ಮನುಕುಲದ ಶಾಂತಿಗೆ ಯೋಗ ಒಂದೇ ಮಾರ್ಗ”

ದಾವಣಗೆರೆ. ಜು.೨೧;  ನಗರದ  ಜಯದೇವ ವೃತ್ತದಲ್ಲಿನ ಶಿವಯೋಗಾಶ್ರಮದಲ್ಲಿ ಶ್ರೀ ಜಯದೇವ ಯೋಗ ಮತ್ತು ಧ್ಯಾನ ಕೇಂದ್ರದ ವತಿಯಿಂದ ಇಂದು ಬೆಳಿಗ್ಗೆ ಯೋಗಾಚಾರ್ಯ ಶರಣ ವಿಠ್ಠಲ ದಾಸ್ ಶಣೈ ಅವರ ಪುಣ್ಯ ಸ್ಮರಣೆ  ಕಾರ್ಯಕ್ರಮ ನಡೆಯಿತು.ಹಿರಿಯ ಯೋಗಪಟು, ಶೆಣೈ ಅವರ ಶಿಷ್ಯರಾದ ಕಣಕುಪ್ಪಿ ಕರಿಬಸಪ್ಪ (ಅಜ್ಜಪ್ಪ) ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಯೋಗ ಗುರುಗಳಾದ ಶಣೈ ಅವರು ಮಲ್ಲಾಡಹಳ್ಳಿಯ ಶ್ರೀ ರಾಘವೇಂದ್ರ ಗೂರೂಜಿ ಅವರ ಶಿಷ್ಯ ರಲ್ಲಿ‌ ಒಬ್ಬರಾಗಿ ಅವರಿಗೆ ಆತ್ಮೀಯರಾಗಿದ್ದರು. ಪ್ರತಿನಿತ್ಯ ಯೋಗ ಮಾಡುವುದರ ಜೊತೆಗೆ ದಾವಣಗೆರೆಯ ಸಾವಿರಾರು ಜನರಿಗೆ ಯೋಗ ಕಲಿಸಿ, ಆರೋಗ್ಯ ಹಾಗೂ ಶಾಂತಿಯುತ ಜೀವನಕ್ಕೆ ದಾರಿ ತೋರಿದರು. ಅವರ ಶಿಷ್ಯರು ಕೂಡಾ ಅವರ ಮಾರ್ಗದಲ್ಲಿ ನಡೆಯುತ್ತಿದ್ದಾರೆ ಎಂದರು.ಮನುಕುಲದ ಶಾಂತಿಗೆ ಯೋಗ ಒಂದೆ ಮಾರ್ಗವಾಗಿದೆ. ದೇಶದಲ್ಲಿ, ವಿಶ್ವದಲ್ಲಿ ಶಾಂತಿ ನೆಲೆಸಲು ಪ್ರತಿ ಯೊಬ್ಬರೂ ಯೋಗ ಮಾಡುವುದು ಅವಶ್ಯ. ಯೋಗ ಮಾಡುವುದರಿಂದ ಯಾವುದೇ ರೀತಿಯ ಕುಟುಂಬದ ಕಲಹ ಇರುವುದಿಲ್ಲ. ಶಾಂತಿ ನೆಮ್ಮದಿ ಇರುತ್ತದೆ. ಉತ್ತಮವಾದ ಅರೋಗ್ಯವೂ ನಮ್ಮದಾಗುತ್ತದೆ ಎಂದರು.ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿನಿತ್ಯ ಯೋಗಾಭ್ಯಾಸ ಮಾಡುತ್ತಾರೆ.‌ ಇದರಿಂದಲೇ ಅವರು ದಿನದ ಎಲ್ಲಾ ಕಾರ್ಯಗಳನ್ನು ಮಾಡಲು ಸಾಧ್ಯವಾಗಿದೆ. ಯೋಗ ಮಾಡುವುದರಿಂದ ನಾವು ಕೈಗೊಂಡ ಕೆಲಸ ಕಾರ್ಯ ಗಳು ಸುಲಲಿತ ವಾಗಿ ನಡೆಯುತ್ತವೆ. ಯೋಗ ಎಲ್ಲವನ್ನೂ ಕೂಡಿಸುತ್ತದೆ ಎಂದರು.ಹಿರಿಯ ಯೋಗ ಸಾಧಕ ಶರಣಾರ್ಥಿ ಬಕ್ಕಪ್ಪ ಅವರು ಮಾತನಾಡಿ, ದಕ್ಷಿಣ ಭಾರತದಲ್ಲಿ ರಾಘವೇಂದ್ರ ಗುರೂಜಿ ಅವರು ಯೋಗದ ಬಗ್ಗೆ ಪ್ರಚಾರ ಮಾಡಿದಂತೆ ವಿಠ್ಠಲ ದಾಸ್ ಶಣೈ ಅವರು ದಾವಣಗೆರೆ ಮಹಾನಗರದಲ್ಲಿ ಪ್ರಚಾರ ಮಾಡಿದರು. ಇಂದು ಅವರ ನೂರಾರು ಶಿಷ್ಯರು ಅವರ ಮಾರ್ಗದಲ್ಲಿ ನಡೆಯುತ್ತಿದ್ದಾರೆ ಎಂದರು.ಶ್ರೀ ಜಯದೇವ ಯೋಗ ಕೇಂದ್ರದ  ಎಲ್ಲಾ ಸದಸ್ಯರು ಮತ್ತು ಹಿರಿಯರಾದ ವಿಜಯಕುಮಾರ್,  ವೀರಣ್ಣ, ಸುಮಿತ್ರಮ್ಮ, ಮಹಾಂತೇಶ ಅವರು ಮಾತನಾಡಿದರು.ಶ್ರೀ ಅಮೃತೇಶ್ವರಿ ಅಷ್ಟಾಂಗ ಯೋಗ ಕೇಂದ್ರದ ಸದಸ್ಯರು ಉಪಸ್ಥಿತರಿದ್ದರು.