ಮನುಷ್ಯನ ಇಂದ್ರಿಯಗಳಲ್ಲಿ ಸರ್ವ ಶ್ರೇಷ್ಠವಾದದ್ದು ಕಣ್ಣು

(ಸಂಜೆವಾಣಿ ವಾರ್ತೆ)
ಶಿರಹಟ್ಟಿ,ನ23: ಮನುಷ್ಯನ ಇಂದ್ರಿಯಗಳಲ್ಲಿ ಕಣ್ಣು ಅತೀ ಸೂಕ್ಷ್ಮ ಹಾಗೂ ಸರ್ವ ಶ್ರೇಷ್ಠವಾಗಿದೆ, ಆದ್ದರಿಂದ ಭಗವಂತ ನೀಡಿದ ಕಣ್ಣನ್ನು ಪ್ರತಿಯೊಬ್ಬರೂ ರಕ್ಷಣೆ ಮಾಡಿಕೊಳ್ಳಬೇಕು ಎಂದು ಉತ್ತರಾಧಿಕಾರಿ ಫಕೀರ ದಿಂಗಾಲೇಶ್ವರ ಶ್ರೀಗಳು ಅಭಿಪ್ರಾಯಪಟ್ಟರು.

ಸ್ಥಳೀಯ ಶ್ರೀ ಜ. ಫಕೀರೇಶ್ವರ ಸಂಸ್ಥಾನ ಮಠದಲ್ಲಿ ಕಂಚಿ ಕಾಮಕೋಟಿ ಮೆಡಿಕಲ್ ಟ್ರಸ್ಟ್, ಶಂಕರ ಕಣ್ಣಿನ ಆಸ್ಪತ್ರೆ ಶಿವಮೊಗ್ಗ, ವಿಶ್ವ ಕಂಪ್ಯೂಟರ್ ಅಕಾಡೆಮಿ, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ, ತಾಲೂಕು ಶರಣ ಸಾಹಿತ್ಯ ಪರಿಷತ್ತು, ಯೋಗ ಸಾಧಕರ ಸಮಿತಿ ಲಕ್ಷ್ಮೇಶ್ವರ, ಸ್ಥಳೀಯ ಸಾರ್ವಜನಿಕ ಆಸ್ಪತ್ರೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ, ಜಿಲ್ಲಾ ಅಂಧತ್ವ ನಿಯಂತ್ರಣ ಕಾರ್ಯಕ್ರಮಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಉಚಿತ ನೇತ್ರ ತಪಾಸಣಾ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕಲುಷಿತ ನೀರು ಸೇವನೆ, ಹವಾಮಾನ ವೈಪರೀತ್ಯ, ಕಲಬೆರಕೆ ಆಹಾರ, ಒತ್ತಡ ಜೀವನ ಪದ್ಧತಿಯಿಂದ ಮನುಷ್ಯನ ಆಯಸ್ಸು ಕ್ಷೀಣಿಸುತ್ತಿದೆ. ಅತಿಯಾದ ಜಂಕ್ ಫುಡ್ ಸೇವನೆ ಒಳ್ಳೆಯದಲ್ಲ, ಹಣ, ಆಸ್ತಿ, ಸಿರಿವಂತಿಕೆಗಿಂತ ಆರೋಗ್ಯ ಸಂಪತ್ತು ದೊಡ್ಡದು. 3-4 ತಿಂಗಳಿಗೊಮ್ಮೆ ವೈದ್ಯರನ್ನು ಸಂಪರ್ಕಿಸಿ ದೇಹದ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ಕಣ್ಣಿನ ದೃಷ್ಟಿಯ ಮೇಲೆ ದುಷ್ಪರಿಣಾಮ ಬೀರುವಂತಹ ಕೆಲಸ ಹಾಗೂ ಪದಾರ್ಥ ಸೇವಿಸಬಾರದು. ಪೌಷ್ಟಿಕ ಆಹಾರ ಸೇವಿಸಿ ಆರೋಗ್ಯಯುತ ಜೀವನ ನಡೆಸಬೇಕು ಎಂದು ಹೇಳಿದರು.

ಈ ವೇಳೆ ಡಾ. ಸುಪ್ರಿಯಾ, ಬಸವರಾಜ ಸಂಗಪ್ಪಶೆಟ್ಟರ, ಶಿವನಗೌಡ ನೇಮಗೌಡ್ರ, ಪ್ರಕಾಶ ಭೋರಶೆಟ್ಟರ, ಬಸವರಾಜ ಭೋರಶೆಟ್ಟರ, ರವಿಕುಮಾರ, ನಂದಾ ಪಲ್ಲೇದ, ಗೌರಿ ಸಂಗಪ್ಪಶೆಟ್ಟರ, ಜಿ.ಬಿ. ಹೆಸರೂರ, ಪ್ರಕಾಶ ಮೇಟಿ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.