ಮನುಕುಲದ ಉದ್ದಾರವೇ ಮಹಾತ್ಮರ ಉದ್ದೇಶ : ಹಾವಗಿಲಿಂಗೇಶ್ವರಸ್ವಾಮಿ

ಭಾಲ್ಕಿ: ಜು.24:ಸಂತರು, ಶರಣರು, ಮಹಾತ್ಮರು ತಮ್ಮ ಬದುಕನ್ನು ಮನುಕುಲದ ಉದ್ಧಾರಕ್ಕೆ ಸಮರ್ಪಿಸುತ್ತಾರೆ ಎಂದು ರಾಚೋಟೇಶ್ವರ ಮಠದ ಪೀಠಾಧಿಪತಿ ಶ್ರೀ ಹಾವಗಿಲಿಂಗೆಶ್ವರ ಸ್ವಾಮೀಜಿ ಹೇಳಿದರು.

ತಾಲೂಕಿನ ಹಲಬರ್ಗಾ ಗ್ರಾಮದ ಶ್ರೀ ರಾಚೋಟೇಶ್ವರ ಮಠದಲ್ಲಿ, ತುಮಕೂರಿನ ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ ಅವರ 60ನೇ ಜನ್ಮದಿನ ನಿಮಿತ್ಯ ಆಯೋಜಿಸಿದ್ದ ಸಸಿ ನೆಡುವ ಹಾಗು ಬಡಮಕ್ಕಳಿಗೆ ಪುಸ್ತಕ ವಿತರಣೆ ಕಾರ್ಯಕ್ರಮದ ಸಾನಿಧ್ಯವಹಿಸಿ ಅವರು ಮಾತನಾಡಿದರು. ನಡೆದಾಡುವ ದೇವರಾಗಿದ್ದ ಡಾ| ಶಿವಕುಮಾರ ಸ್ವಾಮೀಜಿ ತಮ್ಮ ಬದುಕಿನುದ್ದಕ್ಕೂ ದೀನ, ದಲಿತರ, ಬಡವರ, ನಿರ್ಗತಿಕರ, ಅನಾಥರಿಗೆ ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಮೇಲೆತ್ತಲು ಶ್ರಮಿಸಿದ್ದರು. ಸರ್ಕಾರಗಳು ಮಾಡದಂತಹ ಕಾರ್ಯಗಳನ್ನು ಅವರು ಮಾಡಿದರು. ಅವರ ಹೆಜ್ಜೆಯಲ್ಲಿಯೇ ಹೆಜ್ಜೆಯನ್ನಿಟ್ಟುಕೊಂಡು ಕಾರ್ಯ ನಿರ್ವಹಿಸುತ್ತಿರುವ ಈಗಿನ ಪೀಠಾಧ್ಯಕ್ಷರಾದ ಸಿದ್ದಲಿಂಗ ಸ್ವಾಮೀಜಿಯವರ ಕಾರ್ಯಗಳೂ ಇತರರಿಗೆ ಮಾದರಿಯಾಗಿವೆ ಎಂದು ಹೇಳಿದರು.

ಶಾಂತಿವರ್ಧಕ ಶಿಕ್ಷನ ಸಂಸ್ಥೆಯ ಕಾರ್ಯದರ್ಶಿ ಸಾಗರ ಈಶ್ವರ ಖಂಡ್ರೆ ಮಾತನಾಡಿ, ಸಮಾಜದ ಎಲ್ಲಾ ಸಮಸ್ಯಗಳಿಗೆ ಶಿಕ್ಷಣದಲ್ಲಿ ಪರಿಹಾರ ಇದೆ. ಹೀಗಾಗಿ ಪ್ರತಿಯೊಬ್ಬರೂ ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು ಎಂದು ಹೇಳಿದರು.

ಸಿದ್ದಗಂಗಾ ಮಠದ ಹಳೆಯ ವಿದ್ಯಾರ್ಥಿಗಳು ಹಾಗು ಹಿತೈಷಿಗಳ ಸಂಘದ ಜಿಲ್ಲಾಧ್ಯಕ್ಷ ಶಿವಕುಮಾರ ಪಾಟೀಲ ಮಾತನಾಡಿ, ಸಿದ್ದಗಂಗಾ ಮಠ ನನ್ನಂತಹ ಸಾವಿರಾರು ಯುವಕರ ಬಾಳು ಬೆಳಗಿದ ಪುಣ್ಯಕ್ಷೇತ್ರವಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಪಿಡಿಓ ಚಂದ್ರಕಾಮತ ಫುಲೆ, ಶಿವರಾಜ ಖಳ್ಳೂರೆ, ಮಹೇಶ ಪಾಟೀಲ, ಗ್ರಾ.ಪಂ. ಸದಸ್ಯ ಶೋಭಾವತಿ ಶ್ರೀಮಾಳೆ, ಪದ್ಮಿನಿಬಾಯಿ ಠಾಕುರ, ಸಿದ್ದಗಂಗಾ ಮಠದ ಹಳೆಯ ವಿದ್ಯಾರ್ಥಿಗಳಾದ ಸೋಮನಾಥ ತುಗಶೆಟ್ಟೆ, ರಾಜು ಕುಂಬಾರ, ಈಶ್ವರ ರುಮ್ಮಾ, ಅಮರ ಹರಪಳ್ಳೆ ಉಪಸ್ಥಿತರಿದ್ದರು.