ಮನುಷ್ಯರ ಸಹಾಯಕ್ಕೆ ಬರುವುದು ಪ್ರತಿಯೊಬ್ಬರ ಕರ್ತವ್ಯ: ದೇಶಪಾಂಡೆ

ಭಟ್ಕಳ, ಮೇ ೩೦- ಸಂಕಷ್ಟದ ಸಮಯದಲ್ಲಿ ಮನುಷ್ಯರ ಸಹಾಯಕ್ಕೆ ಬರುವುದು ಪ್ರತಿಯೊಬ್ಬನ ಕರ್ತವ್ಯವಾಗಿದ್ದು ಇಡೀ ವಿಶ್ವವೇ ಸಂಕಟದಲ್ಲಿರುವಾಗ ನಮ್ಮಿಂದ ಸಾಧ್ಯವಾದಷ್ಟು ಇತರರಿಗೆ ಸಹಾಯ, ಸಹಕಾರ ಮಾಡಬೇಕು ಎಂದು  ಮಾಜಿ ಸಚಿವ ಹಾಗೂ ಹಳಿಯಾಳ ಶಾಸಕ ಆರ್.ವಿ. ದೇಶಪಾಂಡೆ ಹೇಳಿದರು.

ಅವರು ಶನಿವಾರ ಇಲ್ಲಿನ ಮಿನಿ ವಿಧಾನ ಸೌಧದಲ್ಲಿ ಕೋವಿಡ್ ನಿಯಂತ್ರಣಕ್ಕೆ ಅಗತ್ಯವಿರುವ ಔಷಧಿ, ಮಾಸ್ಕ್ ಇತ್ಯಾದಿಗಳನ್ನು ತಾಲೂಕಾ ಆಡಳಿತ ಮತ್ತು ತಾಲೂಕಾ ಆಸ್ಪತ್ರೆಗೆ ಹಸ್ತಾಂತರಿಸಿ ಮಾತನಾಡಿದರು. ಕೋವಿಡ್ ಸಂದರ್ಭವನ್ನು ನಾವೆಲ್ಲರೂ ಮಾನವೀಯತೆಯ ದೃಷ್ಟಿಯಿಂದ ನೋಡಬೇಕು, ಪ್ರತಿಯೋರ್ವರಿಗೂ ಕೂಡಾ ತಿಳಿವಳಿಕೆ ಮೂಡಿಸುವ ಮೂಲಕ ಕೊರೋನವನ್ನು ಆದಷ್ಟು ಶೀಘ್ರ ಇಲ್ಲವಾಗಿಸಬೇಕು ಎಂದ ಅವರು, ಕೊರೋನ ಸಂದರ್ಭದಲ್ಲಿ ನಾವು ಕಾಂಗ್ರೆಸ್ ಪಕ್ಷ ಮುಖಂಡರು, ಚರ್ಚಿಸಿ ಎಷ್ಟು ಸಾಧ್ಯವೋ ಅಷ್ಟು ಸಹಾಯ ಮಾಡಲು ಮುಂದಾಗಿದ್ದೇವೆ.  ಈಗಾಗಲೇ ಪಿ.ಪಿ.ಇ. ಕಿಟ್‍ಗಳನ್ನು ನೀಡಿದ್ದು ಔಷಧ ಇತರೇ ವಸ್ತುಗಳನ್ನು ಕೂಡಾ ನೀಡಿದ್ದೇವೆ. ಮಂಕಾಳ ವೈದ್ಯ ಅವರು ಆಂಬುಲೆನ್ಸ್ ಹಾಗೂ ಆಕ್ಸಿಜನ್ ವ್ಯವಸ್ಥೆಯನ್ನು ಮಾಡಿದ್ದಾರೆ ಇನ್ನೂ ಯಾವುದಾದರೂ ಸಹಾಯ ಅಗತ್ಯವಿದ್ದಲ್ಲಿ ಅವುಗಳನ್ನು ಪೂರೈಸಲು ತಾವು ಸಿದ್ಧ ಎಂದೂ ಅವರು ಹೇಳಿದರು. ಮಾಜಿ ಶಾಸಕ ಮಂಕಾಳ ವೈದ್ಯ ಮಾತನಾಡಿ ಜಿಲ್ಲೆಯಲ್ಲಿ ಯಾವುದೇ ರೀತಿಯ ಕೊರತೆಯಾಗದಂತೆ ಆರ್.