ಮನುಜ ಮತ,ವಿಶ್ವಪಥ ಸಂದೇಶ ಸಾರಿದ ಕುವೆಂಪು:ಸಂತೋಷ ಬಂಡೆ

ಇಂಡಿ: ಡಿ.30:ಕನ್ನಡ ಸಾಹಿತ್ಯಕ್ಕೆ ಕುವೆಂಪು ಅವರ ಕೊಡುಗೆ
ಅಪಾರ.ಅವರು ಕಾವ್ಯದ ಹೊಸ ರೂಪಗಳನ್ನು ಪರಿಚಯಿಸಿ, ಕನ್ನಡ ಸಾಹಿತ್ಯಕ್ಕೆ ಆಧುನಿಕತೆಯನ್ನು ತಂದರು. ಅವರ ಕೃತಿಗಳು ಅನೇಕ ಕನ್ನಡ ಬರಹಗಾರರಿಗೆ ಸ್ಫೂರ್ತಿ ನೀಡಿತು. ಅವರು ಕನ್ನಡ ಸಾಹಿತ್ಯದ ಪ್ರವರ್ತಕರಾಗಿದ್ದಾರೆ ಎಂದು ಶಿಕ್ಷಕ ಸಂತೋಷ ಬಂಡೆ ಹೇಳಿದರು.
ಅವರು ತಾಲೂಕಿನ ಹಿರೇರೂಗಿ ಗ್ರಾಮದ ಯುಬಿಎಸ್ ಶಾಲೆಯಲ್ಲಿ ಹಮ್ಮಿಕೊಂಡ ರಾಷ್ಟ್ರಕವಿ ಕುವೆಂಪುರವರ ಜನ್ಮದಿನದ ನಿಮಿತ್ತ ವಿಶ್ವ ಮಾನವ ದಿನಾಚಾರಣೆಗೆ ಚಾಲನೆ ನೀಡಿ ಮಾತನಾಡಿದರು.
ಕುವೆಂಪು ಅವರ ಸಾಹಿತ್ಯಿಕ ವೃತ್ತಿಜೀವನವು ಐದು ದಶಕಗಳವರೆಗೆ ವ್ಯಾಪಿಸಿದೆ.ಅವರು ಸಮೃದ್ಧ ಬರಹಗಾರರಾಗಿ,ಮನುಜ ಮತ,ವಿಶ್ವಪಥ’ ಸಂದೇಶ ಸಾರಿದರು. ಅವರ ಕೃತಿಗಳು ಪ್ರಕೃತಿ, ಪ್ರೀತಿ, ಆಧ್ಯಾತ್ಮಿಕತೆ, ಸಾಮಾಜಿಕ ಸಮಸ್ಯೆಗಳು ಮತ್ತು ದೇಶಭಕ್ತಿಯಂತಹ ವ್ಯಾಪಕವಾದ ವಿಷಯಗಳನ್ನು ಒಳಗೊಂಡಿವೆ ಎಂದು ಹೇಳಿದರು.
ಶಿಕ್ಷಕ ಎಸ್ ಎಸ್ ಅರಬ ಮಾತನಾಡಿ, ಮಾನವ ತನ್ನ ಮನಸನ್ನು ವಿಶ್ವದಷ್ಟು ವಿಶಾಲವಾಗಿ ಇಟ್ಟುಕೊಳ್ಳಬೇಕು. ಮನುಷ್ಯನಿಗೆ ಹೃದಯವಂತಿಕೆ ಸಜ್ಜನಿಕೆ, ಅಭಿಮಾನ, ಪ್ರೀತಿ, ಸಹನೆ ಹಾಗೂ ಕರುಣೆ ಎಲ್ಲವೂ ಮುಖ್ಯ ಎಂಬುದನ್ನು ತಮ್ಮ ಕಾವ್ಯಗಳ ಮೂಲಕ ರಾಷ್ಟ್ರಕವಿ ಕುವೆಂಪು ಅವರು ಜಗತ್ತಿಗೆ ಪರಿಚಯಿಸಿದ್ದಾರೆ ಎಂದು ಹೇಳಿದರು.
ಕನ್ನಡ ಶಿಕ್ಷಕಿ ಎಸ್ ಪಿ ಪೂಜಾರಿ ಅಧ್ಯಕ್ಷತೆ ವಹಿಸಿ ಮಾತನಾಡಿ, ರಾಷ್ಟ್ರಕವಿ ಕುವೆಂಪು ಅವರ ಪುಸ್ತಕಗಳನ್ನು ಯುವ ಪೀಳಿಗೆ ಅಧ್ಯಯನ ಮಾಡಬೇಕು. ಕುವೆಂಪು ರಚಿಸಿದ ಕಾವ್ಯಗಳ ಮೂಲಕ ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಇದರಿಂದ ಸಮಾಜದಲ್ಲಿ ಉತ್ತಮ ನಾಗರಿಕರಾಗಲು ಸಹಾಯವಾಗಲಿದೆ ಎಂದು ಹೇಳಿದರು.
ಶಿಕ್ಷಕಿ ಎನ್ ಬಿ ಚೌಧರಿ ಕಾರ್ಯಕ್ರಮ ನಿರ್ವಹಿಸಿದರು. ಶಾಲಾ ಮಕ್ಕಳು ಭಾಗವಹಿಸಿದ್ದರು.