ಮನುಷ್ಯನ ಪ್ರಗತಿಗೆ ಶಿಕ್ಷಣ ಅಡಿಪಾಯ ಇದ್ದಂತೆ

ಚಿತ್ತಾಪುರ: ಮಾ.24:ಸಮಾಜದಲ್ಲಿ ಮನುಷ್ಯನ ಉನ್ನತಿಗೆ ಹಾಗೂ ಪ್ರಗತಿಗೆ ಶಿಕ್ಷಣ ಅಡಿಪಾಯ ಇದ್ದಂತೆ ಎಂದು ಗ್ರಾಮ ಪಂಚಾಯತ ಮಾಜಿ ಅಧ್ಯಕ್ಷ ಶ್ರೀಮಂತ ಗುತ್ತೇದಾರ ಅಭಿಪ್ರಾಯಪಟ್ಟರು.

ತಾಲೂಕಿನ ದಿಗ್ಗಾಂವ ಗ್ರಾಮದ ಸರಕಾರಿ ಪ್ರೌಢ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಶಾಲಾ ವಾರ್ಷಿಕೋತ್ಸವ ಹಾಗೂ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಬಿಳ್ಕೋಡುವ ಸಮಾರಂಭದಲ್ಲಿ ಮಾತನಾಡಿದ ಅವರು, ಸಮಾಜದಲ್ಲಿ ಶಿಕ್ಷಣ ಕಲಿತವರಿಗೆ ಹೆಚ್ಚು ಗೌರವ ಇದೆ ಹಾಗಾಗಿ ವಿದ್ಯಾರ್ಥಿಗಳಾರು ನಿರ್ಲಕ್ಷ?? ಮಾಡದೇ ಉತ್ತಮ ಗುಣಮಟ್ಟದ ಶಿಕ್ಷಣ ಪಡೆಯುವ ಮೂಲಕ ಸಮಾಜದಲ್ಲಿ ಉನ್ನತ ಸ್ಥಾನಮಾನ ಪಡೆದು ಜನ್ಮ ನೀಡಿದ ಪಾಲಕರಿಗೆ ಹಾಗೂ ಅಕ್ಷರ ಕಲಿಸಿದ ಶಿಕ್ಷಕರಿಗೆ ಕೀರ್ತಿ ತರಬೇಕು ಎಂದು ಕಿವಿಮಾತು ಹೇಳಿದರು.

ಮುಖ್ಯಶಿಕ್ಷಕ ಮಹೇಶಕುಮಾರ ಭಾವಿಕಟ್ಟಿ ಮಾತನಾಡಿ, ನಿತ್ಯ ಶಾಲೆಗೆ ಬಂದು ಶಿಕ್ಷಕರು ಹೇಳುವ ವಿಷಯಗಳನ್ನು ಚೆನ್ನಾಗಿ ಅರ್ಥೈಸಿಕೊಂಡು ಅಭ್ಯಾಸ ಮಾಡಿದ ವಿದ್ಯಾರ್ಥಿಗಳಿಗೆ ಪರೀಕ್ಷೆಯ ಭಯವೇ ಇರುವುದಿಲ್ಲ ಹೀಗಾಗಿ ಶಿಕ್ಷಕರ ಮಾರ್ಗದರ್ಶನದಲ್ಲಿ ಮುನ್ನೆಡೆಯಬೇಕು ಎಂದು ಹೇಳಿದರು. ಕಳೆದ ವರ್ಷ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ತೆಗೆದುಕೊಂಡಿದ್ದರಿಂದ ದಿಗ್ಗಾಂವ ಸರಕಾರಿ ಪ್ರೌಢ ಶಾಲೆಗೆ ಉತ್ತಮ ಹೆಸರು ಬಂದಿದೆ ಹೀಗಾಗಿ ಈ ಸಾಲಿನ ವಿದ್ಯಾರ್ಥಿಗಳೂ ಸಹ ಪರೀಕ್ಷೆಯನ್ನು ಆತ್ಮವಿಶ್ವಾಸ ಹಾಗೂ ದೈರ್ಯದಿಂದ ಬರೆಯುವ ಮೂಲಕ ಹೆಚ್ಚು ಅಂಕಗಳು ಪಡೆಯಬೇಕು ಎಂದು ಕರೆ ನೀಡಿದರು

ಸಮಾರಂಭವನ್ನು ವೆಂಕಟೇಶ ಕಟ್ಟಿಮನಿ ಉದ್ಘಾಟಿಸಿದರು. ಪತ್ರಕರ್ತ ಕಾಶಿನಾಥ ಗುತ್ತೇದಾರ, ಶಿಕ್ಷಕ ಸಿದ್ದಲಿಂಗ ಬಾಳಿ, ಎಸ್‍ಡಿಎಂಸಿ ಅಧ್ಯಕ್ಷ ಗುರುಲಿಂಗಪ್ಪ ಬಂದಳ್ಳಿ, ಮಲ್ಲಶೆಟ್ಟಪ್ಪ ಸಂಗಾವಿ, ತಿಪ್ಪಣ್ಣ ಸಂಗಾವಿ, ಭೀಮರಾವ ದೇವರ್ ಮಾತನಾಡಿದರು. ಕಳೆದ ವರ್ಷ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಅಪುರ್ವಾ ಮಾಪಣ್ಣ, ಕಾವೇರಿ ಭೀಮರಾವ, ಜ್ಯೋತಿ ರಜನಿಕಾಂತ ವಿದ್ಯಾರ್ಥಿಗಳಿಗೆ ಗೌರವಿಸಲಾಯಿತು. ಪ್ರಶಿಕ್ಷಣಾರ್ಥಿಗಳು ಹಾಗೂ ಹಳೆಯ ವಿದ್ಯಾರ್ಥಿಗಳಿದ್ದರು.

ಶಿಕ್ಷಕ ರಾಜೇಂದ್ರ ಪ್ರಸಾದ ಪ್ರಾಸ್ತಾವಿಕ ಮಾತನಾಡಿದರು, ಶಿಕ್ಷಕಿ ರೇಣುಕಾ ಸ್ವಾಗತಿಸಿದರು, ಶಿಕ್ಷಕ ನಾಗೇಂದ್ರ ನಿರೂಪಿಸಿದರು, ಶಿಕ್ಷಕ ಬಸವರಾಜ ಪಾಟೀಲ ವಂದಿಸಿದರು. ಹಾಸ್ಯ ಕಲಾವಿದ ರಾಚಯ್ಯಸ್ವಾಮಿ ಖಾನಾಪೂರ ಹಾಸ್ಯ ಕಾರ್ಯಕ್ರಮ ನಡೆಸಿಕೊಟ್ಟರು.