ಸಂಜೆವಾಣಿ ವಾರ್ತೆ
ದಾವಣಗೆರೆ.ಸೆ.೨೪: ಮನುಷ್ಯನ ಜೀವನವು ನಿಂತ ನೀರಾಗದೆ ಯಂತ್ರದಂತೆ ಯಾಂತ್ರಿಕವಾಗಿ ಸದಾ ಸಾಗುತ್ತಿರಬೇಕು ಆಗ ಮಾತ್ರ ಸಮಾಜ ಚಲನಶೀಲತೆಯನ್ನು ಪಡೆಯುತ್ತದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು, ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ ಎಂ ಕರಣ್ಣವರ ಹೇಳಿದರು.ಜಿಲ್ಲಾ ಪಂಚಾಯತ್, ದಾವಣಗೆರೆ. ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲಕರಣ ಇಲಾಖೆ, ದಾವಣಗೆರೆ ಹಿರಿಯ ನಾಗರಿಕರ ಸಂಘ ಹಾಗೂ ದಾವಣಗೆರೆ ಜಿಲ್ಲಾ ಸರ್ಕಾರಿ ನಿವೃತ್ತ ನೌಕರರ ಸಂಘ ಹಿರಿಯ ನಾಗರಿಕರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಿರುವ ಸ್ವಯಂ ಸೇವಾ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ನಗರದ .ಸಿ.ಸಿ ಬಿ ಬ್ಲಾಕ್‌ನ ಬಾಪೂಜಿ ಸ್ಕೂಲ್ ಮೈದಾನದಲ್ಲಿ ವಿಶ್ವ ಹಿರಿಯ ನಾಗರಿಕರ ದಿನಾಚರಣೆ -2023ರ ಪ್ರಯುಕ್ತ ಆಯೋಜಿಸಲಾಗಿದ್ದ ಹಿರಿಯ ನಾಗರೀಕರಿಗಾಗಿ ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಹಿರಿಯ ನಾಗರಿಕರು ತಮ್ಮ ಆರೋಗ್ಯವನ್ನು ಉತ್ತಮವಾಗಿ ಕಾಪಾಡಿಕೊಂಡರೆ ತಮ್ಮ ವೈಯಕ್ತಿಕ ಲಾಭ ಅಲ್ಲದೆ ಸರ್ಕಾರ, ಕುಟುಂಬ ಮತ್ತು ಸಮಾಜಕ್ಕೂ ಉತ್ತಮ ಅನುಕೂಲ ಆಗಲಿದೆ ಎಂದರು.ಇದಲ್ಲದೆ ಪ್ರತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಹಿರಿಯ ನಾಗರಿಕರ ಪಟ್ಟಿಯನ್ನು ಸಿದ್ಧಪಡಿಸಿ ಅವರ ಕುಂದು ಕೊರತೆಗಳ ಬಗ್ಗೆ ನಿಯಮಿತವಾಗಿ ಸಭೆಗಳನ್ನು ನಡೆಸಬೇಕು. ಅಂತಹ ಸಭೆಗಳನ್ನು ನಡೆಸುವುದರಿಂದ ಅವರ ಸಮಸ್ಯೆಗಳು ನಮಗೆ ತಿಳಿಯುತ್ತದೆ. ನಾಗರಿಕರ ಸಮಸ್ಯೆಗಳ ಕುರಿತಂತೆ ಹಲವಾರು ಕಾನೂನುಗಳಿದ್ದು ಅವುಗಳನ್ನು ಸೂಕ್ತ ರೀತಿಯಲ್ಲಿ ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಹಿರಿಯ ನಾಗರಿಕರ ವೇದಿಕೆಯ ಗೌರವ ಅಧ್ಯಕ್ಷ ಎಸ್. ಗುರುಮೂರ್ತಿ ಮಾತನಾಡಿ, ಸಮಾಜದಲ್ಲಿನ ಶೇಕಡ ನೂರಕ್ಕೆ ತೊಂಬತ್ತೈದರಷ್ಟು ಭಾಗ ಹಿರಿಯ ನಾಗರಿಕರಿಗೆ ಸರ್ಕಾರದ ಸೌಲಭ್ಯಗಳ ಬಗ್ಗೆ ತಿಳಿದಿಲ್ಲ ನಾವೇ ಅವರಲ್ಲಿ ಜಾಗೃತಿ ಮೂಡಿಸಬೇಕು. ಅಲ್ಲದೆ ನಮ್ಮ ದಿನಾಚರಣೆಗಳನ್ನು ನಾವೇ ಆಚರಿಸಿಕೊಳ್ಳುವಂತ ಪರಿಸ್ಥಿತಿ ಬಂದಿದೆ. ಇದರ ಬದಲಿಗೆ ನಾವು ನಮ್ಮ ಮಕ್ಕಳ ಹುಟ್ಟು ಹಬ್ಬಗಳನ್ನು ಹೇಗೆ ಆಚರಿಸುತ್ತೇವೆಯೊ ಅದೇ ರೀತಿ ನಮ್ಮ ಮಕ್ಕಳು ನಮ್ಮ ದಿನಾಚರಣೆಯನ್ನು ಆಚರಿಸಿದರೆ ಅದಕ್ಕೆ ಒಂದು ಅರ್ಥ ಬರುತ್ತದೆ ಈ ನಿಟ್ಟಿನಲ್ಲಿ ನಮ್ಮ ಕುಟುಂಬದವರು ಅರ್ಥ ಮಾಡಿಕೊಳ್ಳಬೇಕಿದೆ ಎಂದು ಕರೆ ನೀಡಿದರು.ದಾವಣಗೆರೆ ಜಿಲ್ಲೆಯೊಂದರಲ್ಲಿ ಎರಡುವರೆ ಲಕ್ಷಕ್ಕೂ ಹೆಚ್ಚು ಹಿರಿಯ ನಾಗರಿಕರಿದ್ದು ನಮ್ಮಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸುವವರ ಸಂಖ್ಯೆ ಅತಿ ವಿರಳ. ಹಿರಿಯ ನಾಗರಿಕರ ಸೌಲಭ್ಯಗಳ ಕುರಿತಂತೆ ಇಲಾಖೆಗಳ ಅಧಿಕಾರಿಗಳು ಸೂಕ್ತ ಮಾಹಿತಿ ನೀಡುವ ಮೂಲಕ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ಹೇಳಿದರು.ವೇದಿಕೆಯಲ್ಲಿ ಹಿರಿಯ ನಾಗರಿಕ ಮತ್ತು ಸಬಲೀಕರಣ ಇಲಾಖೆಯ ಅಧಿಕಾರಿ ಕೆ.ಕೆ. ಪ್ರಕಾಶ್, ಭರತ್ ರಾಜ್ ಇತರರು ಇದ್ದರು.