ಮನುಷ್ಯನಲ್ಲಿ ವೈಚಾರಿಕತೆ ಇರಲಿ ಆದರೆ ನಾಸ್ತಿಕ ಮನೋಭಾವ ಬೇಡ;  ರಂಭಾಪುರಿ ಶ್ರೀ

ಸಂಜೆವಾಣಿ ವಾರ್ತೆ

ಬೆಂಗಳೂರು- ಫೆ-೧೨; ಸಮಾಜದ ಓರೆ ಕೋರೆಗಳನ್ನು ತಿದ್ದಿ ತೀಡಿ ಮುನ್ನಡೆಸುವುದೇ ಮಹಾನುಭಾವರ ಆದ್ಯ ಕರ್ತವ್ಯವಾಗಿದೆ. ಧರ್ಮಾಚರಣೆ ಇಲ್ಲದ ಮನುಷ್ಯನ ವ್ಯಕ್ತಿತ್ವಕ್ಕೆ ಬೆಲೆ ನೆಲೆ ಸಿಗಲಾರದು. ಮನುಷ್ಯನಲ್ಲಿ ವೈಚಾರಿಕತೆ ಬೆಳೆದು ಬರಲಿ ಆದರೆ ನಾಸ್ತಿಕ ಮನೋಭಾವ ಬೆಳೆಯಬಾರದು ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.ಅವರು  ಶ್ರೀ ಜಗದ್ಗುರು ರೇಣುಕಾಚಾರ್ಯ ವಿದ್ಯಾ ಸಂಸ್ಥೆಯ ಸಭಾಂಗಣದಲ್ಲಿ ಜರುಗಿದ ಸಂಸ್ಕೃತಿ ಸಂವರ್ಧನಾ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.ಅಸತ್ಯದಿಂದ ಸತ್ಯ ಸಾಕ್ಷಾತ್ಕಾರದೆಡೆಗೆ ಕತ್ತಲೆಯಿಂದ ಬೆಳಕಿನೆಡೆಗೆ ಸಾವಿನಿಂದ ಸಾವಿಲ್ಲದೆಡೆಗೆ ಮುನ್ನಡೆವ ಗುರಿ ಮನುಷ್ಯನದಾಗಬೇಕು. ಮನುಷ್ಯನ ದೈಹಿಕ ವಿಕಾಸಕ್ಕೆ ಆಹಾರ ನೀರು ಬೇಕು. ಬದುಕಿನ ವಿಕಾಸಕ್ಕೆ ಧರ್ಮಾಚರಣೆ ಬೇಕು. ಜೀವನದಲ್ಲಿ ಸಂಪತ್ತು ಸಂಪಾದಿಸದಿದ್ದರೂ ಚಿಂತೆಯಿಲ್ಲ. ಆದರೆ ಸದ್ಗುಣಗಳನ್ನು ಸಂಪಾದಿಸಿಕೊಳ್ಳುವುದನ್ನು ಮರೆಯಬಾರದು. ಅತಿ ಶತ್ರುಗಳನ್ನು ನಿಯಂತ್ರಿಸಬಹುದು. ಆದರೆ ಮತಿ ಶತ್ರುಗಳನ್ನು ನಿಯಂತ್ರಿಸುವುದು ಕಷ್ಟ. ಶ್ರೀ ವೀರಭದ್ರಸ್ವಾಮಿಯ ಕ್ರಿಯಾ ಕರ್ತೃತ್ವ ಶಕ್ತಿ ಅಮೋಘ. ದುಷ್ಟ ಶಕ್ತಿಗಳ ದಮನ ಸಾತ್ವಿಕ ಶಕ್ತಿಗಳ ಸಂವರ್ಧನೆಗಾಗಿ ವೀರಭದ್ರಸ್ವಾಮಿ ಅವತಾರ ತಾಳಿ ಬಂದಿದ್ದಾನೆ. ವೀರಶೈವ ಧರ್ಮದಲ್ಲಿ ಜೀವ ಶಿವನಾಗುವ ಸಾಧನಾ ಮಾರ್ಗವನ್ನು ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ್ದಾರೆ ಎಂದರು. ಎಸ್.ಜೆ.ಆರ್.ವಿದ್ಯಾ ಸಂಸ್ಥೆ ಅಧ್ಯಕ್ಷ ಯು.ಎಂ.ಬಸವರಾಜ ಇವರು ರಂಭಾಪುರಿ ಬೆಳಗು ಮಾಸ ಪತ್ರಿಕೆ ಬಿಡುಗಡೆ ಮಾಡಿ ಮಾತನಾಡಿ ಬಾಳಿನ ಭಾಗ್ಯೋದಯಕ್ಕೆ ಧರ್ಮ ಜ್ಞಾನದ ಅವಶ್ಯಕತೆಯಿದೆ. ವೀರಶೈವ ಲಿಂಗಾಯತ ಧರ್ಮದ ಇತಿಹಾಸ ಮತ್ತು ಆದರ್ಶ ಪರಂಪರೆ ಮರೆಯುವಂತಿಲ್ಲ. ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ ತತ್ವ ಸಿದ್ಧಾಂತ ಬಸವಾದಿ ಶರಣರ ಸಾಮಾಜಿಕ ಕಳಕಳಿಯನ್ನು ಅರಿತು ಬಾಳಿದರೆ ಸಮಾಜ ಸುಭದ್ರಗೊಳ್ಳಲು ಸಾಧ್ಯವಾಗುವುದೆಂದರು.