ಮನುಷ್ಯನ ನೆಮ್ಮದಿಯ ಜೀವನಕ್ಕೆ ಯೋಗ ಅಗತ್ಯ

ಗದಗ,ಜೂ23 : ಯೋಗವು ದೇಹ ಮತ್ತು ಮನಸ್ಸುಗಳನ್ನು ಬೆಸೆಯುವ ಆಧ್ಯಾತ್ಮಿಕ ಪ್ರಕ್ರಿಯೆ. ಯೋಗ ವಿದ್ಯೆಯ ಮೂಲ ಭಾರತವೆಂಬುದು ಹಾಗೂ ಇದು ಜಗತ್ತನ್ನೆಲ್ಲ ಆವರಿಸಿರುತ್ತಿರುವುದು ಹೆಮ್ಮೆಯ ಸಂಗತಿ. ಭಾರತದಿಂದ ಪ್ರಪಂಚಕ್ಕೆ ಇದು ಬಹು ದೊಡ್ಡ ಕೊಡುಗೆ. ಮನಸ್ಸು ಮತ್ತು ದೇಹದ ಸ್ವಾಸ್ಥ್ಯಕಾಪಾಡಬಲ್ಲ, ಯೋಚನೆ ಮತ್ತು ಕ್ರಿಯೆಯ ನಡುವೆ ಸಾಮರಸ್ಯ ತರಬಲ್ಲ, ಮನಸ್ಸು ಮತ್ತು ನಿಸರ್ಗದ ನಡುವೆ ಸಮತೋಲನ ಕಾಪಾಡಬಲ್ಲ, ಆರೋಗ್ಯ ಮತ್ತು ಜೀವನ ಕ್ರಮ ಸುಧಾರಿಸಿಕೊಳ್ಳಲು ನೆರವಾಗಬಲ್ಲ ಗುಣ ಯೋಗಕ್ಕಿದ್ದು ವಿದ್ಯಾರ್ಥಿಗಳು ಪ್ರತಿ ನಿತ್ಯ ಯೋಗ ಮಾಡಬೇಕು. ಮನುಷ್ಯನ ಮನಸ್ಸು ಕ್ಷಣಾರ್ಧದಲ್ಲಿ ಲೋಕವನ್ನು ಸುತ್ತುತ್ತದೆ. ಮನಸ್ಸು ಲೋಕವನ್ನು ಸುತ್ತುವುದರಿಂದ ದೇಹ ಕ್ಷೀಣಿಸುತ್ತದೆ. ಮನಸ್ಸು ಮತ್ತು ದೇವವನ್ನು ಹತೋಟಿಯಲ್ಲಿ ಹಿಡಿಟ್ಟುಕೊಳ್ಳಲು ಮನುಷ್ಯನಿಗೆ ಯೋಗ ಅವಶ್ಯವಾಗಿದೆ ಎಂದು ಕೆ.ಎಲ್.ಇ. ಸಂಸ್ಥೆಯ ಸಿಬಿಎಸ್ಸಿ ಶಾಲೆಯ ಯೋಗ ಸಹಾಯಕ ಶಿಕ್ಷಕಿ ಗಿರೀಜಾ ಮುತ್ತಿನಪೆಂಡಿಮಠ ಹೇಳಿದರು.
