ಮನುಷ್ಯನ ಕಷ್ಟ ಕಾಲಕ್ಕೆ ಸ್ಪಂದಿಸುವರೆ ನಿಜವಾದ ಬಂಧುಗಳು

ಚಿಕ್ಕನಾಯಕನಹಳ್ಳಿ, ಜು. ೧೬- ಮನುಷ್ಯನ ಜೀವನದ ಕೊನೆಯ ಹಂತದಲ್ಲಿ ಆಗು-ಹೋಗುಳಿಗೆ ಯಾರು ಸ್ಪಂದಿಸುತ್ತಾರೊ ಅವರೇ ನಿಜವಾದ ಬಂಧುಗಳಾಗುತ್ತಾರೆ ಎಂದು ಕನ್ನಡ ಸಂಘದ ವೇದಿಕೆಯ ಪ್ರಧಾನ ಕಾರ್ಯದರ್ಶಿ ಕೆ.ಜೆ.ಕೃಷ್ಣೇಗೌಡ ಹೇಳಿದರು.
ಆರೋಗ್ಯ ಇಲಾಖೆಯಲ್ಲಿ ಶುಶ್ರೂಷಕಿಯಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದ ದಿ. ವಿಮಲಮ್ಮ ರವರ ೨ನೇ ವರ್ಷದ ಪುಣ್ಯ ಸ್ಮರಣೆ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ವಿಕಲ ಚೇತನರಿಗೆ ವಸ್ತ್ರಗಳನ್ನು ವಿತರಿಸಿ ಅವರು ಮಾತನಾಡಿದರು.
ಮನುಷ್ಯ ಅಂತ್ಯದ ಕಷ್ಟಕಾಲದಲ್ಲಿ ಆರ್ಥಿಕವಾಗಿ, ಮಾನಸಿಕವಾಗಿ ಮತ್ತು ಶಾರೀರಿಕವಾಗಿ ದುರ್ಬಲರಿಗೆ ನೆರವಾಗುವುದು ಮಾನವೀಯತೆಯನ್ನು ತೋರಿದಂತಾಗುತ್ತದೆ. ಇದೇ ನಮ್ಮ ಬದುಕಿನಲ್ಲಿ ಕೆಲಸ ಮಾಡಿದ್ದು ಸ್ಮರಿಸುವಂತಹದಾಗಿದೆ. ಧರ್ಮ ಪತ್ನಿಯ ನೆನೆಪಿಗೋಸ್ಕರ ಪ್ರತಿ ವರ್ಷವೂ ವಿಭಿನ್ನವಾಗಿ ಕಾರ್ಯಕ್ರಮವನ್ನು ಆಯೋಜಿಸಿಲಾಗುತ್ತಿದ್ದು ಕಳೆದ ವರ್ಷ ಕೋವಿಡ್ ವಾರಿಯರ್ಸ್‌ಗಳಾದ ಆಶಾ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ಫುಡ್‌ಕಿಟ್ ನೀಡಿ ಗೌರವಿಸಲಾಗಿತ್ತು. ಈ ವರ್ಷ ಅಂಗವಿಕಲರನ್ನು ಗುರುತಿಸಿ ವಸ್ತ್ರಗಳನ್ನು ನೀಡಲಾಗುತ್ತಿದೆ ಎಂದರು.
ಮುಂಬರುವ ವರ್ಷದಲ್ಲಿ ಚಿಂದಿ ಹಾಯುವ ಹುಡುಗರನ್ನು ಗುರ್ತಿಸಿ ಅವರ ಬದುಕಿಗೆ ಅವಶ್ಯವಾದ ಸೂಕ್ತವಾದ ವಸ್ತುಗಳನ್ನು ನೀಡುವ ಮೂಲಕ ವಿಮಲಮ್ಮರವರ ಪುಣ್ಯಸ್ಮರಣೆಯನ್ನು ಅರ್ಥ ಪೂರ್ಣವಾಗಿ ಆಚರಿಸಲಾಗುವುದು ಎಂದರು.
