ಮನುಜನ ಅಂತರಾಳದ ತುಡಿತಗಳೆ ಬರಹಗಳಾಗುವುದು

ರಾಯಚೂರು,ಆ.೦೮ – ಪದಗಳಿಗೆ ಪದಗಳನ್ನು ಜೋಡಿಸುವುದಕ್ಕೆ ಮಾತ್ರ ಬರಹಗಾರನ ಬದುಕು ಸೀಮಿತವಾಗದೆ ಬದುಕಿನ ದಟ್ಟ ಅನುಭವವನ್ನು ಹಿಡಿದಿಡಲು ಮತ್ತು ಅಂತರಾಳದ ತುಡಿತವನ್ನು ಕಟ್ಟಿಕೊಡುವ ಕೆಲಸ ಕವಿಗಳಿಂದಾಗಬೇಕಿದೆ ಎಂದು ಕವಿ ಈಶ್ವರ ಮಮದಾಪೂರ ಹೇಳಿದರು.
ರಾಯಚೂರಿನ ವೀರಶೈವ ಕಲ್ಯಾಣ ಮಂಟಪದಲ್ಲಿ ಬೆಳಕು ಶೈಕ್ಷಣಿಕ, ಸಾಹಿತ್ಯ ,ಸಾಂಸ್ಕೃತಿಕ ಟ್ರಸ್ಟ್ ಮತ್ತು ಮಾನವ ಹಕ್ಕುಗಳ ಹಿತರಕ್ಷಣಾ ವೇದಿಕೆ ವತಿಯಿಂದ ರಾಜ್ಯ ಮಟ್ಟದ ಕನ್ನಡ ಸಿರಿವಂತಿಕೆ ಕಾರ್ಯಕ್ರಮದಂಗವಾಗಿ ರಾಜ್ಯಮಟ್ಟದ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು ನಮ್ಮಯ ಬದುಕು ಮತ್ತು ಬರಹಕ್ಕೆ ವ್ಯತ್ಯಾಸವಾಗುತ್ತಿದ್ದು ಸಾಮಾಜಿಕ ಸಮಸ್ಯೆಗಳನ್ನು ಸಮರ್ಥವಾಗಿ ಬಿಂಬಿಸುವುದರ ಜೊತೆಗೆ ಮಾನವೀಯ ಮೌಲ್ಯಗಳನ್ನು ಕಟ್ಟುವ , ಮನುಷ್ಯ ಪ್ರೀತಿಯನ್ನು ಸ್ಥಾಪಿಸುವ ಕಾರ್ಯ ಎಂದಿಗಿಂತ ಇಂದು ಅಗತ್ಯವಾಗಿದೆ ಹಾಗೂ ಯುವ ಜನತೆಗೆ, ಯುವ ಪೀಳಿಗೆಯ ಯುವ ಮನಸ್ಸನಲ್ಲಿ ಮೂಡುವ ಕಾವ್ಯ ಪ್ರೀತಿಯನ್ನು ಹುಟ್ಟಿಸುವ ಕಾರ್ಯ ನಡೆಯಬೇಕಾಗಿದ್ದು ಈ ನಿಟ್ಟಿನಲ್ಲಿ ಬೆಳಕು ಸಂಸ್ಥೆ ಶ್ರಮಿಸಬೇಕು ಎಂದರು.
ಯಾದಗಿರಿ -ಶಹಾಪುರದ ಸಾಹಿತಿ, ಕ.ಸಾ.ಪ. ವಲಯ ಕ್ಷೇತ್ರದ ಅಧ್ಯಕ್ಷ ಡಾ.ದೇವೇಂದ್ರಪ್ಪ ಹಡಪದ ಕಾರ್ಯಕ್ರಮವನ್ನು ಉದ್ಘಾಟಿಸಿದರು ನಂತರ ಡಾ.ಸರ್ವಮಂಗಳ ಸಕ್ರಿ ಮಾತನಾಡುತ್ತ ಕವಿಗಳು ಕ್ರಿಯಾಶೀಲರಾಗಿದ್ದುಕೊಂಡು ಅತ್ಯುತ್ತಮ ಚಿಂತನೆಗಳೊಂದಿಗೆ ಸುತ್ತಮುತ್ತಲಿನ ವಾಸ್ತವಿಕ ಸ್ಥಿತಿಗತಿಗಳಿಗೆ ಸ್ಪಂದಿಸುವ ಒಳತುಡಿತವನ್ನು ಹೊಂದಿರಬೇಕು ಎಂದರು. ಪ್ರೊ ಶಂಕರರಾವ್ ಉಬಾಳೆ ಮಾತನಾಡುತ್ತಾ ಅನುಭವವೇ ಜೀವಂತ ಕಾವ್ಯವಾಗಿದ್ದು ತಮ್ಮ ದಟ್ಟ ಅನುಭವವನ್ನು ಕಾವ್ಯರೂಪದಲ್ಲಿ ಕಟ್ಟುವ ಕಾರ್ಯ ಇಂದಿನ ಕವಿಗಳಿಂದ ಆಗಬೇಕಿದೆ ಎಂದರು. ನಂತರ ಕು.ಸಮ್ರಿನ ಭಾನು, ಕು.ಸ್ಫೂರ್ತಿ ಕನಸಾವಿ ನಿರೂಪಣೆ ಕಾರ್ಯ ನಿರ್ವಹಿಸಿದರು,ತಾಲೂಕಿನ ಮತ್ತು ಹೊರ ಜಿಲ್ಲೆಯ ಅನೇಕ ಕವಿಗಳು ಕವಿತೆ ವಾಚಿಸಿದರು.
ಈ ಸಂದರ್ಭದಲ್ಲಿ ವೇದಿಕೆಯ ಮೇಲೆ ಚಂದ್ರಶೇಖರ ಮದ್ಲಾಪುರ, ಸಿಂಧನೂರಿನ ಅಮರಗುಂಡಪ್ಪ, ರಾಯಚೂರು ಕ ಸಾ.ಪ. ತಾಲೂಕಾ ಅಧ್ಯಕ್ಷ ವೆಂಕಟೇಶ್ ಬೇವಿನಬೆಂಚಿ, ಸಿರಿವಾರ ತಾಲೂಕಾ ಕಸಾಪ ಅಧ್ಯಕ್ಷ, ಸುರೇಶ್ ಹೀರಾ ,ಆಶಯ ನುಡಿಗಳನ್ನಾಡಿದರು, ಸಾಹಿತಿ ಸರ್ವಮಂಗಳ ಸಕ್ರಿ,ಪಿ.ವೆಂಕಟೇಶ ಬಾಗಲವಾಡ, ಬೆಳಗಾವಿಯ ಜ್ಯೋತಿ ಮಾಳಿ, ಸಂಕುಲ ವೇದಿಕೆಯ ರೇಖಾ ಬಡಿಗೇರ್, ಬೆಳಕು ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಅಣ್ಣಪ್ಪ ಮೇಟಿಗೌಡ,ಕಾರ್ಯದರ್ಶಿ ಚಂದ್ರಶೇಖರ್ ಮದ್ಲಾಪೂರು ಉಪಸ್ಥಿತರಿದ್ದರು.