ಮನುಷ್ಯನ ಜೀವನ ಸರಳಗೊಳಿಸಿದ ಆವಿಷ್ಕಾರಗಳು

ಭಾಲ್ಕಿ:ಮಾ.1:ವಿಜ್ಞಾನ ಕ್ಷೇತ್ರದಲ್ಲಿ ಮೇಲಿಂದ ಮೇಲೆ ನಾನಾ ವಿಷಯ ಕುರಿತು ನಡೆಯುತ್ತಿರುವ ಸಂಶೋಧನೆ, ಆವಿಷ್ಕಾರಗಳು ಮಾನವನ ಜೀವನವನ್ನು ಸರಳಗೊಳಿಸಿವೆ ಎಂದು ಮುಖ್ಯಶಿಕ್ಷಕ ಮಹೇಶ ಮಹಾರಾಜ್ ಹೇಳಿದರು.

ತಾಲ್ಲೂಕಿನ ಕರಡ್ಯಾಳದ ಶ್ರೀ ಚನ್ನಬಸವೇಶ್ವರ ಗುರುಕುಲ ಪ್ರೌಢ ಶಾಲೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವಿಜ್ಞಾನ ದಿನಾಚರಣೆ ಕಾರ್ಯಕ್ರಮದಲ್ಲಿ ಶಾಲೆಯ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.

ವಿಜ್ಞಾನಿಗಳು ಇಲ್ಲಿಯವರೆಗೆ ಕಂಡು ಹಿಡಿದಿದ್ದೆಲ್ಲವೂ ವಿಜ್ಞಾನದ ಪ್ರಗತಿಯಿಂದ ಸಾಧ್ಯವಾಗಿದೆ. ಮನುಷ್ಯನು ಬಾಹ್ಯಾಕಾಶವನ್ನು ವಿಜ್ಞಾನದ ಸಹಾಯದಿಂದ ತಲುಪಿದ್ದಾನೆ. ವಿಜ್ಞಾನ ನಮ್ಮ ಜೀವನಕ್ಕೆ ಬಹಳ ಮುಖ್ಯವಾದ ಕೊಡುಗೆ ನೀಡಿದೆ. ಮಹಾನ್ ವಿಜ್ಞಾನಿಗಳ ವಿಶಿಷ್ಟ ಕೊಡುಗೆಯಿಂದ ನಮ್ಮ ದೇಶವು ವಿಶ್ವದಲ್ಲಿ ವಿಶಿಷ್ಟ ಸ್ಥಾನವನ್ನು ಪಡೆದುಕೊಂಡಿದೆ ಎಂದು ಹೇಳಿದರು.

ಸಂಪನ್ಮೂಲ ಶಿಕ್ಷಕ ಜಿತೇಂದ್ರ ಮಾತನಾಡಿ, ವಿಜ್ಞಾನ ದಿನಾಚರಣೆಯ ಮುಖ್ಯ ಉದ್ದೇಶ ವಿದ್ಯಾರ್ಥಿಗಳಲ್ಲಿ ವಿಜ್ಞಾನದ ಬಗ್ಗೆ ಅರಿವು ಮತ್ತು ಆಸಕ್ತಿ ಮೂಡಿಸುವುದು. ವಿಶ್ವ ವಿಜ್ಞಾನ ದಿನವು ಶಾಂತಿ ಮತ್ತು ಅಭಿವೃದ್ಧಿಯನ್ನು ಪ್ರತಿನಿಧಿಸುತ್ತದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳು ಸಿದ್ಧಪಡಿಸಿದ ವಿಜ್ಞಾನ ವಿಷಯದ ವಿವಿಧ ಮಾದರಿಗಳನ್ನು ಪ್ರದರ್ಶಿಸಲಾಯಿತು.

ವಿಜ್ಞಾನ ವಿಷಯದ ಮುಖ್ಯಸ್ಥರಾದ ಓಂಕಾರ ಹಾರಕೂಡೆ, ಸುನಿತಾ, ಮಲ್ಲಿಕಾರ್ಜುನ ಚಳಕಾಪೂರೆ, ಹಿರಿಯ ಶಿಕ್ಷಕರಾದ ಲಕ್ಷ್ಮಣ ಮೇತ್ರೆ, ರಾಜೇಂದ್ರ ಪಾಟೀಲ, ಪಂಡರಿನಾಥ ಪವಾರ್, ಸಂತೋಷ ಪತಂಗೆ, ಸಂತೋಷ ಏರೋಳೆ, ಅರವಿಂದ, ಮೋಹನ, ಹುಲೇಪ್ಪಾ ಕುಪ್ಪೆ ಉಪಸ್ಥಿತರಿದ್ದರು.

ಅನುಪಮಾ ಗೆಜ್ಜೆ ನಿರೂಪಿಸಿದರು.