ಹಿಂದುಳಿದ ವರ್ಗಗಳ ರಕ್ಷಣಾ ಸಮಿತಿಯ ಮುಖಂಡ ಕ್ಯಾಪ್ಟನ್ ಸೋಮಶೇಖರ್ ಮಾತನಾಡಿ, ಪತಿಯು ಧರ್ಮ ಪತ್ನಿಯ ನೆನೆಪಿನಲ್ಲಿ ದಾನ- ಧರ್ಮಗಳನ್ನು ಕೆಲವರು ಪರೋಕ್ಷವಾಗಿ ಮತ್ತೆ ಕೆಲವರು ಪ್ರತ್ಯಕ್ಷವಾಗಿ ನೀಡುವ ಕಾರ್ಯವನ್ನು ಮಾಡುತ್ತಾರೆ. ಬಾಳ ಸಂಗಾತಿಯಾದ ಸತಿಯು ಕಷ್ಟ ಸುಖದಲ್ಲಿ ಸಮಪಾಲು ಹಂಚಿಕೊಂಡು ದಾಂಪತ್ಯದಲ್ಲಿ ಬದುಕು ಸಾಗಿಸಿರುತ್ತಾರೆ. ಅವರ ಪುಣ್ಯತಿಥಿಯೊಂದು ಪತ್ನಿಯ ನೆನಪಿಗಾಗಿ ಸಮಾಜ ಮುಖಿಯಾಗಿ ಕೆಲಸ ಮಾಡುವ ಪತಿಯನ್ನು ಶ್ಲಾಘಿಸುವುದು ಅತಿಶಿಯೋಕ್ತಿಯಾಗಲಾರದು ಎಂದರು.
ಮಾಜಿ ಶಾಸಕ ಬಿ.ಲಕ್ಕಪ್ಪ ಮಾತನಾಡಿ, ಮಹಿಳೆಯು ತಾಯಿ, ಅಕ್ಕ-ತಂಗಿ, ಹೆಂಡತಿ ಮತ್ತು ಮಗಳಾಗಿ ಪ್ರತಿಯೊಬ್ಭ ಪುರುಷನ ಜೀವನದಲ್ಲೂ ಸ್ಥಾನ ಪಡೆದುಕೊಂಡಿರುತ್ತಾಳೆ. ಹೆಣ್ಣಿಗೆ ನಮ್ಮ ಭಾರತ ಸಂಸ್ಕೃತಿಯಲ್ಲಿ ಪೂಜನೀಯ ಸ್ಥಾನ ನೀಡಲಾಗಿದೆ. ಮಹಿಳೆ ಬಡವನಾಗಿರಲಿ ಅಥವಾ ಉನ್ನತ ಸ್ಥಾನದಲ್ಲಿರಲಿ ಸಮಾಜದಲ್ಲಿ ಹೆಣಿಗೆ ಗೌರವ ನೀಡುವುದು ಎಲ್ಲರ ಕರ್ತವ್ಯವಾಗಿರುತ್ತದೆ. ಕೃಷ್ಣೇಗೌಡರು ತಮ್ಮ ಪತ್ನಿಯ ಮೇಲಿನ ಗೌರವ ಹಾಗು ಶುಶ್ರೂಷಕಿಯಾಗಿ ಸೇವೆ ಸಲ್ಲಿಸಿದನ್ನು ಸ್ಮರಿಸಿ ಪ್ರತಿ ವರ್ಷವು ದಾನ ಧರ್ಮಗಳನ್ನು ನೀಡುವುದರಿಂದ ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಆಶಿಸಿದರು.
ಈ ಸಂದರ್ಭದಲ್ಲಿ ಕನ್ನಡ ಸಂಘದ ವೇದಿಕೆಯ ಅಧ್ಯಕ್ಷ ಸಿ.ಬಿ.ರೇಣುಕಸ್ವಾಮಿ, ಕಸಾಪ ಅಧ್ಯಕ್ಷ ಎಂ.ಎಸ್.ರವಿಕುಮಾರ್, ಪುರಸಭಾ ನಾಮಿನಿ ಸದಸ್ಯ ಸಿ.ಮಲ್ಲಿಕಾರ್ಜುನಸ್ವಾಮಿ, ವಿಮಲಮ್ಮರವರ ಪುತ್ರಿ ಮಾನಸಗೌಡ,
ಕುಂಚಾಕುರ ಕಲಾ ಸಂಘದ ಅಧ್ಯಕ್ಷ ಗಂಗಾಧರ್ ಮೊಗ್ಗದ ಮನೆ, ಪುರಸಭಾ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನಯ್ಯ, ಮೆಡಿಕಲ್ ಬಸವರಾಜು, ದೇವಾಂಗ ಸಮಾಜದ ಧನಂಜಯ, ಡಿ.ಎಸ್.ಎಸ್ ಮುಖಂಡ ಚಂದ್ರಶೇಖರ್ ಮತ್ತಿತರರು ಉಪಸ್ಥಿತರಿದ್ದರು.