬೆಳೆದರೂ ಮೂಲ ಸಂಸ್ಕೃತಿ ಮರೆಯಬಾರದು :  ರಂಭಾಪುರಿ ಶ್ರೀ

oplus_2

ಸಂಜೆವಾಣಿ ವಾರ್ತೆ

ಕಲಬುರ್ಗಿ. ಮೇ.೧೬; ಬೆಟ್ಟದಷ್ಟು ಕಷ್ಟಗಳು ಬಂದರೂ ಅಚಲವಾದ ಗಟ್ಟಿತನ ನಮ್ಮದಾಗಬೇಕು. ಸತ್ಯ ಧರ್ಮ ಪರಿಪಾಲನೆಯಿಂದ ಮನಸ್ಸು ಪರಿಶುದ್ಧಗೊಳ್ಳುತ್ತದೆ. ಮನುಷ್ಯ ಎಷ್ಟೇ ಎತ್ತರಕ್ಕೆ ಬೆಳೆದರೂ ಮೂಲ ಸಂಸ್ಕೃತಿ ಮರೆಯಬಾರದೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.ಅವರು  ತಾಲೂಕಿನ ಶ್ರೀನಿವಾಸ ಸರಡಗಿ ಚಿನ್ನದಕಂತಿ ಚಿಕ್ಕವೀರೇಶ್ವರ ಸಂಸ್ಥಾನ ಹಿರೇಮಠದ ಡಾ.ರೇವಣಸಿದ್ಧ ಶಿವಾಚಾರ್ಯರ ಷಷ್ಠಿಪೂರ್ತಿ ಸಮಾರಂಭ ಅಂಗವಾಗಿ ಮಂಗಲ ಸ್ನಾನ ಹಾಗೂ ನೂತನ ಉತ್ತರಾಧಿಕಾರಿ ನಿಯುಕ್ತಿ ಅಂಗವಾಗಿ ಜರುಗಿದ ಭಕ್ತ ಹಿತ ಚಿಂತನ ಸಮಾವೇಶದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು. ಆಧುನಿಕ ವಿಜ್ಞಾನ ಎಲ್ಲಿ ನಿರುತ್ತರವಾಗುವುದೋ ಅಲ್ಲಿಂದ ಭಾರತೀಯ ಆಧ್ಯಾತ್ಮ ಚಿಂತನೆ ಪ್ರಾರಂಭಗೊಳ್ಳುತ್ತದೆ ಎಂದು ದಿವಂಗತ ರಾಷ್ಟçಪತಿ ಡಾ.ಎಸ್.ರಾಧಾಕೃಷ್ಣನ್ ಅವರ ಮಾತಿನಂತೆ ಧರ್ಮ ಮತ್ತು ಸಂಸ್ಕೃತಿಗೆ ಅತ್ಯಂತ ಮಹತ್ವವಿದೆ. ಬದುಕಿನ ಯಶಸ್ವಿಗಾಗಿ ಲೌಕಿಕ ಜ್ಞಾನ ಹೇಗೆ ಅವಶ್ಯಕವೋ ಹಾಗೆ ನೊಂದ ಬೆಂದ ಮನಕ್ಕೆ ಆಧ್ಯಾತ್ಮ ಜ್ಞಾನದ ಅವಶ್ಯಕತೆಯಿದೆ. ಗುರಿಯಿಲ್ಲದ ಮತ್ತು ಗುರಿ ಸಾಧಿಸದ ವ್ಯಕ್ತಿಯ ಜೀವನ ನಿರರ್ಥಕವಾಗುತ್ತದೆ ಎಂಬ ಶ್ರೀ ಜಗದ್ಗುರು ರೇಣುಕಾಚಾರ್ಯರ ಸಂದೇಶದAತೆ ಮನುಷ್ಯ ಜಾಗೃತನಾಗಿ ಧರ್ಮ ಪಾಲನೆ ಮಾಡಿಕೊಂಡು ಮುನ್ನಡೆಯಬೇಕಾಗಿದೆ. ಹುಟ್ಟು ಎಷ್ಟು ಸಹಜವೋ ಸಾವು ಅಷ್ಟೇ ನಿಶ್ಚಿತ. ಇವೆರಡರ ಮಧ್ಯದ ಬದುಕು ಸಮೃದ್ಧಗೊಳಿಸಲು ಮಹಾತ್ಮರು ತೋರಿದ ದಾರಿ ಸದಾ ಆಶಾಕಿರಣವಾಗಿದೆ. ಶ್ರೀ ರೇವಣಸಿದ್ಧ ಶಿವಾಚಾರ್ಯರು ತಮ್ಮ ನಿರಂತರ ಪ್ರಯತ್ನ ಮತ್ತು ಸಾಧನೆಯಿಂದ ಶ್ರೀ ಮಠದ ಗೌರವ ಘನತೆಯನ್ನು ಹೆಚ್ಚಿಸಿದ್ದಾರೆ. ಶ್ರೀಗಳವರ ಕ್ರಿಯಾಶೀಲ ಬದುಕು ಅವರ ಜೀವನದ ಶ್ರೇಯಸ್ಸಿಗೆ ಸಾಕ್ಷಿಯಾಗಿದೆ. ಶ್ರೀಗಳವರು ಸಶಕ್ತವಾಗಿರುವಾಗಲೇ ಪುತ್ರವರ್ಗ ಪರಂಪರೆಯAತೆ ಅದ್ವಿಕ್ ಎಂಬ ವಟುವನ್ನು ಸ್ವೀಕರಿಸಿ ತಮ್ಮ ಉತ್ತರಾಧಿಕಾರಿಗಳೆಂದು ಘೋಷಿಸಿರುವುದು ಅವರ ತ್ಯಾಗ ಔದಾರ್ಯಕ್ಕೆ ಈ ಸಮಾರಂಭ ಸಾಕ್ಷಿಯಾಗಿದೆ. ಶ್ರೀ ಪೀಠದಿಂದ ರೇವಣಸಿದ್ಧ ಶಿವಾಚಾರ್ಯರಿಗೂ ಹಾಗೂ ನೂತನ ಉತ್ತರಾಧಿಕಾರಿಗಳಿಗೆ ರೇಶ್ಮೆ ಮಡಿ ಸ್ಮರಣಿಕೆ ಫಲ ಪುಷ್ಪದೊಂದಿಗೆ ಶ್ರೀ ರಂಭಾಪುರಿ ಜಗದ್ಗುರುಗಳು ಶುಭವನ್ನು ಹಾರೈಸಿದರು.ಸಮಾರಂಭದ ನೇತೃತ್ವ ವಹಿಸಿದ ಡಾ.ಶ್ರೀ ರೇವಣಸಿದ್ಧ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ನೀರಿನಲ್ಲಿ ಸ್ನಾನ ಮಾಡಿದರೆ ಬಟ್ಟೆ ಬದಲಿಸಬಹುದು. ಬೆವರಿನಲ್ಲಿ ಸ್ನಾನ ಮಾಡಿದರೆ ಇತಿಹಾಸವನ್ನು ನಿರ್ಮಿಸಲು ಸಾಧ್ಯ. ಸುಣ್ಣದ ನೀರು ಹಾಲಿನಂತೆ ಬೆಳ್ಳಗೆ ಕಾಣುತ್ತದೆ. ಆದರೆ ಗುಣ ಮತ್ತು ರುಚಿ ಮಾತ್ರ ಬೇರೆಯಾಗಿರುತ್ತದೆ. ಅದೇ ರೀತಿ ಕೆಲವರು ನಮ್ಮವರಂತೆ ಕಂಡರೂ ಅವರ ಒಳಗಿನ ರೂಪ ಭಾವನೆ ಬೇರೆಯೇ ಇರುತ್ತದೆ ಎಂಬುದನ್ನು ಮರೆಯಬಾರದು. ವೀರಶೈವ ಧರ್ಮ ಸಂಸ್ಕೃತಿ ಮತ್ತು ಸಂಸ್ಕಾರ ಕಲಿಸಿಕೊಟ್ಟಿದ್ದನ್ನು ಅನುಸರಿಸಿ ಬಾಳಬೇಕೆಂದರು. ಈ ಪವಿತ್ರ ಸಮಾರಂಭದಲ್ಲಿ ಸ್ಟೇಷನ್ ಬಬಲಾದ ಶಿವಮೂರ್ತಿ ಶಿವಾಚಾರ್ಯರು, ಕಲಬುರ್ಗಿ ಡಾ.ರಾಜಶೇಖರ ಶಿವಾಚಾರ್ಯರು, ತೊನಸನಹಳ್ಳಿ ರೇವಣಸಿದ್ಧ ಚರಂತೇಶ್ವರ ಶಿವಾಚಾರ್ಯರು, ಆಲಮೇಲ ಚಂದ್ರಶೇಖರ ಶಿವಾಚಾರ್ಯರು, ಕಲಕರ್ಟಿ ರಾಜಶೇಖರ ಶಿವಾಚಾರ್ಯರು, ಆಳಂದ ಸಿದ್ಧಲಿಂಗ ಶಿವಾಚಾರ್ಯರು ಪಾಲ್ಗೊಂಡು ನುಡಿ ನಮನ ಸಲ್ಲಿಸಿದರು. ಕಲಬುರ್ಗಿಯ ಬಸವರಾಜ ಭೀಮಳ್ಳಿ, ಅಣ್ಣಾರಾವ್ ಬಿರಾದಾರ, ಅಮೃತಪ್ಪ ಗೌಡ, ಬೆಂಗಳೂರಿನ ಬೀರೂರು ಶಿವಸ್ವಾಮಿ, ಆರ್.ಆರ್.ಹಿರೇಮಠ, ಜೇರಟಗಿ ಮಡಿವಾಳ ಶಾಸ್ತಿçಗಳು, ಬ್ಯಾಹಟ್ಟಿ ಸತೀಶ ಹಿರೇಮಠ ಸೇರಿದಂತೆ ಹಲವಾರು ಗಣ್ಯರಿಗೆ ಮತ್ತು ದಾನಿಗಳಿಗೆ ಶ್ರೀ ರಂಭಾಪುರಿ ಜಗದ್ಗುರುಗಳು ಗುರುರಕ್ಷೆಯಿತ್ತು ಶುಭ ಹಾರೈಸಿದರು. ನಾಗಲಿಂಗಯ್ಯ ಹಿರೇಮಠ ಮತ್ತು ಹಣಮಂತ್ರಾಯ ಅಟ್ಟೂರು ನಿರೂಪಣೆ ಮಾಡಿದರು. ಸಮಾರಂಭದ ನಂತರ ಸಕಲ ಸದ್ಭಕ್ತರಿಗೆ ಅನ್ನ ದಾಸೋಹ ಜರುಗಿತು.