ವಿ. ದೇಶಪಾಂಡೆಯವರು, ಪ್ರಶಾಂತ ದೇಶಪಾಂಡೆಯವರು ನೋಡಿಕೊಳ್ಳುತ್ತಿದ್ದಾರೆ. ಯಾವುದೇ ಸಂದರ್ಭದಲ್ಲಿ ಏನೇ ಸಹಾಯ ಕೇಳಿದರೂ ಸಹ ಇಲ್ಲ ಎನ್ನದೇ ನೀಡುತ್ತಿರುವುದು ನಮ್ಮ ಸೌಭಾಗ್ಯವಾಗಿದೆ. ಕೊರೋನದಿಂದ ಸಂಕಷ್ಟದಲ್ಲಿರುವವರಿಗೆ ನಾವು ಯಾವುದೇ ರೀತಿಯ ಸಹಾಯ ಮಾಡಲು ಸಿದ್ಧರಿದ್ದೇವೆ ಎಂದೂ ಅವರು ಹೇಳಿದರು. ಈ ಸಂದರ್ಭದಲ್ಲಿ ಪ್ರಶಾಂತ ದೇಶಪಾಂಡೆ ಮಾತನಾಡಿ ಕೋವಿಡ್ ಸಮಯದಲ್ಲಿ ಸರಕಾರಿ ಆಸ್ಪತ್ರೆಯ ವೈದ್ಯರು, ಸಿಬ್ಬಂದಿ, ಸರಕಾರಿ ಇಲಾಖೆಯ ಅಧಿಕಾರಿಗಳೂ, ಸಿಬ್ಬಂದಿ ತಮ್ಮ ಜೀವದ ಹಂಗು ತೊರೆದು ಸೇವೆ ಮಾಡುತ್ತಿದ್ದಾರೆ. ಅವರಿಗೆ ಮೊದಲು ನಾವು ಕೃತಜ್ಞತೆಯನ್ನು ಸಲ್ಲಿಸಬೇಕು. ಅವರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಕರೆ ನೀಡಿದರು. ತಾಲೂಕಾ ಆಸ್ಪತ್ರೆಯ ಕಿಟ್‍ಗಳನ್ನು ತಾಲೂಕಾ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಸವಿತಾ ಕಾಮತ್, ರೆವೆನ್ಯೂ ಅಧಿಕಾರಿಗಳಿಗೆ ನೀಡಿದ ಕಿಟ್‍ನ್ನು ಸಹಾಯಕ ಆಯುಕ್ತೆ ಮಮತಾದೇವಿ ಜಿ.ಎಸ್. ಪಡೆದುಕೊಂಡರು.  ತಾಲೂಕಾ ಆರೋಗ್ಯಾಧಿಕಾರಿ ಡಾ. ಮೂರ್ತಿರಾಜ ಭಟ್ಟ, ತಹಸೀಲ್ದಾರ್ ಎಸ್. ರವಿಚಂದ್ರ ಮುಂತಾದವರು ಇದ್ದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ ಎಂ. ನಾಯ್ಕ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ನಾಯ್ಕ, ಮಾಜಿ ಶಾಸಕ ಜೆ.ಡಿ.ನಾಯ್ಕ, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಜಯಶ್ರೀ ಮೊಗೇರ, ಮಾಜಿ ಸದಸ್ಯೆ ಸಿಂಧು ಭಾಸ್ಕರ ನಾಯ್ಕ, ಪುರಸಭಾ ಅಧ್ಯಕ್ಷ ಪರ್ವೇಝ್ ಕಾಶಿಮಜಿ, ಜಿಲ್ಲಾ ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷ ಅಬ್ದುಲ್ ಮಜೀದ್, ಗೋಪಾಲ ನಾಯ್ಕ, ಭಾಸ್ಕರ ನಾಯ್ಕ, ಅಬ್ದುಲ್ ರಹೀಮ್, ನಾರಾಯಣ ನಾಯ್ಕ ಮುಂಡಳ್ಳಿ, ಅಬ್ದುಲ್ ರವೂಫ್ ನಾಯ್ತೆ ಮುಂತಾದವರು ಉಪಸ್ಥಿತರಿದ್ದರು.