ಶಹರದ ಕೆ.ಎಲ್.ಇ ಸಂಸ್ಥೆಯ ಎಸ್.ಎ. ಮಾನ್ವಿ ಕಾನೂನು ಮಹಾವಿದ್ಯಾಲಯದಲ್ಲಿ ಎನ್.ಎಸ್.ಎಸ್. ಹಾಗೂ ಐಕ್ಯೂಎಸಿ ವತಿಯಿಂದ ಆಯೋಜಿಸಿದ ರಾಷ್ಟ್ರೀಯ ಯೋಗ ದಿನಾಚರಣೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಯೋಗ ಸಹಕಾರಿಯಾಗಿದ್ದು, ಎಲ್ಲರೂ ನಿತ್ಯ ಯೋಗ ಮಾಡಿ ಆರೋಗ್ಯ ಕಾಪಾಡಿಕೊಳ್ಳಲು ಮುಂದಾಗಬೇಕಿದೆ. `ಯೋಗವು ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ನೆರವಾಗುತ್ತದೆ. ನಮಲ್ಲಿ ಕಾಣಿಸಿಕೊಳ್ಳುವ ಹಲವು ರೋಗಗಳಿಗೆ ಪರಿಹಾರವನ್ನೂ ಕಂಡುಕೊಳ್ಳಬಹುದು. ಆಧುನಿಕ ಒತ್ತಡದ ಬದುಕಿನಲ್ಲಿ ಬಹುತೇಕರಿಗೆ ಜೀವನವೇ ಸಾಕು ಎಂಬ ಭಾವ ಮೂಡುತ್ತಿದೆ. ಯೋಗ ಈ ಎಲ್ಲ ಒತ್ತಡಗಳನ್ನು ತಡೆದು ಮನಸ್ಸನ್ನು ಪ್ರಶಾಂತಗೊಳಿಸುತ್ತದೆ. ರೋಗ ಮುಕ್ತ, ಸ್ವಸ್ಥ-ಸುಸ್ಥಿರ ಸಮಾಜ ನಿರ್ಮಾಣಕ್ಕೆ ಯೋಗ ಅತ್ಯವಶ್ಯಕ’. ವಿಶ್ವದ ಹಲವು ರಾಷ್ಟ್ರಗಳು ಯೋಗದ ಮೊರೆ ಹೋಗುತ್ತಿವೆ. ಇದು ದೇಹವನ್ನು ಸಮತೂಕದಲ್ಲಿ ಇರಿಸುತ್ತದೆ. ಶಾಂತಿ ಕಾಪಾಡಿಕೊಳ್ಳಲು ಯೋಗ ಅತ್ಯುತ್ತಮ ಮಾರ್ಗವಾಗಿದೆ. ಯೋಗ ಜೀವನದುದ್ದಕ್ಕೂ ಮಾಡುವ ಪ್ರಕ್ರಿಯೆ, ಇದನ್ನು ಎಲ್ಲಾ ವಯಸ್ಸಿನವರು ನಿರಂತರವಾಗಿ ಮಾಡುವ ಮೂಲಕ ದೈಹಿಕ ಹಾಗೂ ಮಾನಸಿಕವಾಗಿ ಸದೃಢರಾಗಬೇಕು.
ಮನುಷ್ಯ ಒತ್ತಡ ಮುಕ್ತನಾಗಿದ್ದಾಗ ಮಾತ್ರ ಆರೋಗ್ಯದಿಂದ ಬದುಕಲು ಸಾಧ್ಯ. ಉತ್ತಮ ಆರೋಗ್ಯ ಹಾಗೂ ಮನಸ್ಥಿತಿಗೆ ಪ್ರತಿನಿತ್ಯ ಯೋಗ ಮತ್ತು ಧ್ಯಾನ ಮಾಡುವುದು ಅತ್ಯವಶ್ಯಕ. ಯೋಗ ಮಾಡುವುದರಿಂದ ಸಾಕಷ್ಟು ಲಾಭಗಳಿವೆ. ಯೋಗ ಒಂದು ದಿನ ಮಾಡಿ ಬಿಡುವುದಲ್ಲ . ಅದು ನಿರಂತರವಾಗಿ ಪ್ರತಿ ನಿತ್ಯ ನಡೆಯಬೇಕು. ವಿದ್ಯಾರ್ಥಿಗಳು ತಮ್ಮ ಮನಸ್ಸನ್ನು ನಿಯಂತ್ರಿಸಿಕೊಂಡು ಜ್ಞಾನರ್ಜನೆ ಹೆಚ್ಚು ಮಾಡಿಕೊಳ್ಳಲು ಯೋಗಭ್ಯಾಸ ಕಲಿತು ಪ್ರತಿ ದಿನ
