ಮನುಷ್ಯನನ್ನು ಕತ್ತಲಿನಿಂದ ಬೆಳಕಿಗೆ ಕರೆ ತರುವ ಶಕ್ತಿ ಗುರುವಿನಲ್ಲಿದೆ


ಬೈಲಹೊಂಗಲ,ಡಿ.25: ಕಲ್ಲನ್ನು ಶಿಲೆಯಾಗಿ ಪರಿವರ್ತನೆ ಮಾಡುವ ಶಕ್ತಿ ಗುರುವಿಗೆ ಮಾತ್ರ ಇದೆ ಎಂದು ಶ್ರೀಗುರು ಮಡಿವಾಳೇಶ್ವರ ಮಠದ ಮಡಿವಾಳೇಶ್ವರ ಸ್ವಾಮಿಜಿ ಹೇಳಿದರು. .
ಅವರು ಪಟ್ಟಣದ ಕಿತ್ತೂರು ರಾಣಿ ಚನ್ನಮ್ಮ ಶಿಕ್ಷಣ ಸಂಸ್ಥೆಯ ಪದವಿ ಮಹಾವಿದ್ಯಾಲಯದ ಸನ್ 2004-05 ನೇ ಸಾಲಿನ ಬಿಕಾಂ ವಿದ್ಯಾರ್ಥಿಗಳ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿ, ಕಟ್ಟಿದ ಮನೆ, ಬಂಗಾರದ ಒಡವೆ ಮುಂತಾವುಗಳನ್ನು ನಾವೆಲ್ಲ. ನೋಡಿ ಚೆನ್ನಾಗಿದೆ ಎನಬಹುದು ಆದರೆ ಅದರ ಹಿಂದಿರುವ ಶ್ರಮ ಎಂತದ್ದು ಎನ್ನುವದರ ಕುರಿತು ಯಾರೂ ಯೋಚನೆ ಮಾಡುವದಿಲ್ಲ. ಅದೇ ರೀತಿ ನಾವೆಲ್ಲ ಇಂದು ಈ ಸ್ಥಾನಕ್ಕೆ ತಲುಪಿದ್ದೇವೆ ಎಂದರೆ ಅದಕ್ಕೆ ನಮ್ಮ ಗುರುಗಳ ಶ್ರಮವೇ ಕಾರಣ ಆದ್ದರಿಂದ ನಮಗೆ ಜ್ಞಾನಾರ್ಜನೆ ಮಾಡಿ ನಮಗೆ ಉತ್ತಮ ಭವಿಷ್ಯ ಕಲ್ಪಿಸಿದ ಗುರುಗಳ ಸ್ಮರಣೆ ನಿತ್ಯವಾಗಬೇಕು ಎಂದರು.
ಸ್ನೇಹ ನುಡಿ ಸಲ್ಲಿಸಿದ ಬೆಳಗಾವಿಯ ಲೆಕ್ಕ ಪರಿಶೋಧಕ ವೀರಣ್ಣ ಮುರಗೋಡ ಮಾತನಾಡಿ, ಗುರು ಬಲವಿಲ್ಲದೆ ಸಾಧನೆ ಸಾಧ್ಯವಿಲ್ಲ. ಗುರು ಒಬ್ಬ ಉತ್ತಮಸ್ನೇಹಿತನಲ್ಲದೆ ಒಳ್ಳೆಯ ಮಾರ್ಗದರ್ಶಕನು ಹೌಸು ಎಂದರಲ್ಲದೆ ಮುಂದೆ ಗುರಿ ಹಿಂದೆ ಗುರುವಿದ್ದಾಗ ಮಾತ್ರ ಭವಿಷ್ಯ ಉಜ್ವಲವಾಗುವದು ಎಂದರು.
ಅಧ್ಯಾಪಕರಾದ ಡಾ. ವೈ.ಜಿ.ಬಾಳಿಗಟ್ಟಿ, ಆರ್.ಬಿ. ಹಾಲಯ್ಯನವರ, ಜಿ.ಕೆ.ಗಾಂವಕರ, ಆರ್.ಎಸ್.ಕುಬಸದ ಹಾಗೂ ಜಿ.ಎಸ್.ಹಿರೇಮಠ ಮಾತನಾಡಿ,
ಜ್ಞಾನ ಬಹಳ ಅಪರೂಪವಾದ ವಸ್ತು, ನಮ್ಮಲ್ಲಿರುವ ಜ್ಞಾನ ಅಧಿಕಾರ ಎಲ್ಲವೂ ಗೌಣವಾಗಿರುತ್ತದೆ. ವಿದ್ಯಾರ್ಥಿಗಳ ಮನಸಿನಲ್ಲಿ ಜಾತಿ, ಬೇಧ ಭಾವ ಯಾವತ್ತೂ ಇರುವದಿಲ್ಲ ಎಲ್ಲರಿಗೂ ಸರಿಸಮಾನವಾಗಿ ಜ್ಞಾನ ನೀಡುವ ಕೆಲಸ ಶಿಕ್ಷಕರು ಮಾಡುತ್ತಾರೆ ಎಂದರು.
ವಿದ್ಯಾರ್ಥಿಗಳ ಪರವಾಗಿ ವೀರಣ್ಣ ಕಣ್ಣೂರ, ರವೀಂದ್ರ ಮರಳಿ, ಸುವರ್ಣ ನಿರಡಿ, ಶ್ರೀದೇವಿ ಮಹಾಜನ ಮಾತನಾಡಿದರು.
ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಬಿ.ಬಿ.ಬೂದಿಹಾಳ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕವಿತಾ ಪಾಟೀಲ, ಪ್ರವೀಣ ಪಾಟೀಲ ನಿರೂಪಿಸಿದರು.
ಹೇಮಾ ಚಚಡಿ, ರವಿಕಿರಣ್ ಯಾತಗೇರಿ ಸ್ವಾಗತಿಸಿದರು. ತೇಜಸ್ವಿನಿ ಬಂಕಾಪುರ ಸ್ವಾಗತ ಗೀತೆ ಹಾಡಿದರು. ಅನುರಾಧಾ ಮೆಟಗುಡ್ಡ ವಂದಿಸಿದರು.