20 ನಿಮಿಷ ಯೋಗಕ್ಕೆ ಮೀಸಲಿಟ್ಟು ನೀವು ಆರೋಗ್ಯವಾಗಿರಲು ಸಹಕಾರಿಯಾಗುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ ಪ್ರಾಚಾರ್ಯ ಡಾ.ಎಸ್. ಆರ್.ಪಾಟೀಲ ಮಾತನಾಡಿ, ಮನುಷ್ಯ ಉತ್ತಮ ಆರೋಗ್ಯದಿಂದ ಇದ್ದರೆ ಮಾತ್ರ ಉತ್ತಮ ಜೀವನ ನಡೆಸಬಹುದು. ಇದಕ್ಕೆ ಪೂರಕವಾಗುವಂತೆ ಯೋಗ, ಪ್ರಾಣಾಯಾಮ ಹಾಗೂ ಧ್ಯಾನ ಇವುಗಳನ್ನು ತಮ್ಮ ದಿನಚರಿಯಲ್ಲಿ ಅಳವಡಿಸಿಕೊಳ್ಳಬೇಕು. ಯೋಗ ಕಲಿತರೆ ದೀರ್ಘಾಯುಷ್ಯ ಹೊಂದಲು ಸಾಧ್ಯವಾಗುತ್ತದೆ. ಉತ್ತಮ ಆರೋಗ್ಯವನ್ನು ಕಾಪಾಡಿಕೊಂಡು ಬರಲು ಸಾಧ್ಯವಾಗುತ್ತದೆ. ಕಾಯಿಲೆಗಳನ್ನು ತಡೆಗಟ್ಟಲು, ರೋಗ ನಿರೋಧಕ ಶಕ್ತಿಯನ್ನು ಪಡೆಯಲು ಸಾಧ್ಯವಾಗುತ್ತದೆ ಎಂದರು.
ನಂತರ ಸಂಪನ್ಮೂಲ ವ್ಯಕ್ತಿಗಳಾದ ಗಿರೀಜಾ ಮುತ್ತಿನಪೆಂಡಿಮಠ ಅವರು, ವಿದ್ಯಾರ್ಥಿಗಳಿಗೆ ಸಾಮೂಹಿಕ ಯೋಗ ಪ್ರದರ್ಶನ, ಸೂರ್ಯ ನಮಸ್ಕಾರ ಹಾಗೂ ಇತರೆ ಆಸನಗಳ ಬಗ್ಗೆ ತಿಳಿಸಿಕೊಟ್ಟರು.
ಉಪನ್ಯಾಸಕರಾದ ಎಸ್.ಟಿ. ಮೂರಶಿಳ್ಳಿನ, ಜೈಹನುಮಾನ ಎಚ್.ಕೆ. ಡಾ.ಜ್ಯೋತಿ ಸಿ.ವಿ., ಶರಣಪ್ಪ ಅರಕೇರಿ ಸೇರಿದಂತೆ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿ ವೈಶಾಲಿ ಕುಲಕರ್ಣಿ ಪ್ರಾರ್ಥಿಸಿದರು. ದೈಹಿಕ ನಿರ್ದೇಶಕರಾದ ಡಾ.ಸಿ.ಬಿ. ರಣಗಟ್ಟಿಮಠ ಸ್ವಾಗತಿಸಿದರು. ವಿದ್ಯಾರ್ಥಿ ಸಹನಾ ಕಾರ್ಕಳ ನಿರೂಪಿಸಿದರು. ಉಪನ್ಯಾಸಕರಾದ ಡಾ. ವಿಜಯ ಮುರದಂಡೆ ವಂದಿಸಿದರು.